- ಶಂಕರನಾರಾಯಣ: ದಿನಾಂಕ:14-08-2023 (ಹಾಯ್ ಉಡುಪಿ ನ್ಯೂಸ್) ವಿವಾಹಿತ ಮಹಿಳೆ ಓರ್ವಳಿಗೆ ಗಂಡ ಹಾಗೂ ಗಂಡನ ಮನೆಯವರು ಮನೆಗೆ ಪ್ರವೇಶ ನೀಡದೆ ಜೀವ ಬೆದರಿಕೆ ಹಾಕಿರುವ ಬಗ್ಗೆ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
- ಕುಂದಾಪುರ ತಾಲೂಕು, ಹೆಂಗವಳ್ಳಿ ಗ್ರಾಮದ ,ತೊಂಬತ್ತು , ಗುಲಾಬಿ ನಿಲಯದ ನಿವಾಸಿ ಶ್ರೀಮತಿ ಕಲಾವತಿ (45) ಎಂಬವರು ದಿನಾಂಕ: 22.11.2011 ರಂದು ಗಣೇಶ ಪೂಜಾರಿ ಎಂಬವರನ್ನು ಗುರು ಹಿರಿಯರ ನಿಶ್ಚಯದಂತೆ ಮದುವೆ ಆಗಿರುತ್ತಾರೆ ಎಂದಿದ್ದಾರೆ. ಮದುವೆ ಆದ ಸ್ವಲ್ಪ ದಿನ ಗಂಡನ ಮನೆಯಲ್ಲಿ ಇದ್ದು ಈ ಸಮಯ ಗಂಡ ಹಾಗೂ ಗಂಡನ ಮನೆಯವರು ಸೇರಿ ಕಲಾವತಿಯವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಆ ಕಾರಣ ಕಲಾವತಿಯವರು ಗಂಡ ಗಣೇಶ ಪೂಜಾರಿಯೊಂದಿಗೆ ಬೆಂಗಳೂರಿಗೆ ಹೋಗಿ ಅಲ್ಲಿ ವಾಸವಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- , ಈ ಸಮಯ ಅಲ್ಲಿಯೂ ಸಹ ಗಂಡ ಗಣೇಶ ಪೂಜಾರಿಯು ಕಲಾವತಿಯವರಿಗೆ ದಿನಾಲೂ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು ಎಂದಿದ್ದಾರೆ. ಆ ಬಳಿಕ ಡೆಲಿವರಿಗೆ ಎಂದು ಹೇಳಿ ಊರಿಗೆ ಕರೆದುಕೊಂಡು ಬಂದು ಅವರ ತಾಯಿ ಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ, ಊರಿಗೆ ಬಂದ ಬಳಿಕ ಗಂಡ ಖರ್ಚಿಗೆ ಯಾವುದೇ ಹಣ ನೀಡಿರುವುದಿಲ್ಲ.ಅಲ್ಲದೆ ಕಲಾವತಿಯವರ ಹಾಗೂ ಅವರ ಮಗನ ಯೋಗಕ್ಷೇಮ ಸಹ ನೋಡಿರುವುದಿಲ್ಲ ಎಂದು ದೂರಿದ್ದಾರೆ.
- ಗಂಡನ ಮನೆಗೆ ವಾಪಾಸು ಹೋದಾಗ ಮಾವ ಬಸವ ಪೂಜಾರಿ ಮತ್ತು ಅತ್ತೆ ಶ್ರೀಮತಿ ರಮಾವತಿರವರು ಮನೆಯೊಳಗೆ ಹೋಗಲು ಬಿಡದೇ ಅವಾಚ್ಯ ಶಬ್ದಗಳಿಂದ ಬೈಯ್ದ ವಾಪಾಸು ಕಳುಹಿಸುತ್ತಿದ್ದರು, ಈ ವಿಷಯ ಗಂಡ ಗಣೇಶ ಪೂಜಾರಿಗೆ ತಿಳಿಸಿದಾಗ ನೀನು ಏನು ಬೇಕಾದರೂ ಮಾಡು ನನ್ನ ಮನೆಗೆ ಬಂದರೆ ನನ್ನ ತಂದೆಯ ಹತ್ತಿರ ಹೇಳಿ ನಿನ್ನನ್ನು ಅಲ್ಲಿಯೇ ಸಾಯಿಸುತ್ತೇನೆ ಎಂದು ಹೇಳಿ ಜೀವ ಬೆದರಿಕೆ ಹಾಕುತ್ತಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- ದಿನಾಂಕ 11.08.2023 ರಂದು ಕಲಾವತಿಯವರು ಅವರ ಗಂಡನ ಮನೆಯಾದ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ತೊಂಬತ್ತು ಎಂಬಲ್ಲಿಗೆ ಹೋಗಿ ಮನೆಯ ಒಳಗಡೆ ಹೋಗುವಾಗ ಅಲ್ಲಿ ಇದ್ದ ಬಸವ ಪೂಜಾರಿ ಮತ್ತು ಶ್ರೀಮತಿ ರಮಾವತಿರವರು ಮನೆಯೊಳಗಡೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ ಮನೆಯ ಒಳಗಡೆ ಬಂದರೆ ನಿನ್ನ ಇಲ್ಲಿಯೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಿ ಮನೆಯ ಒಳಗಡೆ ಹೋಗಲು ಬಿಡಲಿಲ್ಲ ಎಂದಿದ್ದಾರೆ. ಈ ಸಮಯ ಅತ್ತೆ ರಮಾವತಿರವರು ಮನೆಯ ಬಾಗಿಲಿನಿಂದ ಹೊರಗಡೆ ಕೈಯಿಂದ ದೂಡಿ ಹಲ್ಲೆ ಮಾಡಿರುತ್ತಾರೆ, ಈ ಸಮಯ ಅತ್ತೆ ಶ್ರೀಮತಿ ರಮಾವತಿಯವರಲ್ಲಿ ನಾನು ಈ ಮನೆಯ ಸೊಸೆ ಆದ್ದರಿಂದ ನಾನು ಇಲ್ಲಿಯೇ ಇರುತ್ತೇನೆ, ಎಂದು ಹೇಳಿದಾಗ ಅವರು ನನ್ನ ಮಗ ಗಣೇಶ ನು ನೀನು ಮನೆಗೆ ಬಂದರೆ ಸೇರಿಸಬೇಡ ಅವಳು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಹೇಳಿದ್ದಾನೆ. ,ನೀನು ಮನೆಯ ಒಳಗಡೆ ಬಂದರೆ ಇಲ್ಲಿಯೇ ಕೊಂದು ಹಾಕುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಎಂದು ಶ್ರೀಮತಿ ಕಲಾವತಿಯವರು ಗಂಡ ಹಾಗೂ ಗಂಡನ ಮನೆಯವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 498(ಎ).323.341.506 , ಜೊತೆಗ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.