ಕುಂದಾಪುರ: ದಿನಾಂಕ 11/03/2024 (ಹಾಯ್ ಉಡುಪಿ ನ್ಯೂಸ್) ಅಪರಾಧಿಯೋರ್ವನನ್ನು ಪೊಲೀಸರು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
ಕುಂದಾಪುರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಹರೀಶ್ ಅವರು ದಿನಾಂಕ :10-03-2024 ರಂದು ಠಾಣೆಯಲ್ಲಿ ಪ್ರಭಾರ ಕರ್ತವ್ಯದಲ್ಲಿದ್ದಾಗ ಕುಂದಾಪುರ ಪೊಲೀಸ್ ಠಾಣೆಯ ಪ್ರಕರಣ ಒಂದರಲ್ಲಿ ಆರೋಪಿತನಾಗಿರುವ ಮಂಜೂರ್ ಇಲಾಹಿದ್ ಎಂಬಾತನು ಕೋಟೇಶ್ವರದ ಕೋಸ್ಟಲ್ ಕ್ರೌನ್ ಕಟ್ಟಡದ ಹಿಂಬದಿಯಲ್ಲಿ ರಸ್ತೆ ಬದಿಯಲ್ಲಿ ಇರುವುದಾಗಿ ಗುಪ್ತ ಮಾಹಿತಿದಾರರಿಂದ ಹರೀಶ್ ರವರಿಗೆ ತಿಳಿದು ಬಂದಿದೆ ಎನ್ನಲಾಗಿದೆ .
ಕೂಡಲೇ ಠಾಣೆಯಲ್ಲಿದ್ದ ಸಿಬ್ಬಂದಿಯವರೊಂದಿಗೆ ಠಾಣೆಯಿಂದ ಹೊರಟು ಕೋಟೇಶ್ವರದ ಕೋಸ್ಟಲ್ ಕ್ರೌನ್ ಕಟ್ಟಡದ ಹಿಂಬದಿಗೆ ಹೋದಾಗ ಇಲಾಹಿದನು ಅಲ್ಲಿ ನಿಂತುಕೊಂಡಿದ್ದು, ಆತನಲ್ಲಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ, ಆಗ ಆತನು ಅಲ್ಲೇ ರಸ್ತೆ ಬದಿಯಲ್ಲಿದ್ದ ಒಂದು ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ಪೊಲೀಸರ ಮೈಮೇಲೆ ಬಿಸಾಡಿ ಜೀವಕ್ಕೆ ಅಪಾಯ ಮಾಡುವಂತೆ ವರ್ತಿಸಿ ಹತ್ಯೆ ಮಾಡುವ ಪ್ರಯತ್ನ ಮಾಡಿರುತ್ತಾನೆ ಎನ್ನಲಾಗಿದೆ .
ಹರೀಶ್ ರವರು ಬದಿಗೆ ಸರಿದು ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಂಡಿದ್ದು, ಬಳಿಕ ಆಪಾದಿತ ಮಂಜೂರ್ ಇಲಾಹಿದ್ ನನ್ನು ಹಿಡಿಯಲು ಮುಂದಾದಾಗ ಆತನು ಪೊಲೀಸ್ ಸಿಬ್ಬಂದಿಯವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಕೈಯಿಂದ ದೂಡಿ ಬಲ ಪ್ರಯೋಗ ಮಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾನೆ ಎನ್ನಲಾಗಿದೆ.
ಮಂಜೂರ್ ಇಲಾಹಿದ್ ನನ್ನು ಸಿಬ್ಬಂದಿಯವರ ಸಹಾಯದಿಂದ ಹರೀಶ್ ರವರು ಬಂಧಿಸಿ ವಶಕ್ಕೆ ಪಡೆದಿರುತ್ತಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 308, 504, 353 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.