ಉಡುಪಿ : ದಿನಾಂಕ : 29-06-2024 (ಹಾಯ್ ಉಡುಪಿ ನ್ಯೂಸ್)
‘ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ’ ಚಳುವಳಿ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕವು ಜುಲೈ 1 ರಂದು ನಗರದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 2:00 ರವರೆಗೆ ಧರಣಿ ನಡೆಸಿ ಸಿಎಂಗೆ ಬರೆದ ಮನವಿ ಪತ್ರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ತಿಳಿಸಿದ್ದಾರೆ.
ಕರ್ನಾಟಕದ ಎಲ್ಲಾ ಬಗೆಯ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಸಿಂಹ ಪಾಲು ಇರಬೇಕು ಎನ್ನುವುದು ಕನ್ನಡಿಗರ ಬೇಡಿಕೆಯಾಗಿದೆ. ಡಾ. ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಯಾಗಿಲ್ಲ. ಹೊರ ರಾಜ್ಯದವರು ಕನ್ನಡಿಗರ ಉದ್ಯೋಗ ಕಿತ್ತುಕೊಳ್ಳುತ್ತಿದ್ದು, ಕನ್ನಡಿಗರು ತಮ್ಮ ನೆಲದಲ್ಲೇ ನಿರುದ್ಯೋಗಿಗಳಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕನ್ನಡಿಗರ ಮಕ್ಕಳಿಗೆ ಉದ್ಯೋಗದಲ್ಲಿ ಮೀಸಲಾತಿಗಾಗಿ ವೇದಿಕೆಯ ರಾಜ್ಯ ಅಧ್ಯಕ್ಷರವರಾದ ಟಿ.ಎ.ನಾರಾಯಣ ಗೌಡರ ನೇತೃತ್ವದಲ್ಲಿ 2 ದಶಕದಿಂದ ಹೋರಾಟ ನಡೆಸುತ್ತ ಬರಲಾಗುತ್ತಿದೆ. ಇದೀಗ ಚಳವಳಿ ನಡೆಸಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಖಾಸಗಿ ಸಂಸ್ಥೆಗಳ ಸಿ ಮತ್ತು ಡಿ ದರ್ಜೆಯ ಶೇ.100ರಷ್ಟು ಹುದ್ದೆ, ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎಂಬಿತ್ಯಾದಿಗಳು ವೇದಿಕೆಯ ಬೇಡಿಕೆಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಂಘಟನೆಯ ವೇದಿಕೆಯ ಅಧ್ಯಕ್ಷರು ಕಾರ್ಯಕರ್ತರು, ನಿರುದ್ಯೋಗಿಗಳು ಹಾಗೂ ಕನ್ನಡಿಗರು ಧರಣಿ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.