ಯಾರಿಗೂ ಸೇರದ ಜಾಗ
ಯಾರಿಗೂ ಸೇರದ ಜಾಗ, ( ನೋ ಮ್ಯಾನ್ಸ್ ಲ್ಯಾಂಡ್ ) ಒಂದು ಭೂಪ್ರದೇಶದ ಕೆಲವು ಜಾಗಗಳನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಆ ಜಾಗ ಯಾರಿಗೂ ಸೇರಿರುವುದಿಲ್ಲ ಯಾರ ಅಧಿಪತ್ಯಕ್ಕೂ ಒಳಪಟ್ಟಿರುವುದಿಲ್ಲ. ಅದೊಂದು ಸ್ವತಂತ್ರ ಪ್ರದೇಶವಾಗಿರುತ್ತದೆ…..
ಕೆಲವೊಮ್ಮೆ ವಿವಾದಾತ್ಮಕ ಜಾಗವನ್ನು ಸಹ ಈ ರೀತಿಯಲ್ಲಿ ಕರೆಯಲಾಗುತ್ತದೆ. ಅದನ್ನು ತಟಸ್ಥ ಸ್ಥಳವೆಂದು ನಿರ್ಧರಿಸಲಾಗುತ್ತದೆ…….
ಹಾಗೆಯೇ ನಮ್ಮ ಮನಸ್ಸಿನಲ್ಲಿ ಒಂದು ಸ್ವತಂತ್ರ ಜಾಗವನ್ನು ಸದಾ ಮುಕ್ತವಾಗಿ ಇಟ್ಟಿರಬೇಕಾಗುತ್ತದೆ. ಈ ಆಧುನಿಕ ಸಂಕೀರ್ಣ ವ್ಯವಸ್ಥೆಯಲ್ಲಿ ಸಮಚಿತ್ತತೆಯಿಂದ, ಸಮಷ್ಟಿ ಪ್ರಜ್ಞೆಯಿಂದ, ಸ್ಥಿತಪ್ರಜ್ಞತೆಯಿಂದ ವಿಷಯಗಳನ್ನು ಗ್ರಹಿಸಬೇಕು
ಅದು ಯಾವುದೇ ಅಥವಾ ಯಾರದೇ ವಿಷಯವಾಗಿರಲಿ…..
ಹರಿಯಲು ಬಿಡಿ ಮನಸ್ಸನ್ನು
ಭೂಮಿ, ಆಕಾಶ, ಪಾತಾಳದವರೆಗೂ,….
ವಿಹರಿಸಲು ಬಿಡಿ ಮನಸ್ಸನ್ನು
ನೀರು, ಗಾಳಿ, ಬೆಳಕಿನಾಳದಲ್ಲೂ,……
ಅಲೆದಾಡಿಸಿ ಮನಸ್ಸನ್ನು
ಕಾಡು, ಪರ್ವತ, ಬೆಟ್ಟ ಗುಡ್ಡಗಳಲ್ಲೂ…….,
ಸುತ್ತಾಡಿಸಿ ಮನಸ್ಸನ್ನು
ಸೃಷ್ಟಿಯ ಮೂಲೆ ಮೂಲೆಗೂ,….
ಆಗ ನಿಮಗೆ ಸಿಗುವ ಗ್ರಹಿಕೆಯೊಂದಿಗೆ
ಒಳ ಹೊಕ್ಕಿ ನೋಡಿ,…..
