ಉಡುಪಿ: ದಿನಾಂಕ:08-07-2024(ಹಾಯ್ ಉಡುಪಿ ನ್ಯೂಸ್) ಉಡುಪಿಯಲ್ಲಿ ನೆರೆ ಬಂದರೂ ಅಂಬಲಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬರಗಾಲ ಬಂದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಳ್ಳಿಯಲ್ಲಿ ಕುಡಿಯುವ ನೀರು ಬಾರದೆ ಇಂದಿಗೆ 5 ದಿವಸವಾದರೂ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಅಂಬಲಪಾಡಿ ಪಂಚಾಯತ್ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನೀರು ಬಿಡುವ ಸಿಬ್ಬಂದಿ ಯಲ್ಲಿ ಕೇಳಿದರೆ ಎಲ್ಲೋ ಪೈಪ್ ತುಂಡಾಗಿರಬೇಕು ಎನ್ನುವ ಉಡಾಫೆಯ ಉತ್ತರ ಸಿಗುತ್ತಿದೆ , ಪಂಚಾಯತ್ ಸದಸ್ಯರಿಗೆ ಏನಾಗಿದೆ ಅನ್ನುವುದೇ ಗೊತ್ತಿಲ್ಲ.
ಅಂಬಲಪಾಡಿ ಗ್ರಾಮ ಪಂಚಾಯತ್ ಪಿಡಿಓ ಎಂಬ ಸರಕಾರಿ ಅಧಿಕಾರಿಯಲ್ಲಿ ಮಾತಾಡುವುದೇ ವೇಷ್ಟ್ ಎಂಬಂತಾಗಿದೆ ಎಂದು ದೂರಿದ್ದಾರೆ. ಪಿಡಿಓ ಬಳಿ ಯಾವಾಗ ಸಮಸ್ಯೆ ತಗೊಂಡು ಹೋದರೂ ಸಿಡುಕಿನಲ್ಲೇ ಉತ್ತರಿಸುವ ಪಿಡಿಓ ತಾವು ಜನ ಸೇವಕರು ಎನ್ನುವುದನ್ನು ಮರೆತಂತಿದೆ .ನೀರಿನ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗುತ್ತಿದೆಯಾ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುವುದು ಪಿಡಿಓ ಅವರ ಜವಾಬ್ದಾರಿಯಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯಲ್ಲಿ ಕೂಡಲೇ ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.