Spread the love

ಧರ್ಮಸ್ಥಳ: ದೇವಸ್ಥಾನಕ್ಕೆ ಸಂಬಂಧಿಸಿ ಒಬ್ಬರಲ್ಲ, ನಾಲ್ವರು ಹೆಗ್ಗಡೆಗಳಿದ್ದಾರೆ.

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅರ್ಚಕರೂ, ಆಡಳಿತದಾರರೂ ಆಗಿದ್ದ ಸನ್ಯಾಸೀ ಅಣ್ಣಪ್ಪಯ್ಯ ಅವರು ಆಡಳಿತಕ್ಕಾಗಿ ನಡೆದ ಸಂಘರ್ಷದಲ್ಲಿ ಮೋಸಕ್ಕೆ, ದ್ರೋಹಕ್ಕೆ ಬಲಿಯಾದರು ಎನ್ನಲಾಗುತ್ತದೆ. ಬಳಿಕ ಕಂಡುಬಂದ ದೋಷದ ಪರಿಹಾರಾರ್ಥವಾಗಿ ಅಣ್ಣಪ್ಪಯ್ಯ ಸ್ವಾಮೀ ಅವರನ್ನು ಆರಾಧಿಸಲು ಪ್ರಾರಂಭಿಸಲಾಯಿತು ಎಂಬ ಮೌಖಿಕ ಮಾಹಿತಿ, ಸ್ಥಾನಿಕ ಶಿವ ಬ್ರಾಹ್ಮಣರ ಮನೆಗಳ ಹಿರಿಯರಿಗೆ ಪರಂಪರಾಗತವಾಗಿ ಹರಿದುಕೊಂಡುಬಂದ ಅಮೂಲ್ಯ ವಿಷಯವಾಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಾನಪದ ವಿದ್ವಾಂಸರಾದ ದಿ. ಅನಂತರಾಮ ಬಂಗಾಡಿಯವರು “ಕುಡುಮ – ಧರ್ಮಸ್ಥಳ” ಎಂಬ ತಮ್ಮ ಸಂಶೋಧನಾ ಲೇಖನದಲ್ಲಿ ಹೀಗೆ ಬರೆದಿದ್ದಾರೆ.: “ಸ್ಥಾನಿಕ ಬ್ರಾಹ್ಮಣರ ಶಾಪ, ಮಂಜುನಾಥನ ಕೋಪಕ್ಕೆ ಒಳಗಾಗಿ, ನೆಲ್ಯಾಡಿ ಬೀಡು – ಮಲರ್ ವಾಡಿಯಲ್ಲಿ ಹಲವಾರು ತೊಂದರೆಗಳು ಬಂದಾಗ, ಈ ಶಿವಲಿಂಗವನ್ನು ಕದಿರೆಯಿಂದ ತಂದು ಪ್ರತಿಷ್ಠೆ ಮಾಡಿ ಶೈವೈಕ್ಯನಾಗಿರುವ ” ಅಣ್ಣಪ್ಪ”ನನ್ನು, ಆತನ ಆಪ್ತ ದೈವವಾದ ಪಂಜುರ್ಲಿಯನ್ನು ಆರಾಧಿಸಲು ತೊಡಗಿದರು. ದೇವರ ಭಕ್ತ ಅಣ್ಣಪ್ಪ, “ಅಣ್ಣಪ್ಪ ಸ್ವಾಮಿ” ಯಾದ. ಈತನು ನ್ಯಾಯ ತೀರ್ಮಾನಕ್ಕೆ ಮುಖ್ಯಸ್ಥನಾಗಿ ಆರಾಧನೆ ಪಡೆದನು.”

