Spread the love

ಸೌಜನ್ಯಾ ರೇಪ್ & ಮರ್ಡರ್ ನ ಹಿಂದೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರೂ, ಸಾವಿರಾರು ಎಕರೆಯ ಭೂ ಮಾಲಕರೂ, ಜಮೀನ್ದಾರರೂ, ಬಿಜೆಪಿಯ ರಾಜ್ಯಸಭಾ ಸದಸ್ಯರೂ, ಆರೆಸ್ಸೆಸ್ ಪರಿವಾರದ ಮಹಾಪೋಷಕರೂ ಆದ ಡಿ. ವೀರೇಂದ್ರ ಹೆಗ್ಗಡೆಯ ತಮ್ಮ ಹರ್ಷೇಂದ್ರ ಕುಮಾರನ ಮಗನಾದ ನಿಶ್ಚಲ್ ಜೈನ್ ಇದ್ದಾನೆಂದು ಸೌಜನ್ಯಾಳ ತಾಯಿ ಕುಸುಮಾವತಿ ಅಕ್ಕನವರು ನ್ಯಾಯಪರ ಹೋರಾಟದ ಸಭೆಗಳ ಮೂಲಕ ಬಹಿರಂಗವಾಗಿಯೇ ಹೇಳಿಕೊಂಡು ಬರುತ್ತಿದ್ದಾರೆ. ಹೀಗೆ ಧರ್ಮಸ್ಥಳ ಪರಿಸರದಲ್ಲಿ ನಡೆದ ಅಧರ್ಮದ ಕೃತ್ಯಗಳ ಹಿಂದೆ ಹೆಗ್ಗಡೆ ಕುಟುಂಬದವರ ಹೆಸರು ಕೇಳಿ ಬರುತ್ತಿರುವುದು ಇದು ಮೊದಲ‌ ಬಾರಿಯೇನೂ ಅಲ್ಲ. ಸೌಜನ್ಯಾ ಪ್ರಕರಣ ನಡೆಯುವುದಕ್ಕಿಂತ ಕೆಲ ತಿಂಗಳ ಹಿಂದೆಯಷ್ಟೇ ಧರ್ಮಸ್ಥಳದಲ್ಲಿ ನಡೆದ ಆನೆ ಮಾವುತ ನಾರಾಯಣ ಹಾಗೂ ಇವರ ತಂಗಿ ಯಮುನಾ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿಯೂ ಹರ್ಷೇಂದ್ರ ಕುಮಾರನ ಹೆಸರನ್ನು ಕೊಲೆಯಾದ ನಾರಾಯಣರ ಪತ್ನಿ ಸುಂದರಿ ಅವರು ದ. ಕ. ಜಿಲ್ಲಾ ಎಸ್ಪಿಯವರಿಗೆ ಸಲ್ಲಿಸಿದ ಲಿಖಿತ ದೂರಿನಲ್ಲಿ ಪ್ರಸ್ತಾಪಿಸಿರುವುದು ಈಗಾಗಲೇ ಬಹಿರಂಗಗೊಂಡಿದೆ. ಇದೇ ರೀತಿ ಪದ್ಮಲತಾ ಅಪಹರಣ ಪ್ರಕರಣದಲ್ಲಿ ನೇರವಾಗಿ ವೀರೇಂದ್ರ ಹೆಗ್ಗಡೆಯ ಹೆಸರೇ ಪ್ರಸ್ತಾಪವಾಗಿತ್ತು. 1987 ಮಾರ್ಚ್ 5ರ ಉದಯವಾಣಿಯಲ್ಲಿ “ಪೊಲೀಸರ ಮೇಲೆ ಹೆಗ್ಗಡೆ ಪ್ರಭಾವ ?” ಎಂಬ ಹೆಡ್ಡಿಂಗ್ ನಲ್ಲಿ ಸಿಂಗಲ್ ಕಾಲಂ ಸುದ್ಧಿಯೊಂದು ಪ್ರಕಟವಾಗಿತ್ತು. ಬೇರೆ ಪತ್ರಿಕೆಗಳಲ್ಲೂ ಈ ವರದಿ ಪ್ರಕಟವಾಗಿರಬಹುದು. ಆ ವರದಿಯಲ್ಲಿ ಈ ಕೆಳಗಿನಂತಿದೆ : ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರ ಪ್ರಭಾವದಿಂದಾಗಿ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಪದ್ಮಲತಾಳ ನಿಗೂಢ ಸಾವಿನ ಕುರಿತು ಕಾರ್ಯಪ್ರವೃತ್ತರಾಗಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಸಿಪಿಎಂ ನಾಯಕ ಶ್ರೀ ಆರ್. ವೆಂಕಟರಾಮಯ್ಯ ವಿಧಾನಸಭೆಯಲ್ಲಿಂದು ಆರೋಪಿಸಿದರು. ಮೃತ ವಿದ್ಯಾರ್ಥಿನಿಯ ತಂದೆ ಅಸಹಾಯಕ ರೈತನಿಗೆ ನ್ಯಾಯ ಒದಗಿಸುವಂತೆ ಅವರು ಸರಕಾರವನ್ನು ಒತ್ತಾಯಿಸಿದರು.”

