ಶಂಕರನಾರಾಯಣ: ದಿನಾಂಕ: 16-05-2024 (ಹಾಯ್ ಉಡುಪಿ ನ್ಯೂಸ್) ವರದಕ್ಷಿಣೆ ಯಾಗಿ ಅಧಿಕ ಚಿನ್ನ ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಗಂಡನೋರ್ವ ಮನೆಯವರೊಂದಿಗೆ ಸೇರಿ ಕೊಂಡು ಹೆಂಡತಿಯನ್ನು ಮಾನಸಿಕವಾಗಿ, ದೈಹಿಕವಾಗಿ ಗಂಭೀರ ಹಲ್ಲೆ ಗೈದು ಕೊನೆಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂದಾಪುರ ನಿವಾಸಿ ಅಮ್ರತ (31) ಅವರು ದಿನಾಂಕ 14/12/2022 ರಂದು ಸುಶಾಂತ್ ಎಂಬುವವರೊಂದಿಗೆ ಹಾಲಾಡಿಯ ಸಭಾಭವನದಲ್ಲಿ ಗುರು ಹಿರಿಯರ ಮತ್ತು ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದು ಮದುವೆಯ ಖರ್ಚು ಮತ್ತು ಅರತಕ್ಷತೆಯ ಖರ್ಚು ಎಲ್ಲವನ್ನೂ ಅಮ್ರತ ರವರ ಮನೆಯವರು ಭರಿಸಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆಯ ಎಲ್ಲಾ ಶಾಸ್ತ್ರ ಮುಗಿಸಿ ದಿನಾಂಕ 17/12/2022 ರಂದು ಅಮ್ರತ ರವರ ಮನೆಗೆ ಅಪಾದಿತ ಗಂಡನಾದ ಸುಶಾಂತ್ ಬಂದಿದ್ದು ಅಗ ಮದುವೆಯ ಸಮಯ ಅಮ್ರತರವರಿಗೆ ಹಾಕಿದ ಚಿನ್ನ ಸಾಕಾಗಲಿಲ್ಲ ಎಂದು ಕಡಿಮೆ ಬೆಲೆಯ ಚಿನ್ನ ಹಾಕಿದ್ದೀರಿ, ಹಾಕಿದ ಚಿನ್ನ ಸಾಕಾಗಲಿಲ್ಲ ಸಾಕಷ್ಟು ಚಿನ್ನ ನೀಡಲಿಲ್ಲ ನನ್ನ ಘನತೆಗೆ ತಕ್ಕಂತೆ ವರದಕ್ಷಿಣೆ ನೀಡಿರುವುದಿಲ್ಲ ನಾನು ಮುಂಬೈಗೆ ತೆರಳುವ ಮುನ್ನ ಒಂದು ಲಕ್ಷ ಹಾಗೂ ಚಿನ್ನ ನೀಡಬೇಕೆಂದು ಗಲಾಟೆ ಮಾಡಿದ್ದು ಅಲ್ಲದೆ ಮದುವೆಯ ಸಮಯದಲ್ಲಿ ಬಂದ ಊಡುಗೊರೆ ಮತ್ತು ಹಣ ನನಗೆ ನೀಡಬೇಕೆಂದು ಗಲಾಟೆ ಮಾಡಿರುತ್ತಾನೆ ಎಂದು ದೂರಿದ್ದಾರೆ.
ದಿನಾಂಕ 26/12/2022 ರಂದು ಅಮ್ರತ ರವರನ್ನು ಮುಂಬೈಗೆ ಕರೆದು ಕೊಂಡು ಹೋಗುವಾಗ ಒಂದು ತಿಂಗಳು ಕಲಾವಕಾಶ ಕೊಡುತ್ತೇನೆ ಅದರ ಒಳಗೆ ಚಿನ್ನ ಮತ್ತು ಹಣದ ವ್ಯವಸ್ಥೆ ಮಾಡಬೇಕೆಂದು ಹೇಳಿ ದಿನಾಂಕ 11/01/2023 ರಂದು ಗಂಡನ ಮನೆಯವರಾದ ಅಪಾದಿತರಾದ ಸುಶಾಂತ ಸುರೇಂದ್ರ , ಪ್ರಭಾವತಿ ಇವರು ಅಮ್ರತ ರವರನ್ನು ಬಲವಂತವಾಗಿ ಬಟ್ಟೆಯಂಗಡಿಯ ಕೆಲಸಕ್ಕೆ ಸೇರಿಸಿ ನೀನು ಕೆಲಸಕ್ಕೆ ಹೋಗಬೇಕು ಹಣದ ಅವಶ್ಯಕತೆ ಇದೆ ,ನಿಮ್ಮ ಮನೆಯವರು ನಾವು ಕೇಳಿದಷ್ಟು ಹಣ, ಚಿನ್ನ ನೀಡಿರುವುದಿಲ್ಲ. ನೀನು ಬಟ್ಟೆ ಅಂಗಡಿಯಲ್ಲಿ ದುಡಿದು ನಮಗೆ ಹಣ ನೀಡಬೇಕೆಂದು ತಾಕಿತ್ತು ಮಾಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಮ್ರತ ರವರಿಗೆ ಅನಾರೋಗ್ಯದ ನಿಮಿತ್ತ ಕೆಲಸಕ್ಕೆ ಹೋಗದ ಕಾರಣ ದಿನಾಂಕ 17/02/2023 ರಂದು ಅಮ್ರತ ರವರನ್ನು ಮುಂಬೈಯಿಂದ ಅವರ ತಾಯಿ ಮನೆಗೆ ಶಶಿಕಲಾ ಎಂಬವರೊಂದಿಗೆ ಕಳುಹಿಸಿ ಕೊಟ್ಟಿರುತ್ತಾನೆ ಎಂದಿದ್ದಾರೆ .