ಮಾನ್ಯರೆ, ನಮಸ್ಕಾರ...
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ನಿಮ್ಮನ್ನು ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆಮಾಡಿದೆ. ನಿಮಗೆ ಲಭಿಸಿದ ಈ ಸ್ಥಾನಕ್ಕೆ ನ್ಯಾಯ ಒದಗಿಸಿಕೊಡುವ ಸುವರ್ಣಾವಕಾಶ ನಿಮಗೀಗ ಒದಗಿಬಂದಿದೆ. ಅವಕಾಶವನ್ನು ಸದ್ಬಳಕೆ ಮಾಡುವ ಮೂಲಕ ನಿಮಗಂಟಿದ ಕಳಂಕದಲ್ಲಿನ ಒಂದು ಭಾಗವನ್ನು ನೊಂದವರ, ಸಂತ್ರಸ್ತರ ಪರ ಧ್ವನಿಯಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ ನೀವೀಗ ಕಳೆದುಕೊಳ್ಳಬಹುದಾಗಿದೆ.
ದೇಶದ ನೂತನ ಸಂಸತ್ ಭವನದಲ್ಲಿ ಮೊದಲ ಬಾರಿಗೆ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದಲ್ಲಿ ನೀವು ಕೆಳಗಿನ ಕನಿಷ್ಠ ಎರಡು ಪ್ರಶ್ನೆಗಳನ್ನಾದರೂ ಕೇಳುವ ಮೂಲಕ, ಇವುಗಳಿಗೆ ಉತ್ತರಗಳನ್ನು ಪಡೆದುಕೊಳ್ಳುವುದರ ಮೂಲಕ ಸಮಸ್ಯೆಗಳಿಗೆ ಉನ್ನತ ಮಟ್ಟದ ತನಿಖೆ ಎಂಬ ಪರಿಹಾರವನ್ನು ಪಡೆದುಕೊಂಡರೆ ನಿಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು.
ಕರ್ನಾಟಕದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದಾಗಲೂ ನಿಮ್ಮೂರಾದ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ ಸ್ವತಂತ್ರ ಭಾರತದಲ್ಲಿ ನಡೆದ ಯಾವುದೇ ಒಂದು ಕೊಲೆ ಪ್ರಕರಣಗಳಿಗೂ ರಾಜ್ಯದ ಪೊಲೀಸರಾಗಲೀ, ಸಿಓಡಿಯವರಾಗಲೀ ನ್ಯಾಯ ಒದಗಿಸಿಕೊಟ್ಟದ್ದಿಲ್ಲ. ಈ ಎರಡು ಗ್ರಾಮಗಳಲ್ಲಿ 1947ರ ಬಳಿಕ ನಡೆದ ಅತ್ಯಾಚಾರ, ಕೊಲೆ, ಆತ್ಮಹತ್ಯೆ, ಅಸಹಜ ಸಾವುಗಳೆಷ್ಟು ಎಂಬ ಪ್ರಶ್ನೆಗಳನ್ನು ಕೇಳಿ ಸಂಸತ್ ನಿಂದ ಸಮಗ್ರ ಮಾಹಿತಿಗಳ ಸಹಿತವಾಗಿ ಉತ್ತರವನ್ನು ಪಡೆದುಕೊಳ್ಳಿ.
ನಿಮ್ಮೂರಿನಲ್ಲಿ ನಡೆದ ನಿಮ್ಮದೇ ಕ್ಷೇತ್ರದ ಆನೆ ಮಾವುತರಾಗಿದ್ದ ನಾರಾಯಣ, ಇವರ ತಂಗಿ ಯಮುನಾ ಸಹಿತ ನಡೆದ ಒಂದೇ ಒಂದು ಕೊಲೆ ಪ್ರಕರಣಗಳ ಆರೋಪಿಗಳನ್ನೂ ಸಹ ಪತ್ತೆ ಹಚ್ಚಲು ರಾಜ್ಯ ಸರಕಾರದ ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ರಾಜ್ಯ ಸರಕಾರ ಈ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಕಂಡಿರುವ ಕಾರಣ, ನಿಮ್ಮೂರಲ್ಲಿ ನಡೆದ ಎಲ್ಲಾ ಕೊಲೆ ಪ್ರಕರಣಗಳನ್ನೂ ಒಟ್ಟು ಸೇರಿಸಿ, ಇವುಗಳನ್ನೆಲ್ಲವನ್ನೂ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇರ ಉಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಆದೇಶಿಸುವಂತೆ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರಕಾರವನ್ನು ಒತ್ತಾಯಿಸಿ.