ಹೀಗೆ, ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ ನಡೆದ ಪ್ರಕರಣಗಳನ್ನು ಹಳ್ಳ ಹಿಡಿಸುವುದಕ್ಕೆ ಹೆಗ್ಗಡೆ ಹಾಗೂ ಇವರ ಗ್ಯಾಂಗ್ ತಮ್ಮ ಪ್ರಭಾವವನ್ನು ನಿರಂತರವಾಗಿ ಉಪಯೋಗಿಸಿಕೊಂಡು ಬಂದಿದೆ ಎಂಬುದು ಕಂಡುಬರುತ್ತದೆ. ಪದ್ಮಲತಾ ಪ್ರಕರಣದ ಬಗ್ಗೆ ಆರ್. ವೆಂಕಟರಾಮಯ್ಯ ಅವರು ನ್ಯಾಯಕ್ಕಾಗಿ ವಿಧಾನಸಭೆಯಲ್ಲಿಯೇ ಪ್ರಶ್ನಿಸುತ್ತಾರೆಂದು ಗೊತ್ತಾಗಿ ಆಗ ಹೆಗ್ಗಡೆಯ ಆಪ್ತ ಬಂಟರಾಗಿದ್ದ ಜನಪ್ರತಿನಿಧಿಯೊಬ್ಬರು ನೇರವಾಗಿ ವೆಂಕಟರಾಮಯ್ಯ ಅವರನ್ನು ಕಂಡು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸದಂತೆ ಕೋರಿಕೊಂಡಿದ್ದರು. ನೇರ ನ್ಯಾಯನಿಷ್ಠ ದಿಟ್ಟ ವ್ಯಕ್ತಿಯೂ, ಹೈ ಕೋರ್ಟ್ ನ ಹಿರಿಯ ನ್ಯಾಯವಾದಿಯೂ ಆಗಿದ್ದ ವೆಂಕಟರಾಮಯ್ಯ ಅವರು ಅಂದು ಹೆಗ್ಗಡೆ ಪರವಾಗಿ ಬಂದಿದ್ದ ಈ ರಾಜಕಾರಣಿಯನ್ನು ಯಾವುದೇ ಮುಲಾಜಿಲ್ಲದೆ “ಗೆಟ್ ಔಟ್” ಎಂದು ಹೊರದಬ್ಬಿದ ವಿದ್ಯಾಮಾನವೂ ನಡೆದಿತ್ತು. ವೆಂಕಟರಾಮಯ್ಯ ಅವರು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಳಿಕ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರ ಪದ್ಮಲತಾ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸಿತು. ಈ ಸಂದರ್ಭದಲ್ಲಿಯೂ, ಆಗ ಹೆಗ್ಗಡೆಯ ಆಪ್ತ ಬಂಟರಾಗಿದ್ದ ವ್ಯಕ್ತಿಯೊಬ್ಬರು ನೇರವಾಗಿ ಆಗ ಗೃಹ ಮಂತ್ರಿಯಾಗಿದ್ದ ಬಿ. ರಾಚಯ್ಯ ಅವರನ್ನು ಕಂಡು ಹೆಗ್ಗಡೆಯ ಘನ ವ್ಯಕ್ತಿತ್ವವನ್ನು ವಿವರಿಸಿ ಪ್ರಕರಣ ಹಳ್ಳ ಹಿಡಿಯಲು ಪ್ರಭಾವ ಬೀರಿದ ಗುಟ್ಟು ರಟ್ಟಾಗಿದೆ.

ಈ ಮಧ್ಯೆ ಪದ್ಮಲತಾ ಪ್ರಕರಣದ ಬಗ್ಗೆ ತನಿಖಾ ವರದಿ ಪ್ರಕಟಿಸಿದ ಬೆಂಗಳೂರಿನ ಪತ್ರಿಕೆಯೊಂದರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಊರಿನ ಜನರು ಇಡೀ ಪೇಟೆಯನ್ನೇ ಬಂದ್ ಮಾಡಿ ಸಭೆ ನಡೆಸಿ ಡಿಸಿ, ಎಸ್ಪಿ, ಸರಕಾರಕ್ಕೆ ಮನವಿ ಸಲ್ಲಿಸಿದ ಘಟನೆಯೂ ನಡೆದಿತ್ತು.