ಅಲ್ಲದೆ ದಿನಾಂಕ 26/03/2023 ರಂದು 40 ಗ್ರಾಂ ಚಿನ್ನವನ್ನು ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ಅಮ್ರತ ರವರ ಮಾವ ಸುರೇಂದ್ರ ರವರಿಗೆ ನೀಡಿದ್ದು ದಿನಾಂಕ 28/03/2023 ರಂದು ತಂದ ಚಿನ್ನ ಕಡಿಮೆಯಾಗಿದೆ ಎಂದು ಸುಶಾಂತ್ ಅಮ್ರತರವರಿಗೆ ಕಾಲಿನಿಂದ ತುಳಿದು, ಸುರೇಂದ್ರ ಅಮ್ರತ ರವರನ್ನು ಎಳೆದುಕೊಂಡು ಹೋಗಿ ಗೋಡೆಗೆ ತಲೆಯನ್ನು ಜಜ್ಜಿರುತ್ತಾರೆ ಎಂದು ದೂರಿದ್ದಾರೆ.
ಅಮ್ರತ ರವರು ತಲೆಗೆ ಪೆಟ್ಟಾದ ಬಗ್ಗೆ ವೇದಾಂತ ಅಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ ಎಂದಿದ್ದಾರೆ. ದಿನಾಂಕ 17/05/2023 ರಂದು ಅಮ್ರತ ರವರು ಅರೋಗ್ಯ ಸರಿ ಇಲ್ಲದೆ ಮಲಗಿಕೊಂಡಿದ್ದಾಗ ಗಂಡ ಸುಶಾಂತನ ಅಕ್ಕ ಶಶಿಕಲಾ ಹಾಗೂ ಅವರ ಅಪ್ಪ ಸುರೇಂದ್ರ ನೀನು ಬದುಕುವುದಕ್ಕಿಂತ ಆತ್ಮ ಹತ್ಯೆ ಮಾಡಿಕೊಂಡು ಸಾಯುವುದು ಮೇಲು ಎಂದು ಹೇಳಿ ಮಾನಸಿಕ ಹಿಂಸೆ ನೀಡಿದ್ದರು ಎಂದಿದ್ದಾರೆ .
ದಿನಾಂಕ 25/06/2023 ರಂದು ರಾತ್ರಿ ಅಮ್ರತ ರವರಿಗೆ ಗಂಡನು ಮೊಬೈಲ್ ನಿಂದ ಮುಖಕ್ಕೆ ಹೊಡೆದು ತಲೆಗೆ ಕೈ ಹಾಕಿ ಗೋಡೆಗೆ ಜಜ್ಜಿ ಜೀವ ಬೆದರಿಕೆ ಹಾಕಿದಾಗ ಅಮ್ರತರವರು ಜೀವ ಭಯದಿಂದ ಕೈ ತಪ್ಪಿಸಿಕೊಂಡು ಪಕ್ಕದ ಮನೆಯಲ್ಲಿ ಇರುವ ಗಂಡನ ಚಿಕ್ಕಮ್ಮನ ಮನೆಗೆ ಹೋಗಿ ಅಲ್ಲಿ ಮಂದಾರ ಅವರ ಜೊತೆಯಲ್ಲಿ ಗುರು ಕೃಪಾ ಅಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗಂಡನ ಮನೆಯ ಅಪಾದಿತರು ಎಲ್ಲರೂ ಒಟ್ಟಾಗಿ ಸೇರಿ ಅಮ್ರತ ರವರಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ಹಣ ಚಿನ್ನಾಭರಣ ತರುವಂತೆ ಮಾನಸಿಕ ದೈಹಿಕ ಹಿಂಸೆ ನೀಡಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂದು ಅಮ್ರತ ರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 498(A), 504, 506 323 ಜೊತೆಗೆ 34 ಐಪಿಸಿ Sec 3, 4 & 6 DP Act ರಂತೆ ಪ್ರಕರಣ ದಾಖಲಾಗಿದೆ.