- ಕೋಟ: ದಿನಾಂಕ :01-04-2024( ಹಾಯ್ ಉಡುಪಿ ನ್ಯೂಸ್) ಶಿರಿಯಾರ ಗ್ರಾಮದಲ್ಲಿರುವ ರೈಸ್ ಮಿಲ್ ಒಂದರಲ್ಲಿ ಅಕ್ರಮವಾಗಿ ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ದಾಸ್ತಾನು ಇರಿಸಿರುವುದನ್ನು ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರಾದ ಶಿವರಾಜ ಕಾಟಗಿ ಅವರು ಹಿರಿಯ ಅಧಿಕಾರಿಗಳ ಸಹಾಯದಿಂದ ಪತ್ತೆ ಮಾಡಿ ದೂರು ದಾಖಲಿಸಿದ್ದಾರೆ.
- ಬ್ರಹ್ಮಾವರ ತಾಲೂಕು ಆಹಾರ ನಿರೀಕ್ಷಕರಾದ ಶಿವರಾಜ ಕಾಟಗಿ (34) ಅವರು ದಿನಾಂಕ 31/03/2024 ರಂದು ಮೇಲಾಧಿಕಾರಿಯವರ ಸೂಚನೆಯಂತೆ ಶಿರಿಯಾರ ಗ್ರಾಮದಲ್ಲಿರುವ ದೇವ ರೈಸ್ ಇಂಡಸ್ಟ್ರೀಸ್ ಗೆ ಭೇಟಿ ನೀಡಿ ಪರಿಶೀಲಿಸುತ್ತಿರುವಾಗ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ದಾಸ್ತಾನು ಇರಿಸಿರುವುದು ಕಂಡು ಬಂದಿದ್ದು, ಒಟ್ಟು 12 ಫಾಲಿಥಿನ್ ಚೀಲದಲ್ಲಿರುವ 5.40 ಕ್ವಿಂಟಾಲ್ ಅನ್ನ ಭಾಗ್ಯ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
- ಈ ದಾಸ್ತಾನುಗಳನ್ನು ಪರಿಶೀಲಿಸಿದಾಗ ಅಕ್ಕಿಯು ಸಾರ್ವಜನಿಕ ವಿತರಣಾ ಪದ್ದತಿಯಲ್ಲಿ ವಿತರಿಸಿರುವ ಪಡಿತರ ಅಕ್ಕಿಯನ್ನು ಹೋಲುತ್ತಿರುವುದು ಕಂಡು ಬಂದಿರುತ್ತದೆ ಎನ್ನಲಾಗಿದೆ .ಅಕ್ರಮವಾಗಿ ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಕೂಡಿಟ್ಟಿದ್ದು; ರೈಸ್ ಮಿಲ್ ನ ಮಾಲಕರಾದ ಅನಂತ ಎಂಬುವವರ ವಿರುದ್ದ ದೂರನ್ನು ನೀಡಿದ್ದಾರೆ.
- ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 3,5 ,6(A) 7 ಅಗತ್ಯ ವಸ್ತುಗಳ ಕಾಯ್ದೆ 1955 ಹಾಗೂ 3(2) 18 (1)ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣ ಪದ್ದತಿ (ನಿಯಂತ್ರಣ ) ಕಾಯ್ದೆ 2016 ರಂತೆ ಪ್ರಕರಣ ದಾಖಲಾಗಿದೆ.