ಬ್ರಹ್ಮಾವರ: ದಿನಾಂಕ:13-10-2023(ಹಾಯ್ ಉಡುಪಿ ನ್ಯೂಸ್) ಮಂದಾರ್ತಿಯ ಹಾಡಿಯೊಂದರಲ್ಲಿ ಕಾಡು ಹಂದಿಗಳನ್ನು ಬೇಟೆಯಾಡಲು ನಾಡ ಬಾಂಬ್ ಗಳನ್ನು ನೆಲದಲ್ಲಿ ಅವಿತಿಟ್ಟು ಮನುಷ್ಯರ ಜೀವಕ್ಕೆ ಅಪಾಯ ಒಡ್ಡಿದ್ದಾರೆ ಹಾಗೂ ಸಾಕು ನಾಯಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಸುಧೀರ್ ಪೂಜಾರಿ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂದಾರ್ತಿನ ನಿವಾಸಿ ಸುಧೀರ್ ಪೂಜಾರಿ (28) ಎಂಬವರು ದಿನಾಂಕ 11/10/2023 ರಂದು ಸಂಜೆ ವೇಳೆ ಮನೆಯ ಹತ್ತಿರ ಸ್ನೇಹಿತರೊಂದಿಗೆ ಆಟವಾಡುತ್ತಿರುವಾಗ ರಾತ್ರಿ 07:00 ಗಂಟೆಯ ಸಮಯಕ್ಕೆ ಅವರ ಮನೆಯ ಹತ್ತಿರವಿರುವ ಕರಣಿ ಮನೆ ಸಂಜೀವ ರವರ ಹಾಡಿಯಲ್ಲಿ ಯಾವುದೋ ಪಟಾಕಿ ಸಿಡಿಸಿದ ಶಬ್ಧ ಕೇಳಿಸಿತ್ತು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ 12/10/2023 ರಂದು ಬೆಳಿಗ್ಗೆ 6:30 ಗಂಟೆಯ ಸಮಯಕ್ಕೆ ಸುಧೀರ್ ಪೂಜಾರಿ ಅವರು ಹಾಡಿಗೆ ದನಗಳನ್ನು ಮೇಯಲು ತೆಗೆದುಕೊಂಡು ಹೋಗುವಾಗ ಹಾಡಿಗೆ ತಾಗಿಕೊಂಡಿರುವ ಕರಣಿ ಮನೆ ಸಂಜೀವರವರ ಹಾಡಿಯಲ್ಲಿ ಸುಧೀರ್ ಪೂಜಾರಿ ಯವರ ಸಾಕು ನಾಯಿ ವಿಕಾರವಾಗಿ ಬಿದ್ದು ಮೃತ ಪಟ್ಟಿರುತ್ತದೆ ಎಂದಿದ್ದಾರೆ.
ಆಗ ಸುಧೀರ್ ಪೂಜಾರಿ ಸಂಶಯಗೊಂಡು ಹಾಡಿಯಲ್ಲಿ ನೋಡಿದಾಗ ಅಲ್ಲಿ ಕಾಡು ಹಂದಿಗಳನ್ನು ಕೊಲ್ಲುವ ಉದ್ದೇಶದಿಂದ 17 ಕಚ್ಚಾ ನಾಡಾ ಬಾಂಬ್‌ಗಳನ್ನು ಇಟ್ಟು ಅದರ ಮೇಲೆ ಸೊಪ್ಪುಗಳನ್ನು ಮುಚ್ಚಿಟ್ಟಿರುವುದು ಕಂಡು ಬಂದಿರುತ್ತದೆ ಎಂದಿದ್ದಾರೆ.
ಕಚ್ಚಾ ಬಾಂಬ್ ಗಳನ್ನು ಮನುಷ್ಯನ ಪ್ರಾಣ ಹಾಗೂ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಪರಿಚಿತ ಆರೋಪಿಗಳು ಕಾಡು ಹಂದಿಗಳನ್ನು ಕೊಲ್ಲುವ ಉದ್ದೇಶದಿಂದ ಕಚ್ಚಾ ಬಾಂಬ್‌ಗಳನ್ನು ತಯಾರಿಸಿ ಸಂಜೀವರವರ ಹಾಡಿಯಲ್ಲಿ ಇಟ್ಟು ಸುಧೀರ್ ಪೂಜಾರಿಯವರ ಸಾಕು ನಾಯಿಯ ಸಾವಿಗೆ ಕಾರಣರಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ 286, 429, ಐಪಿಸಿ. ಮತ್ತು ಸೆಕ್ಷನ್ 9(B) Explosive Act. 1884. ರಂತೆ ಪ್ರಕರಣ ದಾಖಲಾಗಿದೆ.