- ಬೈಂದೂರು: ದಿನಾಂಕ : 22-02-2024(ಹಾಯ್ ಉಡುಪಿ ನ್ಯೂಸ್) ಗೋಳಿ ಹೊಳೆ ಗ್ರಾಮದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿ ಎನ್ ಅವರು ಬಂಧಿಸಿದ್ದಾರೆ.
- ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತಿಮ್ಮೇಶ್ ಬಿಎನ್ ಅವರು ದಿನಾಂಕ:22/02/2024 ರಂದು ಸಿಬ್ಬಂದಿಯವರೊಂದಿಗೆ ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಗೋಳಿಹೊಳೆ ಗ್ರಾಮದಲ್ಲಿ ರೌಂಡ್ಸ್ ನಲ್ಲಿದ್ದು ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ.
- ಗೋಳಿಹೋಳೆ ಗ್ರಾಮದ ಸರ್ವೆ ನಂಬ್ರ: 218 ರಲ್ಲಿ ಚುಚ್ಚಿ ಬಿಡಕ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಖಚಿತ ಮಾಹಿತಿ ದೊರೆತ ಮೇರೆಗೆ ಸಿಬ್ಬಂದಿಯವರ ಜೊತೆಯಲ್ಲಿ ಮಾಹಿತಿ ಬಂದ ಸ್ಥಳಕ್ಕೆ ಹೋಗಿ ಮಧ್ಯಾಹ್ನ ಧಾಳಿ ನಡೆಸಿದಾಗ ಕೆಂಪುಕಲ್ಲು ಕೋರೆಯಲ್ಲಿ ಕೆಲಸ ಮಾಡುತ್ತಿದ್ದವರು ಓಡಿ ಹೋಗಿದ್ದು ಸ್ಥಳದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಹಿಡಿದು ವಿಚಾರಿಸಿದಾಗ ಪುಟ್ಟಯ್ಯ ಯಾನೆ ಅಪ್ಪಣ್ಣ (42 ವರ್ಷ), ಇನ್ನೊಬ್ಬ ಕರುಣಾಕರ. ಬೀದಿಕೆರೆ ಗೋಳಿಹೊಳೆ ಗ್ರಾಮ ಬೈಂದೂರು ತಾಲೂಕು ಎಂಬುದಾಗಿ ತಿಳಿಸಿದ್ದು ಪೊಲೀಸರು ಸ್ಥಳವನ್ನು ಪರಿಶೀಲಿಸಿದಾಗ ಸುಮಾರು 5 ಸೆಂಟ್ಸ್ ಜಾಗದಲ್ಲಿ ಸುಮಾರು 7 ಅಡಿ ಆಳದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಸ್ಥಳದಲ್ಲಿ KA 20 AC 1245 ಟಿಪ್ಪರ್ ನಲ್ಲಿ 200 ಕೆಂಪು ಕಲ್ಲುಗಳನ್ನು ತುಂಬಿಸಿದ್ದು ಟಿಪ್ಪರ್ ಚಾಲಕನ ಹೆಸರು ವಿಳಾಸ ಕೇಳಿದಾಗ ಕರುಣಾಕರ (30 ವರ್ಷ) ಅರೆಶಿರೂರು, ಗೋಳಿಹೊಳೆ ಗ್ರಾಮ ಬೈಂದೂರು ತಾಲೂಕು ಎಂದು ತಿಳಿಸಿದ್ದಾನೆ ಎನ್ನಲಾಗಿದೆ.
- ಅವರ ಬಳಿ ಕೆಂಪು ಕಲ್ಲು ಗಣೆಗಾರಿಕೆ ಮಾಡಲು ಪರವಾನಿಗೆ ಇದೆಯೇ ಎಂದು ಕೇಳಿದಾಗ ಯಾವುದೇ ಪರವಾನಿಗೆ ಇಲ್ಲವಾಗಿ ಹೇಳಿದರು ಎನ್ನಲಾಗಿದೆ.
- ಗಣಿಗಾರಿಕೆಗೆ ಬಳಸಿದ ಚಿಕ್ಕ ಟಿಲ್ಲರ್ (ಅಂದಾಜು ಮೌಲ್ಯ 35,000/- ರೂ), KA 20 AC 1245 ಟಿಪ್ಪರ್‌ನ ಮೌಲ್ಯ ರೂ 6,00,000/ = ಟಿಪ್ಪರ್‌ನಲ್ಲಿ ತುಂಬಿಸಿದ 200 ಕೆಂಪು ಕಲ್ಲುಗಳ ( ಒಟ್ಟುಅಂದಾಜು ಮೌಲ್ಯ 4000/- ರೂ) ಆಗಿರುತ್ತದೆ. ಒಟ್ಟು ಅಂದಾಜು ಮೌಲ್ಯ ರೂ 6,39,000/= ಆಗಿರುತ್ತದೆ. ಮೇಲಿನ ಸ್ವತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆಪಾದಿತರಾದ ಪುಟ್ಟಯ್ಯ ಯಾನೆ ಅಪ್ಪಣ್ಣ ಮತ್ತು ಕರುಣಾಕರ ಎಂಬವರು ಯಾವುದೇ ಪರವಾನಿಗೆಯನ್ನು ಪಡೆದುಕೊಳ್ಳದೇ ಭೂಮಿಯ ಆಳದಿಂದ ಕೆಂಪುಕಲ್ಲು ತೆಗೆದು ಮಾರಾಟ ಮಾಡುವ ಉದ್ದೇಶದಿಂದ ಕಳವು ಮಾಡಿ ಗಣಿಕಾರಿಕೆ ನಡೆಸುತ್ತಿರುವುದು ಕಂಡುಬಂದಿದೆ. ಎನ್ನಲಾಗಿದೆ .
- ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಮತ್ತು ಕಲಂ: 4, 21 MMDR ACT ನಂತೆ ಪ್ರಕರಣ ದಾಖಲಾಗಿದೆ.