ಮಲ್ಪೆ: ದಿನಾಂಕ:26-05-2024(ಹಾಯ್ ಉಡುಪಿ ನ್ಯೂಸ್) ಮೀನುಗಾರಿಕೆ ಬಂದರಿನಲ್ಲಿ ಬೋಟಿನ ಕಾರ್ಮಿಕ ನೋರ್ವ ಸಹ ಕಾರ್ಮಿಕನಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಕನ್ನಡ ,ಭಟ್ಕಳ ನಿವಾಸಿ ರಮೇಶ ಎಂಬವರು ಸುಮಾರು 15 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ನವಂಬರ್ 2023 ರಿಂದ ಮಲ್ಪೆಯ ಆಶ್ವಥ್, ಸುರೇಶ್, ರಾಜೇಶ್ ಎಂಬವರ ಪಾಲುದಾರಿಕೆಯ ದೇವಿ ಸನ್ನಿಧಿ ಬೋಟ್ ನಲ್ಲಿ ಕಲಾಸಿಯಾಗಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 24/05/2024 ರಂದು ರಮೇಶ ರವರು ಕೆಲಸ ಮಾಡಿಕೊಂಡಿದ್ದ ಬೋಟ್ ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ಬಂದಿದ್ದು, ದಿನಾಂಕ 25/05/2024 ರಂದು ಬೆಳಗ್ಗೆ ಬೋಟ್ ನಲ್ಲಿದ್ದ ಮೀನನ್ನು ಖಾಲಿ ಮಾಡಿ ಬೋಟನ್ನು ಮಲ್ಪೆ ಬಂದರಿನ ಸೂಫಿ ಧಕ್ಕೆಯಲ್ಲಿ ನಿಲ್ಲಿಸಿದ್ದು, ಬೋಟಿನಲ್ಲಿ ರಮೇಶರವರು ಹಾಗೂ ಕಲಾಸಿಗಳಾದ ಶ್ರೀಧರ್ , ನಾಗರಾಜ, ಗಣಪತಿ, ನಾಲ್ಕು ಜನ ಮಾತ್ರ ಇದ್ದು, ಬೋಟ್ ನಲ್ಲಿದ್ದ ಇತರ ಮೀನುಗಾರರು ಹೊರಗೆ ಹೋಗಿರುತ್ತಾರೆ ಎನ್ನಲಾಗಿದೆ .
ಬೋಟಿನಲ್ಲಿ ಸಾಂಬಾರಿಗೆ ಮೀನು ಇಟ್ಟಿರದ ವಿಚಾರದಲ್ಲಿ ಶ್ರೀಧರ್, ನಾಗರಾಜನಿಗೆ ಬೈದಿರುತ್ತಾನೆ ಎನ್ನಲಾಗಿದೆ .ರಾತ್ರಿ 07:30 ಗಂಟೆ ಸಮಯಕ್ಕೆ ಶ್ರೀಧರ್, ನಾಗರಾಜ, ಗಣಪತಿ ಹಾಗೂ ರಮೇಶರವರು ಮಲ್ಪೆಯ ಸೂಫಿ ಧಕ್ಕೆಯಲ್ಲಿರುವಾಗ ಪುನಃ ನಾಗರಾಜ ಹಾಗೂ ಶ್ರೀಧರ್‌ನಿಗೆ ಜಗಳವಾಗಿ ನಾಗರಾಜನು ಬೋಟ್ ನಲ್ಲಿದ್ದ ಒಂದು ಚೂರಿಯನ್ನು ಹಿಡಿದುಕೊಂಡು ಬಂದು ಶ್ರೀಧರ್ ನನ್ನು ಅಡ್ಡಗಟ್ಟಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಆತನ ಎಡಬದಿಯ ಸೊಂಟದ ಹಿಂಬದಿಗೆ, ಕುತ್ತಿಗೆಯ ಹಿಂಭಾಗಕ್ಕೆ, ಬಲಬದಿಯ ಪಕ್ಕೆಲುಬಿನ ಕೆಳಗೆ ಚೂರಿಯಿಂದ ಬಲವಾಗಿ ತಿವಿದಿರುತ್ತಾನೆ ಎನ್ನಲಾಗಿದೆ.
ಶ್ರೀಧರ ನಿಗೆ ರಕ್ತ ಸಿಕ್ತ ಗಾಯವಾಗಿದ್ದು, ಆತನು ಧರಿಸಿದ ಬಟ್ಟೆ ರಕ್ತ ಸಿಕ್ತವಾಗಿರುತ್ತದೆ ಎಂದು ರಮೇಶರವರು ಪೊಲೀಸರಿಗೆ ದೂರಿದ್ದಾರೆ.ಗಾಯಗೊಂಡ ಶ್ರೀಧರನನ್ನು ರಮೇಶರವರು ಹಾಗೂ ಬೋಟಿನ ತಾಂಡೇಲಾ ಸುರೇಶ್ ಅವರು ಒಂದು ಅಟೋ ರಿಕ್ಷಾದಲ್ಲಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ:341,324,307 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.