ಇದೇ ಅವಧಿಯಲ್ಲಿ ನಿಮ್ಮೂರಿನಲ್ಲಿ ನಡೆದ ಅಸಹಜ ಸಾವುಗಳು ಮತ್ತು ಆತ್ಮಹತ್ಯೆಗಳು ನೂರಾರು. ಇವರಲ್ಲಿ ಹೆಣ್ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿಯೇ ಇದೆ. ಇವರಲ್ಲೂ ಹಲವರ ಹೆಸರು ಮತ್ತು ವಿಳಾಸಗಳನ್ನು ಪತ್ತೆ ಹಚ್ಚಲು ಕೂಡಾ ರಾಜ್ಯ ಸರಕಾರದ ಪೊಲೀಸರಿಂದ ಇದುತನಕ ಸಾಧ್ಯವಾಗಿಲ್ಲ. ಇಲ್ಲೂ ರಾಜ್ಯ ಪೊಲೀಸರ ಅದಕ್ಷತೆ, ನಿಷ್ಕಾಳಜಿ, ಬೇಜವಾಬ್ದಾರಿ ಸ್ಪಷ್ಟವಾಗುತ್ತದೆ. ಈ ಅಸಹಜ ಸಾವುಗಳಲ್ಲೂ, ಆತ್ಮಹತ್ಯೆಗಳಲ್ಲೂ ಒಂದಷ್ಟು ಕೊಲೆಗಳು, ಅತ್ಯಾಚಾರಗಳಾಗಿರುವ ಸಾಧ್ಯತೆ ಇದೆ ಎಂಬ ಬಲವಾದ ಸಂಶಯ ಸಾರ್ವಜನಿಕರಲ್ಲಿದೆ. ಇಲ್ಲಿ ನಡೆದಷ್ಟು ಇಂಥ ಪ್ರಕರಣಗಳು ದೇಶದ ಬೇರೆ ಯಾವ ಭಾಗದಲ್ಲೂ ನಡೆದಿರಲಾರದು (2001 – 2012ರ ನಡುವಿನ ಕೇವಲ 11 ವರ್ಷದ ಅವಧಿಯಲ್ಲಿ 452 ಪ್ರಕರಣಗಳು !). ಆದರೂ ರಾಜ್ಯ ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಆದ್ದರಿಂದ ಈ ಎಲ್ಲಾ ಪ್ರಕರಣಗಳನ್ನೂ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಸಂಸತ್ ನಲ್ಲಿ ಕೇಂದ್ರ ಸರಕಾರವನ್ನು ಆಗಹಿಸುವ ಕೆಲಸನ್ನು ಈ ಬಾರಿ ನೀವು ಮಾಡಲೇಬೇಕು.
ನಿಮ್ಮ ಬಗ್ಗೆ ಪ್ರಧಾನಿಯವರಿಗೆ ವಿಶೇಷವಾದ ಗೌರವ ಇದೆ. ಆದ್ದರಿಂದ ನಿಮ್ಮ ಈ ಮೇಲಿನ ಬೇಡಿಕೆಗಳನ್ನು ಅವರು ಖಂಡಿತವಾಗಿಯೂ ಈಡೇರಿಸಬಹುದು. ಈ ಎರಡು ಬೇಡಿಕೆಗಳನ್ನು ಸಂಸತ್ ನಲ್ಲಿ ಮಂಡಿಸಿ , ಪರಿಹಾರ ಮಾರ್ಗಗಳಾಗಿ ಸಿಬಿಐ ಮತ್ತು ನ್ಯಾಯಾಂಗ ತನಿಖೆಗೆ ಕೇಂದ್ರ ಸರಕಾರ ಆದೇಶಿಸುವಂತೆ ಮಾಡಿದಲ್ಲಿ ನೀವು ರಾಜ್ಯ ಸಭೆಯ ಸದಸ್ಯರಾದುದಕ್ಕೆ ನಿಜವಾಗಿಯೂ ಸಾರ್ಥಕವಾಗುತ್ತದೆ. ಇಷ್ಟನ್ನಾದರೂ ನೀವು ಮಾಡದೆ ಹೋದರೆ ನೀವು ರಾಜ್ಯಸಭಾ ಸದಸ್ಯರಾಗಿ, ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಯಾಗಿ ಮುಂದುವರಿಯುವುದನ್ನು ನೈತಿಕವಾಗಿ ನೀವು ಕಳೆದುಕೊಳ್ಳುತ್ತೀರಿ. ದಯವಿಟ್ಟು ಈ ಎರಡು ವಿಷಯಗಳ ಕಡೆಗೆ ಗಮನಹರಿಸಬೇಕಾಗಿ ನಿಮ್ಮಲ್ಲಿ ಈ ಮೂಲಕ ನನ್ನ ಮನವಿ.
ವಂದನೆಗಳೊಂದಿಗೆ,
~ ಶ್ರೀರಾಮ ದಿವಾಣ, ಉಡುಪಿ