ಇದೊಂದು ಗ್ರಾಫಿಕ್ ಅನಿಮೇಷನ್ ರೀತಿಯ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕಲೆ……..
ಇದರ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿಗಳು ಸಹ ಮಾತನಾಡಿದ್ದಾರೆ. ಅಮಿತಾಭ್ ಬಚ್ಚನ್ ಆತಂಕಗೊಂಡಿದ್ದಾರೆ. ತೆಲಂಗಾಣ ಸರ್ಕಾರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಸಾಕಷ್ಟು ಜನ ಇದರ ಬಗ್ಗೆ ಚರ್ಚಿಸುತ್ತಿದ್ದಾರೆ….
ಸಾಮಾನ್ಯ ಜನರ ಸಾಮಾನ್ಯ ತಿಳಿವಳಿಕೆಗಾಗಿ ಒಂದಷ್ಟು ಸಾಮಾನ್ಯ ಮಾಹಿತಿ….
ಡೀಪ್ ಪೇಕ್ ಎಂಬ ಪದದ ಕನ್ನಡ ಅನುವಾದ ಅಥವಾ ಸಾರಾಂಶ ಆಳವಾದ ವಂಚನೆ ಎನ್ನಬಹುದು ಅಥವಾ ತೀವ್ರ ಭ್ರಮೆ ಅಥವಾ ನಕಲಿ ಛಾಯೆ ಅಥವಾ ಸತ್ಯದಂತೆ ಕಾಣುವ ಸುಳ್ಳು ಎಂದಾಗಬಹುದು ಅಥವಾ ಇದಕ್ಕಿಂತ ಉತ್ತಮ ಅನುವಾದ ಇದ್ದರೆ ತಿಳಿಸಿ…..
ಈ ತಂತ್ರಜ್ಞಾನದ ಬಗ್ಗೆ ಒಂದಷ್ಟು ಜನರಿಗೆ ಸ್ವಲ್ಪ ಆತಂಕ ಶುರುವಾಗಿದೆ. ಇದೊಂದು ಉತ್ತಮ ಕಲೆಯೂ ಹೌದು. ಈ ತಂತ್ರಜ್ಞಾನ ಉಪಯೋಗಿಸಿ ತುಂಬಾ ಕೆಟ್ಟ ಸಂದೇಶಗಳನ್ನು, ನಿಂದನೆಗಳನ್ನು, ಭ್ರಮೆಗಳನ್ನು, ನೈತಿಕತೆಯನ್ನು, ವೈಯಕ್ತಿಕ ಚಿತ್ರಣವನ್ನು, ವ್ಯಕ್ತಿತ್ವವನ್ನು ಪ್ರಸಾರ ಮಾಡಬಹುದು ಮತ್ತು ನಾಶ ಮಾಡಬಹುದು. ಈ ಸಾಮಾಜಿಕ ಜಾಲತಾಣಗಳ ವೇಗದ ಯುಗದಲ್ಲಿ ಅದು ಮಾಡಬಹುದಾದ ದುಷ್ಪರಿಣಾಮ ತುಂಬಾ ಗಂಭೀರವಾಗಿರುತ್ತದೆ ಮತ್ತು ವಿವೇಚನೆ ಇಲ್ಲದ, ಸಮಯವಿಲ್ಲದ, ಗಾಳಿ ಸುದ್ದಿಗಳನ್ನೇ ಸಂಭ್ರಮಿಸುವ ಕಾಲಘಟ್ಟದಲ್ಲಿ ಆ ಸುಳ್ಳು ಮತ್ತು ವಂಚನೆಯನ್ನು ಅಲ್ಲಗಳೆಯುವುದು ತುಂಬಾ ಕಷ್ಟ. ಆದ್ದರಿಂದ ಒಂದಷ್ಟು ಪ್ರಖ್ಯಾತರು, ಕುಖ್ಯಾತರು, ಜನಪ್ರಿಯರು ಭಯಗೊಂಡಿದ್ದಾರೆ……