ಈ ಎಲ್ಲಾ ಮಾಹಿತಿಗಳಿಗೆ ಪೂರಕವಾದ ಕೆಲವು ವಿಶೇಷ ಆಚರಣೆಗಳೂ ಧರ್ಮಸ್ಥಳದಲ್ಲಿ ನಡೆಯುತ್ತಿರುವುದು ಉಲ್ಲೇಖಕ್ಕೆ ಅರ್ಹವಾದುದಾಗಿದೆ. ಇವುಗಳಲ್ಲಿ ಒಂದು, ದೇವಸ್ಥಾನದಲ್ಲಿ ದೇವರ ಪೂಜೆಗೂ ಮುನ್ನ, ನೈವೇದ್ಯಕ್ಕೂ ಮೊದಲು 12 ಮಂದಿ ಬ್ರಹ್ಮಚಾರಿಗಳಿಗೆ ಅನ್ನದಾನ ಮಾಡುವ ಕಾರ್ಯಕ್ರಮವನ್ನು ಗಮನಿಸಬಹುದಾಗಿದೆ. ಇಂಥ ಇನ್ನೂ ಒಂದೆರಡು ವಿಶೇಷ ವಿಧಿ ವಿಧಾನಗಳು ಇಲ್ಲಿ ಇರುವುದು ತಿಳಿದವರಿಗೆ ತಿಳಿದೇ ಇದೆ.

ಪರಿಶಿಷ್ಟ ಜಾತಿಗೆ ಸೇರಿದ ಮೊಗೇರ ಸಮುದಾಯವು ಕುಡುಮದ ಮೂಲ ನಿವಾಸಿ ಜಾತಿಗಳಲ್ಲಿ ಒಂದು. ಇವರು ಮುಖ್ಯವಾಗಿ ಕೃಷಿ ಕಾರ್ಮಿಕರು. ಇದಕ್ಕೆ ಸಂಕೇತವೆಂಬಂತೆ ಇಂದಿಗೂ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಣ್ಣಪ್ಪ ಸ್ವಾಮೀ ದೈವಾರಾಧನೆಯಲ್ಲಿ ಮೊಗೇರ ಸಮುದಾಯಕ್ಕೆ ಸೇರಿದವರೇ ಕಂಚಾರ ಪೂಜಾರಿ ಆಗಿರುವುದನ್ನು ಗಮನಿಸಬಹುದು.

ತಲೆತಲಾಂತರದಿಂದ ಇಲ್ಲಿ ಕಂಚಾರ ಪೂಜಾರಿಯಾಗಿದ್ದ, ಮೂಲತಹ ಇಲ್ಲಿನವರೇ ಆಗಿದ್ದ ಮೊಗೇರ ಮನೆಯವರು ಮಾತ್ರ ಈಗ ಇಲ್ಲಿಲ್ಲ. ಅಂದಾಜು ಐದಾರು ದಶಕಗಳ ಹಿಂದೆ, “ಇನ್ನೆಂದಿಗೂ ಧರ್ಮಸ್ಥಳಕ್ಕೆ ಕಾಲಿಡೆವು” ಎಂದು ನಿರ್ಧರಿಸಿದ ಆ ಮನೆಯವರು ಧರ್ಮಸ್ಥಳವನ್ನು ತೊರೆದಿರುವುದೂ ಇಲ್ಲಿ ನಡೆದ, ನಡೆಯುತ್ತಿರುವ ಅಧರ್ಮಕ್ಕೆ ಸಾಂಕೇತಿಕ ಉದಾಹರಣೆ ಎಂದು ತಿಳಿದುಕೊಳ್ಳಬಹುದು.
(ಈ ಮನೆತನದ ಬಗ್ಗೆ, ಇವರು ಧರ್ಮಸ್ಥಳಕ್ಕೆ ಶಾಶ್ವತವಾಗಿ ವಿದಾಯಗೀತೆ ಹಾಡಲು ಕಾರಣವಾಗಿರುವ ವಿಷಯಗಳ ಬಗ್ಗೆ ಮುಂದಕ್ಕೆ ಪ್ರತ್ಯೇಕವಾಗಿ ಬರೆಯುತ್ತೇನೆ)