ಧರ್ಮ ರಕ್ಷಿಸುತ್ತೇವೆ ಎಂದು ಹೇಳುವವರನ್ನು,
ಧರ್ಮ ವಿರೋಧಿಸುತ್ತೇವೆ ಎಂದು ವಾದಿಸುವವರನ್ನು,
ಆಸ್ತಿಕರ ನಂಬಿಕೆಯನ್ನು,
ನಾಸ್ತಿಕರ ವೈಚಾರಿಕತೆಯನ್ನು,
ಕೊಲೆ ಮಾಡುವವರ ಮನೋಭಾವವನ್ನು,
ಕೊಲೆಯಾಗುವವರ ಯಾತನೆಯನ್ನು,
ಅತ್ಯಾಚಾರಿಗಳ ಮನೋವ್ಯೆಕಲ್ಯತೆಯನ್ನು,
ನತದೃಷ್ಟೆಯರ ವೇದನೆಯನ್ನು,
ವೇದ, ಮಂತ್ರ ಪಠಿಸುವವರನ್ನು,
ಮೋಸ ಸುಲಿಗೆಯ ವಂಚಕರನ್ನು,
ಮೀಸಲಾತಿ ಪಡೆಯುವವರನ್ನು,
ಮೀಸಲಾತಿ ವಿರೋಧಿಸುವವರನ್ನು,
ಪೂಜಾರಿ, ಮೌಲ್ವಿ, ಫಾದರ್, ಮಠಾದೀಶರುಗಳ ಮನಸ್ಥಿತಿಯನ್ನು,
ಅದನ್ನು ಕೇಳಿ ಆನಂದಿಸುವ ಜನರನ್ನು,
ಅದನ್ನು ದ್ವೇಷಿಸುವ ವ್ಯಕ್ತಿಗಳನ್ನು,
ವ್ಯೆಚಾರಿಕ ಮನೋಭಾವದವರನ್ನು,
ಬುದ್ದಿ ಜೀವಿಗಳನ್ನು,
ರಾಜಕಾರಣಿಗಳನ್ನು, ಮತದಾರರನ್ನು,
ಅಧಿಕಾರಿಗಳನ್ನು,
ಸೇವಕರನ್ನು,
ಬಡವ, ಶ್ರೀಮಂತ, ದರಿದ್ರರನ್ನು,
ನಿರ್ಲಿಪ್ತರನ್ನು, ಆಕ್ರಮಣಕಾರಿಗಳನ್ನು,
ಸ್ವಾತಂತ್ರ್ಯ ಜೀವಿಗಳನ್ನು, ಸ್ವೇಚ್ಚಾಚಾರಿ ಮನೋಭಾವದವರನ್ನು,
ಆಳ ಚಿಂತಕರನ್ನು,
ಉಢಾಪೆ ಮನಸ್ಥಿತಿಯವರನ್ನು,
ಆಗ ಸಿಗಬಹುದು ನಿಮಗೆ ಪ್ರಬುದ್ಧತೆ.
ಅಲ್ಲಿಂದ ಮುಂದೆ …
ನಿಮ್ಮ ಮನಸ್ಸಿನಾಳಕ್ಕೆ ಪ್ರವೇಶಿಸಿ,
ಪ್ರೀತಿ, ದ್ವೇಷ, ಕ್ರೌರ್ಯ, ಕರುಣೆ, ಕಷ್ಟ ಸುಖಗಳನ್ನೂ ಮೀರಿ,
ನವರಸಗಳನ್ನು ಅನುಭವಿಸಿ.
360 ಡಿಗ್ರಿ ಕೋನದಲ್ಲಿ ಆಲೋಚಿಸಿ,
ಅರಿಷಡ್ವರ್ಗಗಳನ್ನು ನಿಯಂತ್ರಿಸಿ,
ಎಲ್ಲವೂ ಅದ ಮೇಲೆ ವಾಸ್ತವ ಲೋಕಕ್ಕೆ ಮರಳಿ,
ಈಗ ಜ್ಞಾನದ ಮೊದಲ ಮೆಟ್ಟಿಲ ಮೇಲಿದ್ದೀರಿ ಅಷ್ಟೇ…
ಸಾಯುವವರೆಗಿನ ನಿಮ್ಮ ಮುಂದಿನ ಬದುಕೇ ವಾಸ್ತವ,
ಸಹಜತೆಯೇ ಸೃಷ್ಟಿಯ ಸತ್ಯ.
ನಾನು, ನೀವು, ಎಲ್ಲರೂ ಅದರ ಅಣುಗಳು ಮಾತ್ರ…..
ಯಾರೋ ಬರೆದ, ಯಾರೋ ಹೇಳಿದ ವಿಷಯಗಳಿಗಿಂತ ನಿಮ್ಮ ಸ್ವಂತ ಅಭಿಪ್ರಾಯವೇ ನಿಮ್ಮನ್ನು ರೂಪಿಸುತ್ತದೆ……
ನಿಮ್ಮ ಮೆದುಳಿನ ಗ್ರಹಿಕೆಯೇ ನಿಮಗೆ ಮಾರ್ಗದರ್ಶನ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ.
9844013068…….