ಬಜೆಟ್ ಅನ್ನು ಹೇಗೆಲ್ಲಾ ವಿಮರ್ಶಿಸಬಹುದು. ಅದಕ್ಕೆ ಯಾವ ಯಾವ ಮಾನದಂಡಗಳನ್ನು ಅನುಸರಿಸಬೇಕು. ಭೂತ ವರ್ತಮಾನ ಭವಿಷ್ಯಗಳನ್ನು ಹೇಗೆ ತುಲನೆ ಮಾಡಬೇಕು. ಬಜೆಟ್ ಯಶಸ್ಸಿನ ಗುಣಲಕ್ಷಣಗಳೇನು. ಆಧುನಿಕ ಕಾಲದ ಸಂಕೀರ್ಣ ಜೀವನ ಪ್ರವಾಹದಲ್ಲಿ ಅದನ್ನು ಹೇಗೆ ಗ್ರಹಿಸಬೇಕು. ಅಸಮಾನತೆ, ಖಾಸಗೀಕರಣ, ಭ್ರಷ್ಟಾಚಾರ ಮೇಲುಗೈ ಪಡೆದಿರುವಾಗ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಬಜೆಟ್ ಅನ್ನು ಹೇಗೆ ಲೆಕ್ಕ ಹಾಕಬೇಕು ಎಂದು ಅಂಕಿಅಂಶಗಳನ್ನು ಮೀರಿ ಈ ನಿಟ್ಟಿನಲ್ಲಿ ಮುಕ್ತವಾಗಿ ಯೋಚಿಸಿದಾಗ….
ಮುಸ್ಲಿಮರ ಅತಿಯಾದ ಓಲೈಕೆಯ ಕಾಂಗ್ರೇಸ್,
ಇಸ್ಲಾಮಿಯರನ್ನು ಅತಿಯಾಗಿ ದ್ವೇಷಿಸುವ ಬಿಜೆಪಿ,
ಬಡವರ ಬಗ್ಗೆ ಅತಿರೇಕದ ಮುದ್ದಿನ ಕಾಳಜಿ ತೋರುವ ಕಾಂಗ್ರೇಸ್,
ಶ್ರೀಮಂತರನ್ನು ಅಭಿಮಾನಿಸಿ ಅವರಿಗೆ ಸೌಕರ್ಯಗಳನ್ನು ಒದಗಿಸುವ ಬಿಜೆಪಿ,
ಸಾಮಾಜಿಕ ನ್ಯಾಯಕ್ಕಾಗಿ ಹೆಚ್ಚು ಹೆಚ್ಚು ಹಣ ಖರ್ಚು ಮಾಡುವ ಕಾಂಗ್ರೇಸ್,
ಆರ್ಥಿಕ ಚಟುವಟಿಗಳಿಗೇ ಹೆಚ್ಚು ಹೆಚ್ಚು ಮಹತ್ವ ನೀಡುವ ಬಿಜೆಪಿ,
ಸಾರಿಗೆ ವಿದ್ಯುತ್ ರೇಷನ್ ಉಚಿತ ನೀಡುವ ಕಾಂಗ್ರೇಸ್,
ಬುಲೆಟ್ ಟ್ರೈನ್, ವಿಮಾನ ನಿಲ್ದಾಣ, ದಶಪಥ ರಸ್ತೆಗಳನ್ನು ನಿರ್ಮಿಸಿ ದುಬಾರಿ ಬೆಲೆ ಹೆಚ್ಚಿಸುವ ಬಿಜೆಪಿ,
ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕಾಂಗ್ರೇಸ್,
ಏಕ್ ಭಾರತ್ ಶ್ರೇಷ್ಠ ಭಾರತ್ ಎನ್ನುವ ಬಿಜೆಪಿ,
ಗಾಂಧಿಯ ವಿಚಾರಗಳೇ ಶ್ರೇಷ್ಠ ಎನ್ನುವ ಕಾಂಗ್ರೇಸ್,
ಅದಕ್ಕೆ ವಿರುದ್ಧ ನಿಲುವಿನ ಘೋಡ್ಸೆ – ಸಾರ್ವಕರ್ ಅನ್ನು ವಿಜೃಂಭಿಸುವ ಬಿಜೆಪಿ,
ಇತಿಹಾಸ ಸರಿಯಾಗಿದೆ ಎಂದು ಭಾವಿಸಿ ಅದನ್ನೇ ಮುಂದುವರಿಸಿವ ಕಾಂಗ್ರೇಸ್,
ಇತಿಹಾಸ ತಪ್ಪಾಗಿದೆ ಎಂದು ಹೇಳಿ ಅದಕ್ಕೆ ತಿದ್ದುಪಡಿ ಮಾಡುವ ಬಿಜೆಪಿ…….