ಸೌಜನ್ಯಾ ಪ್ರಕರಣ ನಡೆಯುವ ವರೆಗೂ ಬೆಳ್ತಂಗಡಿ ತಾಲೂಕಿನ ಬಹುತೇಕ ಎಲ್ಲಾ ಕಾಂಗ್ರೆಸ್ ಹಾಗೂ ಹಿಂದುತ್ವವಾದಿ ಸಂಘಟನೆಗಳ ಎಲ್ಲರೂ ಹೆಗ್ಗಡೆಯ ಬೆನ್ನಿಗೇ ನಿಂತಿದ್ದರು. ವೇದವಲ್ಲಿಗೆ ಆಗಲಿ, ಪದ್ಮಲತಾಳಿಗೆ ಆಗಲಿ ನ್ಯಾಯ ಒದಗಿಸಿಕೊಡಬೇಕೆಂದಾಗಲೀ, ಇಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ರೇಪ್ & ಮರ್ಡರ್ ಗಳು ಹೀಗೆ ಮುಂದುವರಿಯಬಾರದೆಂದಾಗಲೀ (ಗಮನಿಸಿ: ಇಲ್ಲಿ ಅಸಹಜವಾಗಿ ಮೃತಪಟ್ಟು ಹೆಣಗಳಾಗಿ ಸಿಗುವವರು ಹೆಚ್ಚಿನವರೂ ಅಪರಿಚಿತರು ! ಹಾಗಾಗಿ ಇಲ್ಲಿ ಎಲ್ಲರೂ ಮೌನ !!) ಇಲ್ಕಿನವರಾರಿಗೂ ಅನಿಸಲೇ ಇಲ್ಲ. ನೇತ್ರಾವತಿಯ ಆಚೆ ಏನಾದರೂ ನಡೆದರೆ ಅದನ್ನು ಅಣ್ಣಪ್ಪ – ಮಂಜುನಾಥ ನೋಡಿಕೊಳ್ಳುತ್ತಾನೆಂಬ ಬಾಲಿಶ, ಪಕ್ಷಪಾತದ, ಅಮಾನವೀಯ ನಡೆ ಇಲ್ಲಿನ ಎಲ್ಲಾ ವರ್ಗದ ಜನರದ್ದಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಅನ್ಯಾಯ, ಅಕ್ರಮ, ಅಧರ್ಮ, ಅನಾಚಾರ, ಅತ್ಯಾಚಾರಗಳನ್ನು ಅತ್ಯಂತ ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಬಹಿರಂಗವಾಗಿಯೇ ಪ್ರಶ್ನಿಸುತ್ತಾ, ಪ್ರತಿಭಟಿಸುತ್ತಾ ಬಂದವರು ರೈತ, ಕಾರ್ಮಿಕ ನಾಯಕರು ಮತ್ತು ಎಡ, ಪ್ರಗತಿಪರ, ದಲಿತ ನಾಯಕರು ಹಾಗೂ ಸಂಘಟನೆಗಳು, ಪಕ್ಷಗಳು ಮಾತ್ರವೇ ಎನ್ನುವುದು ಹಗಲಿಷ್ಟು ಸತ್ಯ. ಆದರೆ ಇವರ್ಯಾರೂ ಅಂದೂ, ಇಂದೂ ತಮ್ಮ ವ್ಯಕ್ತಿಗತ ವರ್ಚಸ್ಸನ್ನು ವೃದ್ಧಿಸುವ ಯಾವ ನಾಟಕಗಳನ್ನೂ ಮಾಡಿಲ್ಲ, ಜೈ ಜೈ ಹಾಕಿಸಿಕೊಂಡಿಲ್ಲ. ಈಗಲೂ ಇರುವವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ರಾಜ ರಸ್ತೆಗಳಲ್ಲಿ ನಿರ್ಭೀತಿಯಿಂದ ನಡೆಯುತ್ತಾ, ಬಸ್ ಗಳಲ್ಲಿ ಪ್ರಯಾಣಿಸುತ್ತಾ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಆದರ್ಶದ, ಮಾದರಿಯಾದ ನ್ಯಾಯಪರ ಹೋರಾಟದ ಬದುಕು ಸಾಗಿಸುತ್ತಿದ್ದಾರೆ.

ಪದ್ಮಲತಾ ಪ್ರಕರಣದ ತನಿಖಾ ನಾಟಕ ನಡೆಸಿದ ಸಿಓಡಿ ಅಧಿಕಾರಿಗಳು ಕೊನೆಗೆ 1990 ಜುಲೈ 18 ರಂದು “ಪತ್ತೆ ಹಚ್ಚಲಾಗದ ಪ್ರಕರಣ” ಎಂದು ಬರೆದು ‘ಸಿ’ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ “ಪುಣ್ಯ ಕಟ್ಟಿಕೊಂಡು” ಹೋದರು.

(ಮುಂದುವರಿಯುವುದು)

~ ಶ್ರೀರಾಮ ದಿವಾಣ , ಉಡುಪಿ.

error: No Copying!