ತಂತ್ರಜ್ಞಾನದ ಲಾಭಗಳ ಜೊತೆಗೆ ಅದು ಉಂಟುಮಾಡುವ ನಷ್ಟವನ್ನು ಸಹ ನಾವು ಅನುಭವಿಸಲೇ ಬೇಕು. ಇದು ಆ ಸಂದರ್ಭದ ಅನಿವಾರ್ಯತೆ. ಇದ್ದಕ್ಕಿದ್ದಂತೆ ವ್ಯಕ್ತಿಗಳನ್ನು ಬೆತ್ತಲು ಮಾಡಬಹುದು, ಅಶ್ಲೀಲ ಭಂಗಿಯಲ್ಲಿ ಚಿತ್ರಿಸಬಹುದು, ಇಲ್ಲದ ಸ್ಥಳದಲ್ಲಿ ಇದ್ದಂತೆ ಮಾಡಬಹುದು, ಇಲ್ಲದ ವಸ್ತುಗಳನ್ನು ಜೋಡಿಸಬಹುದು, ಅನುಮಾನಕ್ಕೆ ಆಸ್ಪದ ಇಲ್ಲದಂತೆ ಸತ್ಯದ ಸಮಾಧಿಯ ಮೇಲೆ ಸುಳ್ಳಿನ ಅರಮನೆ ಕಟ್ಟಬಹುದು ಹೀಗೆ ಮನಸ್ಸಿನಲ್ಲಿ ಮೂಡುವ ಎಲ್ಲಾ ಒಳ್ಳೆಯ, ಕೆಟ್ಟ, ವಿಕೃತ ಭಾವನೆಗಳನ್ನು ದೃಶ್ಯದಲ್ಲಿ ಮೂಡಿಸಿ ಪ್ರಸಾರ ಮಾಡಬಹುದು….
ಈ ತಂತ್ರಜ್ಞಾನ ಬಹುಶಃ ಹೊಸದಿರಬಹುದು ಮತ್ತು ಈಗ ಸರಳವಾಗಿರಬಹುದು. ಆದರೆ ಈ ಮನಸ್ಥಿತಿ ಬಹಳ ಹಳೆಯದು. ಅನಾದಿ ಕಾಲದಿಂದಲೂ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವದಲ್ಲಿದೆ ಮತ್ತು ಸಮಾಜ ಅದರೊಂದಿಗೆ ಬೆಳೆಯುತ್ತಾ ಬಂದಿದೆ. ಆಗ ಸದುಪಯೋಗಗಳು ಹೆಚ್ಚಾಗಿದ್ದು ದುರುಪಯೋಗಗಳು ಕಡಿಮೆ ಇದ್ದವು. ಈಗ ದುರುಪಯೋಗ ಹೆಚ್ಚಾಗಿ ಸದುಪಯೋಗ ಕಡಿಮೆ ಆಗಿದೆ. ಒಳ್ಳೆಯವರು ಕಡಿಮೆಯಾಗಿ ದುಷ್ಟರ ಸಂಖ್ಯೆ ಹೆಚ್ಚಾಗಿದೆ. ಅದರ ಪರಿಣಾಮ ಇವೆರಡರ ನಡುವಿನ ಅಂತರ ಕಡಿಮೆಯಾಗಿ ಗುರುತಿಸಲು ಕಷ್ಟವಾಗುತ್ತಿದೆ….
ವಿಶ್ವ ಇತಿಹಾಸವನ್ನು ಗಮನಿಸಿದರೆ ಈ ಭೂಮಿಯ ಬಹುತೇಕ ಪ್ರದೇಶವನ್ನು ಬಹಳ ದೀರ್ಘಕಾಲ ಆಡಳಿತ ನಡೆಸಿರುವುದು ರಾಜಪ್ರಭುತ್ವ ವ್ಯವಸ್ಥೆ. ಇದರಲ್ಲಿ ಅಧಿಕಾರ ಉಳಿಸಿಕೊಳ್ಳಲು, ಬೆಳೆಸಲು ಉಪಯೋಗಿಸಿದ ತಂತ್ರಗಾರಿಕೆಯನ್ನು ಗಮನಿಸಿದರೆ ಅದು ಆಧುನಿಕ ಕಾಲದ ಒಂದು ಜನಾಂಗಕ್ಕೆ ಊಹಿಸುವುದು ಕಷ್ಟವಾಗಬಹುದು..