ಹೀಗೆ ತೀರಾ ವಿಭಿನ್ನ ಮತ್ತು ವಿರುದ್ಧ ನಿಲುವಿನ ಎರಡು ಪಕ್ಷಗಳು ಮಂಡಿಸುವ ಬಜೆಟ್ ಗಳು ಅವುಗಳ ಸೈದ್ದಾಂತಿಕ ನಿಲುವುಗಳಿಗೆ ಪೂರಕವಾಗಿಯೇ ಇರುತ್ತದೆ. ಅದನ್ನು ಬೆಂಬಲಿಸುವವರಿಗೆ ಹಿತವಾಗಿಯೂ, ಅದನ್ನು ವಿರೋಧಿಸುವವರಿಗೆ ಕಹಿಯಾಗಿಯೂ ಕಾಣುತ್ತದೆ.
ಇದರ ಮಧ್ಯೆ ಸಾಂಕೇತಿಕವಾಗಿ ಮತ್ತು ಅನಿವಾರ್ಯವಾಗಿ ಶಿಕ್ಷಣ ಆರೋಗ್ಯ ಕೃಷಿ ಜೊತೆಗೆ ಮತ್ತೊಂದಿಷ್ಟು ಯೋಜನೆಗಳು ಇದ್ದೇ ಇರುತ್ತದೆ. ಸಾಲ ಬಡ್ಡಿ ತೆರಿಗೆ ಸಹಾಯ ಯಾವಾಗಲೂ ಇದ್ದದ್ದೇ….
ಕೇಂದ್ರ ಮತ್ತು ರಾಜ್ಯದ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷಗಳ ಸರ್ಕಾರದ ಬಜೆಟ್ ನೋಡಿದಾಗ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಚುನಾವಣಾ ರಾಜಕೀಯ ಮತ್ತು ನಿರ್ಧಿಷ್ಟ ವರ್ಗಗಳ ಓಲೈಕೆ ಇದ್ದೇ ಇರುತ್ತದೆ. ಇದನ್ನು ಹೊರತುಪಡಿಸಿ ಬಜೆಟ್ ಬಗ್ಗೆ ವಿಮರ್ಶಿಸುವುದು ಕಷ್ಟ.
ಏಕೆಂದರೆ ಬಜೆಟ್ ಒಂದು ಅಂಕಿಅಂಶಗಳ ಸರ್ಕಸ್. ವಾಸ್ತವಿಕ ಆಡಳಿತದಲ್ಲಿ ಅದು ಶೇಕಡಾ 50% ಅನುಷ್ಠಾನ ಸಹ ಅನುಮಾನ. ಭ್ರಷ್ಟಾಚಾರ, ಜಾತಿ ಧರ್ಮ ರಕ್ತ ಸಂಬಂಧಿಗಳ ಸ್ವಜನ ಪಕ್ಷಪಾತ, ಆಡಳಿತ ಯಂತ್ರದ ನಿರ್ಲಕ್ಷ್ಯ ಮತ್ತು ಸೋಮಾರಿತನ, ಮತದಾರರ ಅಸೂಕ್ಷ್ಮತೆ, ರೋಗಗ್ರಸ್ತ ಮಾಧ್ಯಮಗಳು, ನ್ಯಾಯಾಲಯಗಳ ಅಸಹಾಯಕ ದೌರ್ಬಲ್ಯ ಎಲ್ಲವೂ ಸೇರಿ ಬಜೆಟ್ ಒಂದು ಪ್ರಹಸನದಂತೆ ಭಾಸವಾಗುತ್ತದೆ. ಆಳುವ ಪಕ್ಷದವರಿಗೆ ಸರ್ಕಾರ ಎಂಬುದು ಬಾಡಿಗೆ ಮನೆ ಇದ್ದಂತೆ……
ಈ ಅತಿರೇಕಗಳು, ಅತಿ ಹೆಚ್ಚು, ಅನಾವಶ್ಯಕ ಮುಂತಾದ ಪದಗಳು ಅದರ ಬೆಂಬಲಿಗರಿಗೆ ಅರ್ಥವಾಗದೇ ಇರಬಹುದು ಅಥವಾ ಕೆಲವೊಮ್ಮೆ ಇವು ಅತಿರೇಕಗಳಾಗದೆ ವಾಸ್ರವವೂ ನ್ಯಾಯಪರವೂ ಪ್ರಗತಿಪರವೂ ಆಗಿರಬಹುದು. ಆದರೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಕೆಲವು ಅತಿರಂಜಿತ ವರದಿಗಳು ಮತ್ತು ಬರಹಗಳು ಅದನ್ನು ವೈಭವೀಕರಿಸಿ ಜನಸಾಮಾನ್ಯರಲ್ಲಿ ಈ ಭಾವನೆ ಮೂಡಲು ಕಾರಣವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗ್ರಹಿಸುವ ಮನಸ್ಥಿತಿ ಬಹಳಷ್ಟು ಜನರಿಗೆ ಇರುವುದಿಲ್ಲ.
