ಬಾಂಬಿನ ಸ್ಪೋಟ ಮತ್ತು ಪಾಕಿಸ್ತಾನದ ಪರ ಘೋಷಣೆ…
ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿ ಬಂದ ಪಾಕಿಸ್ತಾನ ಪರ ಘೋಷಣೆ ಮತ್ತು ಬೆಂಗಳೂರಿನ ರಾಮೇಶ್ವರಂ ಹೋಟೆಲಿನಲ್ಲಿ ಸಿಡಿದ ಬಾಂಬು ಚರ್ಚೆಯ ವಿಷಯವೂ ಅಲ್ಲ, ಪರ ವಿರೋಧಗಳ ಮಾತುಕತೆಯೂ ಅಲ್ಲ, ಸಾರ್ವಜನಿಕರು ಹೆಚ್ಚು ಪ್ರತಿಕ್ರಿಯೆ ಕೊಡಬೇಕಾದ ಘಟನೆಯೂ ಅಲ್ಲ. ಏಕೆಂದರೆ ಇದು ಸಂಪೂರ್ಣವಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಷಯ ಹಾಗು ಕ್ರಿಮಿನಲ್ ಚಟುವಟಿಕೆ. ಪೊಲೀಸ್ ವ್ಯವಸ್ಥೆ ನಿಭಾಯಿಸಬೇಕಾದ ವಿಷಯ……
ಒಂದು ದೇಶದ ಅಭಿವೃದ್ಧಿಯ ಮೂಲಭೂತ ಅವಶ್ಯಕತೆ ಆದೇಶದ ಶಾಂತಿ ಮತ್ತು ಸುವ್ಯವಸ್ಥೆ. ಅದು ಕ್ರಮಬದ್ಧವಾಗಿ, ಸುರಕ್ಷಿತವಾಗಿ ಇದ್ದರೆ ಮಾತ್ರ ಉಳಿದೆಲ್ಲ ಅಭಿವೃದ್ಧಿಗಳು ಅದರ ಭಾಗವಾಗುತ್ತದೆ. ಆದ್ದರಿಂದ ಇಂತಹ ಘಟನೆಗಳಲ್ಲಿ ರಾಜಕಾರಣಿಗಳಾಗಲಿ, ಮಾಧ್ಯಮಗಳಾಗಲಿ, ಇತರೆ ಯಾರೇ ಸಾರ್ವಜನಿಕರಾಗಲಿ ಅತಿಯಾದ ಪ್ರತಿಕ್ರಿಯೆ ಒಳ್ಳೆಯದಲ್ಲ. ಹೌದು ಈ ರೀತಿಯ ಘಟನೆಗಳಲ್ಲಿ ಪೊಲೀಸ್ ವೈಫಲ್ಯ, ಗುಪ್ತಚರ ವೈಫಲ್ಯ ಅಥವಾ ಕಾನೂನಿನ ವೈಫಲ್ಯ ಅಥವಾ ರಾಜಕೀಯ ಪಕ್ಷಪಾತದ ಅನುಮಾನ ಕಂಡು ಬಂದರೆ ಆಗ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಆ ಗಂಭೀರತೆ ಘಟನೆಯ ಬಗ್ಗೆ ಅಲ್ಲ, ನಮ್ಮ ಪೊಲೀಸ್ ವ್ಯವಸ್ಥೆಯ ಬಗ್ಗೆ ಇರಬೇಕು….