ಧರ್ಮಸ್ಥಳದಲ್ಲಿ ದೇವಳಕ್ಕೆ ಸಂಬಂಧಿಸಿದ ನಾಲ್ಕು ಹೆಗ್ಗಡೆಗಳಿದ್ದಾರೆ. ಜೈನರಲ್ಲಿ ಒಬ್ಬರು (ಮುಖ್ಯ ಆಡಳಿತದಾರರು), ಸ್ಥಾನಿಕರಲ್ಲಿ ಒಬ್ಬರು, ಶಿವಳ್ಳಿಯವರಲ್ಲಿ ಒಬ್ಬರು ಮತ್ತು ಬಂಟರಲ್ಲಿ ಒಬ್ಬರು. ಅಲ್ಲಿಯ ಸ್ಥಾನಿಕ ಹೆಗ್ಗಡೆಯು ಜೈನ ಹೆಗ್ಗಡೆಯವರಂತೆ ರುಮಾಲು ಕಟ್ಟಬೇಕು. ಇವರಿಗೆ ದೇಲಂಪಾಡಿ ಎಂಬ ಹೆಸರಿದೆ. ಇವರು ಭಕ್ತರಿಂದ ಹಣ್ಣುಕಾಯಿ ತೆಗೆದುಕೊಂಡು, ಅವರ ಹಾಲಾವಲೆಯನ್ನು ಮುಖ್ಯ ಜೈನ ಹೆಗ್ಗಡೆಯವರಿಗೆ ಹೇಳಿ, ಅವರ ತೀರ್ಪನ್ನು ಭಕ್ತರಿಗೆ ತಿಳಿಸಿ ಅವರಿಂದ ಕಾಣಿಕೆ ಹಾಕಿಸಿ, ಪ್ರಸಾದವನ್ನು ಅರ್ಚಕರಿಂದ ತೆಗೆದುಕೊಂಡು ಬಂದು ಭಕ್ತರಿಗೆ ಒಳ್ಳೆತನವನ್ನು ಬಯಸುವುದು. ಇದರಿಂದ ತಿಳಿಯಬಹುದಾದ ವಿಷಯವೇನೆಂದರೆ, ಧರ್ಮಸ್ಥಳವು ಒಂದು ಕಾಲದಲ್ಲಿ ಸ್ಥಾನಿಕರದ್ದೇ ಆಗಿತ್ತೆಂಬುದು. ಇಲ್ಲಿಯ ಮುಂಚಿನ ಸ್ಥಳ ವಂದಿಗರು ಪುತ್ತೂರು ನಟ್ಟೋಜ ಮನೆತನದವರಾಗಿರಬೇಕು. ಇಲ್ಲಿಯವರಿಗೂ, ನಟ್ಟೋಜರಿಗೂ ಭಿನ್ನಾಭಿಪ್ರಾಯದಿಂದ ದೇವರ ಮೇಲಿನ ‘ಆಣೆ’ ಇದ್ದುದರಿಂದ ಈಗಲೂ ಧರ್ಮಸ್ಥಳಕ್ಕೆ ನಟ್ಟೋಜ ಮನೆಯವರು ಹೋಗುವುದಿಲ್ಲವೆಂದಿದೆ.”
(ತುಳುನಾಡು / ಪುಟ 93 – 94 / ಡಾ. ಪಾದೂರು ಗುರುರಾಜ ಭಟ್ / 1963)

ಸ್ಥಾನಿಕ ಹೆಗ್ಗಡೆಯನ್ನು ದೇಲಂಪಾಡಿತ್ತಾಯರೆಂದೂ, ಶಿವಳ್ಳಿಯ ಹೆಗ್ಗಡೆಯನ್ನು ಮನೋಳಿತ್ತಾಯರೆಂದೂ ಕರೆಯುತ್ತಾರೆ. ಇಲ್ಲಿ ದೈವವನ್ನು ಕರೆಯುವುದು ಬಂಟ ಹೆಗ್ಗಡೆಯಾಗಿದ್ದಾರೆ. ಇಲ್ಲಿನ ನಾಲ್ಕು ಮಂದಿ ಹೆಗ್ಗಡೆಯವರನ್ನು ಒಟ್ಟಾಗಿ ಹಿಂದೆ “ನಾಲ್ವಿಕೆಯವರು” ಎಂದು ಕರೆಯಲಾಗುತ್ತಿತ್ತು.