ಬ್ರಾಹ್ಮಣರನ್ನು ನಿರ್ಲಕ್ಷಿಸಿ ಭಾರತವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯವಿಲ್ಲ.
ಮುಸ್ಲಿಮರನ್ನು ದ್ವೇಷಿಸಿ ಇಂಡಿಯಾ ಪ್ರಬಲವಾಗಲು ಸಾಧ್ಯವಿಲ್ಲ.
ದಲಿತರನ್ನು ನಿರ್ಲಕ್ಷಿಸಿ ಈ ದೇಶವನ್ನು ಸಶಕ್ತವಾಗಿ ನಿರ್ಮಿಸಲು ಸಾಧ್ಯವಿಲ್ಲ.
ಕಮ್ಯೂನಿಸ್ಟರನ್ನು ವಿರೋಧಿಸಿ ಅಥವಾ ಸಂಘ ಪರಿವಾರವನ್ನು ನಿಷೇಧಿಸಿಯೂ ರಾಷ್ಟ್ರ ಮತ್ತು ಸಮಾಜ ನೆಮ್ಮದಿಯಾಗಿರಲು ಸಾಧ್ಯವಿಲ್ಲ.
ಕ್ರಿಶ್ಚಿಯನ್ ಸಿಖ್ ಜೈನ ಬುದ್ಧ ಪಾರ್ಸಿ ಹೀಗೆ ಯಾವುದೇ ಧರ್ಮ ಜಾತಿ ಭಾಷೆ ಪ್ರದೇಶ ಯಾವುದನ್ನು ಸಂಖ್ಯೆಗಳ ಆಧಾರದಲ್ಲಿ ನಿರ್ಲಕ್ಷಿಸಿ ಅಥವಾ ದ್ವೇಷಿಸಿ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಅದನ್ನು ಅರ್ಥಮಾಡಿಕೊಳ್ಳಲು ಆಡಳಿತ ಮಾಡುವವರಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು ಪ್ರಜಾಪ್ರಭುತ್ವ. ಚುನಾವಣೆ ಇಲ್ಲಿನ ಯಶಸ್ಸಿನ ಮಾರ್ಗ. ಅದಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ.
ಇಲ್ಲಿ ಹೊಂದಾಣಿಕೆ ಅನಿವಾರ್ಯ. ಆದರೆ ಸಮನ್ವಯ ಸಾಧಿಸಲು ಈ ಅತಿರೇಕಿಗಳದೇ ದೊಡ್ಡ ಸಮಸ್ಯೆ ಮತ್ತು ಸವಾಲು. ಅವರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಸದಾ ಘರ್ಷಣೆಯನ್ನೇ ಬಯಸುತ್ತಾರೆ. ಅದರ ಫಲವೇ ಸೇಡಿನ ರಾಜಕೀಯ. ಇತ್ತೀಚಿನ ದಿನಗಳಲ್ಲಿ ಇದು ಬಜೆಟ್ ಸೇರಿ ಎಲ್ಲಾ ಹಂತಗಳಲ್ಲೂ ಕಾಣುತ್ತಿದೆ.
ಪಶ್ಚಿಮ ಬಂಗಾಳದ ನಿನ್ನೆಯ ಚುನಾವಣಾ ಹಿಂಸೆ ಅದರ ಮುಂದುವರಿದ ಭಾಗ.
ಆದ್ದರಿಂದ ಭಾರತದ ರಾಜಕೀಯ ಆರ್ಥಿಕ ಸಾಮಾಜಿಕ ಪರಿಸ್ಥಿತಿಯನ್ನು ವಿಮರ್ಶಿಸುವ ಮೊದಲು ಮಾನವೀಯ ಮೌಲ್ಯಗಳನ್ನು ಈ ಸಮಾಜದಲ್ಲಿ ಪುನರ್ ಸ್ಥಾಪಿಸಬೇಕಿದೆ. ಒಡೆದ ಜನರ ಮನಸ್ಸುಗಳನ್ನು ಮೊದಲು ಸರಿಯಾಗಿ ಜೋಡಿಸಬೇಕಿದೆ. ಇತರರನ್ನು ಪ್ರೀತಿಸುವ ಭಾರತೀಯ ಪ್ರಜ್ಞೆ ಮೂಡಿಸಬೇಕಿದೆ. ಇಲ್ಲದಿದ್ದರೆ ಯಾವ ವಿಮರ್ಶೆಗೂ ಸ್ಪಷ್ಟ ಅರ್ಥ ಸಿಗುವುದಿಲ್ಲ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..