ಸತ್ತಿರುವವರನ್ನು ಬದುಕಿಸಿದಂತೆ, ಬದುಕಿರುವವರನ್ನು ನಿಧನರಾದವರಂತೆ, ತದ್ರೂಪ ಸೃಷ್ಟಿಸಿ ಗೊಂದಲಗೊಳಿಸಿದಂತೆ, ಪ್ರೀತಿಯ ನಾಟಕವಾಡಿದಂತೆ ಅನ್ನವನ್ನೇ ವಿಷವಾಗಿಸಿದಂತೆ, ಮನುಷ್ಯ ಸಂಬಂದಗಳನ್ನೇ ಬದಲಾಯಿಸಿದಂತೆ, ವೇಷ ಭೂಷಣಗಳೇ ಅದಲು ಬದಲಾದಂತೆ, ಮಾತುಗಳಲ್ಲೇ ವಿಷ ಉಣಿಸಿದಂತೆ, ಸಿಂಹಾಸನದ ಕೆಳಗೇ ಮುಳ್ಳಿಟ್ಟಂತೆ, ವಿಷ ಸರ್ಪಗಳು ಕಚ್ಚುವಂತೆ, ಕೊಲೆಯೇ ಆತ್ಮಹತ್ಯೆಯಂತೆ ಹೀಗೆ ನೂರಾರು ಡೀಪ್ ಪೇಕ್ ಗಳು ಮಾನವ ಇತಿಹಾಸದ ಭಾಗಗಳೇ ಆಗಿದೆ……
ಅಂತಹ ಚಕ್ರವ್ಯೂಹದೊಳಗೆ ಈ ಡೀಪ್ ಪೇಕ್ ಗಳು ಯಾವ ಲೆಕ್ಕವೂ ಇಲ್ಲ. ಸ್ವಲ್ಪ ಮಾನಸಿಕ ಒತ್ತಡ ಮತ್ತು ಸ್ವಲ್ಪ ಸಾರ್ವಜನಿಕ ಅಭಿಪ್ರಾಯ ಕೆಟ್ಟದಾಗಬಹುದಷ್ಟೆ. ಅದು ತಾತ್ಕಾಲಿಕ ಮಾತ್ರ. ನಿಜ ಶೀಘ್ರವಾಗಿ ಬಯಲಾಗುತ್ತದೆ……..
ಮಾಧ್ಯಮಗಳು ಮತ್ತು ಆ ರೀತಿಯ ಕೆಲವು ಉಡಾಫೆ ವ್ಯಕ್ತಿಗಳು ತಮ್ಮ ಸ್ವ ಹಿತಾಸಕ್ತಿಗಾಗಿ ಇಲಿಯನ್ನು ಹುಲಿಯಂತೆ ಹಗ್ಗವನ್ನು ಹಾವಿನಂತೆ ಡೀಪ್ ಪೇಕ್ ರೀತಿಯಲ್ಲಿಯೇ ಈ ಸುದ್ದಿಗಳನ್ನು ವೈರಲ್ ಮಾಡಲು ಪ್ರಯತ್ನಿಸುತ್ತವೆ ಅಷ್ಟೇ…..
ಸಾಧ್ಯವಾದಷ್ಟು ಶುದ್ಧ, ಸ್ವಚ್ಛ, ಅರಿವಿನ ನಿಷ್ಕಳಂಕ ಮನಸ್ಥಿತಿ ನಮ್ಮದಾಗಿದ್ದಲ್ಲಿ ಡೀಪ್ ಡೀಪ್ ಡೀಪ್ ಗಳು ನಮ್ಮನ್ನು ಏನೂ ಮಾಡುವುದಿಲ್ಲ. ಅವು ಪೇಕ್ ಪೇಕ್ ಪೇಕ್ ಗಳಾಗಿಯೇ ಉಳಿಯುತ್ತವೆ….
ಸುಮ್ಮನೆ ಕೆಲವರು ಅದರ ಬಗ್ಗೆ ಎಚ್ಚರವಿರುವಂತೆ ಬೊಬ್ಬೆ ಹೊಡೆಯುತ್ತಾರೆ. ಎಚ್ಚರಿಕೆ ಎಂದರೆ ಏನು. ಯಾವುದೇ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣ ಉಪಯೋಗಿಸದೇ ಮನೆಯಲ್ಲಿ ಅಡಗಿ ಕುಳಿತುಕೊಳ್ಳುವುದೇ…..