ಈ ಎಲ್ಲಾ ವಿಷಯಗಳನ್ನೂ ಗಮನಿಸಿದರೆ, ಶ್ರೀ ಕ್ಷೇತ್ರ ಧರ್ಮಸ್ಥಳವು ಕೇವಲ ಜೈನ ಹೆಗ್ಗಡೆಯವರದ್ದು ಮಾತ್ರ ಅಲ್ಲ. ಇದು ಎಲ್ಲರ ದೇವಸ್ಥಾನವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

“ಕುಟುಂಬದ ದೇವಸ್ಥಾನಗಳು ಎಂದರೆ ಯಾವುದೇ ಕುಟುಂಬದ ಸದಸ್ಯರು ಸ್ವತಹ ತಾವಣಾಗಿಯೇ ಆಗಲಿ ಅಥವಾ ಕುಟುಂಬದ ಸದಸ್ಯರನ್ನು ಮಾತ್ರ ಒಳಗೊಂಡಿರುವ, ಕುಟುಂಬದ ಸದಸ್ಯರುಗಳ ಮೂಲಕ ನಿರ್ವಹಿಸುವ ದೇವಸ್ಥಾನ ಆಗಿದ್ದು, ಸಾರ್ವಜನಿಕರಿಂದ ಯಾವುದೇ ಸೇವೆ, ದೇಣಿಗೆ, ವಂತಿಗೆ, ಕೊಡುಗೆ ಸ್ವೀಕರಿಸುವುದಿಲ್ಲ. ಸಾರ್ವಜನಿಕರು ಭೇಟಿ ನೀಡಿ ಸೇವಾ ರೂಪದಲ್ಲಿ ಕಾಣಿಕೆ ಸಲ್ಲಿಸುವ ದೇವಸ್ಥಾನಗಳು ಸಾರ್ವಜನಿಕ ದೇವಸ್ಥಾನವಾಗಿದ್ದು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ನಿಯಮಗಳು 2002ರ ಸೆಕ್ಷನ್ 53ರಂತೆ ಕಡ್ಡಾಯವಾಗಿ ನೋಂದಾವಣೆ ಗೊಂಡಿರಬೇಕಾಗುತ್ತದೆ. ಆದರೆ ಈವರೆಗೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಇದನ್ನು ನೋಂದಾಯಿಸಿಕೊಂಡಿರುವುದಿಲ್ಲ. ಆದುದರಿಂದ ಇದನ್ನು ನೋಂದಾಯಿಸಿಕೊಳ್ಳಲು ನಿಯಮಾನುಸಾರ ಅಗತ್ಯ ಕ್ರಮಕೈಗೊಳ್ಳುವಂತೆ” ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ದಿನಾಂಕ 13/04/2017ರಲ್ಲಿ ದ. ಕ. ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಿದ್ದಾರೆ (ನಂ. ಡಿ. ವಿ. ಎಸ್. ಸಿ. ಆರ್. 18 / 16 – 17).

ಆದರೆ, ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮಂತ್ರಿಗಳು ನಿಯಮಾನುಸಾರ ಕ್ರಮ ಕೈಗೊಳ್ಳದೆ ಪಕ್ಷಪಾತದಿಂದ ನಡೆದುಕೊಳ್ಳುತ್ತಾ ಬಂದಿರುವುದು ವ್ಯವಸ್ಥೆಯ ದುರಂತವಾಗಿದೆ. ಮಂತ್ರಿಗಳಿಗೆ ಹಾಗೂ ಅಧಿಕಾರಿಗಳಿಗೆ ಸಂವಿಧಾನ, ಕಾನೂನು ಕಾಯಿದೆಗಳು ಮತ್ತು ನಿಯಮಾವಳಿಗಳಿಗಿಂತ ಹಣವೇ ಮುಖ್ಯವಾದಾಗ ಮಾತ್ರ, ನ್ಯಾಯ ಪಾಲನೆ ಮಾಡುವುದನ್ನು ಪೆಂಡಿಂಗ್ ಇರಿಸಿ ಅನ್ಯಾಯ ಮುಂದುವರಿಯಲು ನಿರ್ಲಜ್ಜೆಯಿಂದ ಅವಕಾಶ ಮಾಡಿಕೊಡುತ್ತಾರೆ ಎಂಬುದನ್ನು ಯಾರು ಬೇಕಾದರೂ ಇಲ್ಲಿ ಗಮನಿಸಬಹುದಾಗಿದೆ.

(ಸಧ್ಯಕ್ಕೆ ಇಷ್ಟು ಸಾಕು)

~ ಶ್ರೀರಾಮ ದಿವಾಣ, ಉಡುಪಿ.

error: No Copying!