ಸಾಮಾನ್ಯವಾಗಿ ಯಾವುದೇ ಮಾನಸಿಕ ಆರೋಗ್ಯವಂತ ವ್ಯಕ್ತಿ ವಿಧಾನಸೌಧದಂತ ಮುಖ್ಯಸ್ಥಳದಲ್ಲಿ, ಯಾವುದೇ ಪ್ರಚೋದನೆ ಇಲ್ಲದೆ ಪಾಕಿಸ್ತಾನ ಪರ ಘೋಷಣೆ ಕೂಗುವುದಿಲ್ಲ. ಒಂದು ವೇಳೆ ಆ ರೀತಿ ಕೂಗಿದ್ದರೆ ಆತ ಹುಚ್ಚನಾಗಿರಬೇಕು ಅಥವಾ ಪಾಕಿಸ್ತಾನದ ಏಜೆಂಟ್ ಆಗಿರಬೇಕು ಅಥವಾ ಯಾರದೋ ರಾಜಕೀಯ ಹುನ್ನಾರ ಆಗಿರಬೇಕು. ಸಾಮಾನ್ಯ ಪರಿಸ್ಥಿತಿಯಲ್ಲಿ ಅದನ್ನು ಕೂಗಲು ಸಾಧ್ಯವೇ ಇಲ್ಲ ಮತ್ತು ಒಂದು ವೇಳೆ ಅದು ದೃಢವಾದರೆ ಕಠಿಣ ಶಿಕ್ಷೆ ನೀಡಬೇಕು ಎಂಬುದರ ಬಗ್ಗೆ ಯಾರದು ಯಾವುದೇ ತಕರಾರು ಇರುವುದಿಲ್ಲ……
ಈ ಘೋಷಣೆ ಸಹ ಎಲ್ಲೋ ನಡೆದದ್ದಲ್ಲ. ಸುತ್ತಲು ಹತ್ತಾರು ಕ್ಯಾಮೆರಾಗಳ ಮಧ್ಯೆ, ಅನೇಕ ಸಾರ್ವಜನಿಕರ ನಡುವೆ ನಡೆದಿದೆ. ಅದನ್ನು ಸುಳ್ಳು ಹೇಳುವುದು ಸಾಧ್ಯವಿಲ್ಲ. ಆದರೂ ಇನ್ನೂ ತನಿಖೆ ನಡೆಯುತ್ತಿದೆ ಎಂದರೆ ನಮ್ಮ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಲೋಪಗಳಿವೆ ಎಂದೇ ಪರಿಗಣಿಸಬೇಕಾಗುತ್ತದೆ. ಇದನ್ನು ಸರಿ ಮಾಡದೆ ಅನಾವಶ್ಯಕವಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದರೆ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಕಷ್ಟವಾಗಬಹುದು…..
ಹಾಗೆಯೇ ಈ ಬೃಹತ್ ನಗರದಲ್ಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಬಾಂಬುಗಳು ಸಿಡಿಯುವುದು ನಿಜಕ್ಕೂ ಒಳ್ಳೆಯ ಲಕ್ಷಣಗಳಲ್ಲ. ಕಾರಣವೇನೇ ಇರಲಿ ಅಮಾಯಕರು ಸಾವು ನೋವುಗಳಿಗೆ ಸಿಲುಕುವುದು ನಾಗರಿಕ ಸಮಾಜದ ದುರಂತ. ಹೌದು ಇದಕ್ಕೆ ಪರಿಹಾರವೂ ಅಷ್ಟು ಸುಲಭವಲ್ಲ. ಅನೇಕ ಸಂಕೀರ್ಣ ವಿಷಯಗಳು ಇದರಲ್ಲಿ ಸೇರಿಕೊಂಡಿವೆ. ಜಾತಿ, ಧರ್ಮ, ಭ್ರಷ್ಟಾಚಾರ, ಚುನಾವಣಾ ರಾಜಕೀಯ, ಪಕ್ಷಗಳು, ವ್ಯವಹಾರಿಕ ಸ್ಪರ್ಧೆಗಳು, ಹಣಕಾಸಿನ ಒತ್ತಡಗಳು ಮುಂತಾದ ಅನೇಕ ವಿಷಯಗಳು ಇದರಲ್ಲಿ ಅಡಕವಾಗಿರುತ್ತದೆ.