ವಾಸ್ತವದಲ್ಲಿ ಈ ಸಮಾಜದ ಕೆಲವು ಸಿನಿಮಾ ನಟನಟಿಯರು, ರಾಜಕಾರಣಿಗಳು, ಉದ್ಯಮಿಗಳು ಮತ್ತೊಂದಿಷ್ಟು ಜನ ಈ ಡೀಪ್ ಪೇಕ್ ಗೆ ಹೆದರಿದ್ದಾರೆ. ಆದರೆ ನಿಜವಾಗಿ ಅನೇಕ ಸಿನಿಮಾ ನಟನಟಿಯರು, ರಾಜಕಾರಣಿಗಳು, ಉದ್ಯಮಿಗಳು, ಧಾರ್ಮಿಕ ಮುಖಂಡರು ಮುಂತಾದವರೇ ಈ ಸಮಾಜದ ನಿಜವಾದ ಡೀಪ್ ಪೇಕ್ ಗಳು. ಹಣ ಅಧಿಕಾರ ಜನಪ್ರಿಯತೆಗಾಗಿ ಈ ಸಮಾಜದ ಮೌಲ್ಯಗಳನ್ನು, ಜನರ ಮುಗ್ದತೆಯನ್ನು ದುರುಪಯೋಗ ಪಡಿಸಿಕೊಂಡು ಅವರನ್ನು ನಿರಂತರವಾಗಿ ಶೋಷಿಸುತ್ತಿದ್ದಾರೆ. ಸತ್ಯವನ್ನು, ವಾಸ್ತವವನ್ನು ಹೇಳದೆ ಅವರನ್ನು ಡೀಪ್ ಪೇಕ್ ನಲ್ಲಿ ಮುಳುಗಿಸಿದ್ದಾರೆ…
ಆದ್ದರಿಂದ ಈ ರೀತಿಯ ತಾಂತ್ರಿಕ ಆವಿಷ್ಕಾರದ ಡೀಪ್ ಪೇಕ್ ಗೆ ಹೆದರುವ ಅವಶ್ಯಕತೆ ಇಲ್ಲ. ಇದೊಂದು ವಂಚಕರ – ವಿಕೃತರ ಜಾಲ. ಸದಾ ಕಾಲ ಅದರಲ್ಲಿಯೇ ನಿರತರಾಗಿರುತ್ತಾರೆ. ಅ ದನ್ನು ನಮ್ಮ ಶುದ್ದ ಸ್ವಚ್ಛ ಆತ್ಮಸಾಕ್ಷಿಯ ಬಲದಿಂದ ಎದುರಿಸಬೇಕು. ನಮ್ಮದಲ್ಲದ ತಪ್ಪಿಗೆ ಅಥವಾ ಇತರರ ಸಂಪರ್ಕ ಕೊರತೆಯ ತಪ್ಪು ಗ್ರಹಿಕೆಗೆ ಅಥವಾ ಅನ್ಯರ ವಿಕೃತ ಮನಸ್ಥಿತಿಗೆ ನಾವ್ಯಾಕೆ ಒತ್ತಡಕ್ಕೆ ಒಳಗಾಗಬೇಕು. ಅದು ದುಷ್ಟರ ಕರ್ಮ. ಒಂದು ವೇಳೆ ನಮ್ಮನ್ನು ನಂಬದ ನಮ್ಮ ಮೇಲೆ ವಿಶ್ವಾಸವಿಡದ ಜನರು ನಮ್ಮನ್ನು ತಪ್ಪು ತಿಳಿದು ದೂರವಾಗುವುದಾದರೆ ಆಗಲಿ ಬಿಡಿ. ಆ ಸಂಬಂಧವೂ ಡೀಪ್ ಪೇಕ್ ಎಂದು ಭಾವಿಸಿ ನಿರ್ಲಕ್ಷಿಸೋಣ….
ಡೀಪ್ ಪೇಕ್ ನಮ್ಮ ಡೀಪ್ ಪರ್ಸನಾಲಿಟಿ ( ವ್ಯಕ್ತಿತ್ವವನ್ನು )
ಅಲುಗಾಡಿಸಲು ಸಾಧ್ಯವಿಲ್ಲ. ಧೈರ್ಯವಾಗಿರಿ. ತಂತ್ರಜ್ಞಾನ ನಮ್ಮ ಚಿತ್ರವನ್ನು ಕೆಟ್ಟದ್ದಾಗಿ ಚಿತ್ರಿಸಬಹುದು. ಆದರೆ ನಮ್ಮ ಮೌಲ್ಯಗಳನ್ನಲ್ಲ…..
ಧನ್ಯವಾದಗಳು……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………