21ನೆಯ ಶತಮಾನದಲ್ಲಿ ಮಾನವ ಜನಾಂಗ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಭಯೋತ್ಪಾದನೆ. ಇದರಿಂದ ವಿಶ್ವದ ಯಾವ ಭಾಗವು ಹೊರತಾಗಿಲ್ಲ. ಅದರಲ್ಲೂ ಭಾರತದಂತ ವೈವಿಧ್ಯಮಯ ದೇಶದಲ್ಲಿ, ಬೃಹತ್ ಜನಸಂಖ್ಯೆಯ ರಾಷ್ಟ್ರದಲ್ಲಿ ಎಷ್ಟೇ ಭದ್ರತೆ ವಹಿಸಿದರು ಭಯೋತ್ಪಾದನೆಯನ್ನು ತಡೆಯುವುದು ಸುಲಭವಲ್ಲ. ಆದರೂ ಅಸಹಾಯಕರಾಗದೆ ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಪೊಲೀಸ್ ಮತ್ತು ಬೇಹುಗಾರಿಕೆಯ ದಕ್ಷತೆಯನ್ನು ಹೆಚ್ಚಿಸಬೇಕು. ಆದರೆ ಇದೊಂದೇ ಪರಿಹಾರವಲ್ಲ. ಸಮಾಜದಲ್ಲಿ ಎಲ್ಲರೂ ತಾಳ್ಮೆಯಿಂದ, ಪ್ರಬುದ್ಧತೆಯಿಂದ, ಪ್ರೀತಿ ವಿಶ್ವಾಸ ಸಹೋದರತೆ ಸಮಾನತೆಯನ್ನು ಸ್ಥಾಪಿಸಲು ಪ್ರಯತ್ನಿಸಬೇಕು….
ಪ್ರೀತಿಯ ಸಮಾಜದಲ್ಲಿ ದ್ವೇಷಕ್ಕೆ ಹೆಚ್ಚು ಅವಕಾಶವಿರುವುದಿಲ್ಲ. ಆಗ ಇಂತಹ ಘಟನೆಗಳು ಕಡಿಮೆಯಾಗುವ ಎಲ್ಲ ಸಾಧ್ಯತೆಯೂ ಇರುತ್ತದೆ. ಅದನ್ನು ಹೊರತುಪಡಿಸಿ ಇಂತಹ ಘಟನೆಗಳಾದಾಗ ಅದನ್ನು ವಿಜೃಂಭಿಸಿ ಯಾವುದೋ ಕೋಮುಗಳ ವಿರುದ್ಧ ಮತ್ತಷ್ಟು ದ್ವೇಷವನ್ನು ಹಬ್ಬಿಸಿದರೆ ಅದು ಇನ್ನಷ್ಟು ಇಂತಹ ಪ್ರಕರಣಗಳಿಗೆ ಪ್ರಚೋದನೆಯಾಗುತ್ತದೆ. ಆ ಸೂಕ್ಷ್ಮತೆಯನ್ನು ದಯವಿಟ್ಟು ಎಲ್ಲರೂ ಅರಿತುಕೊಳ್ಳಿ…..
ನಮ್ಮ ಮಕ್ಕಳ ಕಾಲಕ್ಕಾದರು ಈ ಭಯೋತ್ಪಾದನೆ ಎಂಬ ಪಿಡುಗು ಕಡಿಮೆಯಾಗಲಿ. ಆಕಸ್ಮಿಕ ಅಪಘಾತಗಳಂತೆ ಈ ಭಯೋತ್ಪಾದಕ ಘಟನೆಗಳಲ್ಲಿ ಸಹ ಅಮಾಯಕರು ಬಲಿಯಾಗುತ್ತಾರೆ. ಅದನ್ನು ತಪ್ಪಿಸಲು ಇರುವ ಏಕೈಕ ವರ್ಗ ಪ್ರೀತಿಯ ಸಮಾಜವನ್ನು ಸೃಷ್ಟಿಸುವುದು, ಮಾನವೀಯ ಧರ್ಮವನ್ನು, ಮನುಷ್ಯತ್ವದ ಸಂಬಂಧಗಳನ್ನು ಹೆಚ್ಚು ಹೆಚ್ಚು ಮಾಡುವುದು. ಅದು ಸಾಮಾನ್ಯ ನಾಗರಿಕರಾದ ನಮ್ಮ ಕೈಯಲ್ಲೇ ಇದೆ. ಒಂದಷ್ಟು ಪ್ರಯತ್ನ ಮಾತ್ರ ಬೇಕಿದೆ. ಎಲ್ಲರಿಗೂ ಒಳ್ಳೆಯದಾಗಲಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್.ಕೆ. 98440 13068……..