Spread the love

ಎಷ್ಟೊಂದು ತತ್ವ ಸಿದ್ದಾಂತ ವಿಚಾರ ಮೌಲ್ಯಗಳು – ಒಮ್ಮೆ ಯೋಚಿಸಿ ಅದರ ಸದುಪಯೋಗ ಆಗುತ್ತಿದಿಯೇ……

ಪುರೋಹಿತ ಶಾಹಿ,ಬ್ರಾಹ್ಮಣ್ಯ,
ಮನುವಾದ,‌ ಅಂಬೇಡ್ಕರ್ ವಾದ,
ಸಮಾಜವಾದ,‌ ಸಮತಾವಾದ,
ಮಾವೋವಾದ, ಗಾಂಧಿ ವಾದ,
ಲೋಹಿಯಾ ವಾದ, ನಾಜಿ ವಾದ,
ಬಸವ ತತ್ವ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮ,‌ ಜೈನ ಧರ್ಮ, ಸಿಖ್ ಧರ್ಮ,
ಪಾರ್ಸಿ ಧರ್ಮ, ಜೋರಾಷ್ಟ್ರಿಯನ್ ಧರ್ಮ, ಅಲ್ಲಾ ಯೇಸು, ರಾಮ ಕೃಷ್ಣ,
ಸರ್ಕಾರ, ಪೋಲೀಸ್,‌ ನ್ಯಾಯಾಲಯ,
ಕಾನೂನು, ಸಂವಿಧಾನ,……..

ಶಂಕರ ಮಧ್ವ ರಾಮಾನುಜರು,
ದ್ವೈತ ಅದ್ವೈತ ವಿಶಿಷ್ಟಾದ್ವೈತ ತತ್ವಗಳು…..

ಕನಕ ಪುರಂದರ ದಾಸರು,
ಅವರ ಕೀರ್ತನೆಗಳು,……

ಕಬೀರ್ ಮೀರಾಭಾಯಿ ,
ಅವರ ಭಜನೆಗಳು…..

ವ್ಯಾಸ ವಾಲ್ಮೀಕಿಯವರು,
ರಾಮಾಯಣ, ಮಹಾಭಾರತ, ಭಗವದ್ಗೀತೆ…….

ವೇದ ಉಪನಿಷತ್ತು,
ಮನುಸ್ಮೃತಿ ಮತ್ತು ಇತರ ಸ್ಮೃತಿಗಳು………..

ಗೌತಮ ಬುದ್ಧ ಮಹಾವೀರ ಗುರುನಾನಕರು,
ಅವರ ಸಂದೇಶಗಳು……..

ಬಸವ ಅಲ್ಲಮ ಅಕ್ಕಮಹಾದೇವಿ,
ಅವರ ವಚನಗಳು…….

ವಿವೇಕಾನಂದ ಗಾಂಧಿ ಅಂಬೇಡ್ಕರರು,
ಅವರ ವಿಚಾರಗಳು…..

ಹರಪ್ಪ ಮಹೆಂಜೊದಾರೋ ನಾಗರಿಕತೆಯಿಂದ ನರೇಂದ್ರ ಮೋದಿ ಆಡಳಿತದವರೆಗೆ………..

ಈ ನೆಲದಲ್ಲಿ ಬಹಳಷ್ಟು ತತ್ವಗಳು ಸಿದ್ದಾಂತಗಳು ಮೌಲ್ಯಗಳು ನಿಯಮಗಳು ರೂಪಿತವಾಗಿವೆ…….

ಹುಟ್ಟು ಸಾವಿನ ನಡುವಿನ ಸುಮಾರು 6೦/8೦ ವರ್ಷಗಳ ಸಮಯವನ್ನು ಉಪಯುಕ್ತವಾಗಿ ಕಳೆಯಲು ಎಷ್ಟೊಂದು ಸರ್ಕಸ್ ಮಾಡಬೇಕಾಗಿದೆ.

2/3 ಹೊತ್ತಿನ ಊಟ, ಒಂದಷ್ಟು ದೈಹಿಕ ವಾಂಚೆಗಳು, ಸ್ವಲ್ಪ ನಿದ್ದೆ, ಸಂಸಾರ, ಇಷ್ಟು ಮಾತ್ರಕ್ಕೆ ಅದನ್ನು ಕ್ರಮಬದ್ಧ ಗೊಳಿಸಲು ಏನೇನೇಲ್ಲಾ ಸಿದ್ದಾಂತಗಳು…….

ತೆಗೆದುಕೊಂಡು ಬಂದಿರುವುದು ಏನಿಲ್ಲ, ತೆಗೆದುಕೊಂಡು ಹೋಗುವುದೂ ಏನು ಇಲ್ಲ,
ಸಾವನ್ನು ಗೆಲ್ಲಲೂ ಸಾಧ್ಯವಿಲ್ಲ,
ಹಾಗಿದ್ದರೂ ಎಷ್ಟೊಂದು ತಾಕಲಾಟಗಳು…….

ಆದರೂ,
ಇನ್ನೂ ಸಾಮಾನ್ಯ ಜನರ ನೆಮ್ಮದಿ ಗಗನ ಕುಸುಮವಾಗಿದೆ.
ನಾಗರಿಕ ಸಮಾಜ ಕನಸೇ ಆಗಿದೆ……

ಸಹಜ ಸರಳ ಪ್ರಕೃತಿಯಿಂದ ದೂರವಾಗುತ್ತಾ ಅನುಕೂಲ ಸಿಂದು ವಿಚಾರಗಳನ್ನು ಅಳವಡಿಸಿಕೊಂಡರುವುದೇ ಇದಕ್ಕೆ ಬಹುತೇಕ ಕಾರಣ.

ಬದಲಾಗುವ ಸಮಯ ಬಂದಿದೆ……..

ಈ ಎಲ್ಲವುಗಳ ಮೂಲ ಉದ್ದೇಶ,
ಸ್ವಲ್ಪ ಹೆಚ್ಚು ಕಡಿಮೆ ಬದುಕಿನ ಸಾರ್ಥಕತೆಗೆ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕೆ ಅನುಕೂಲವಾಗಲಿ ಎಂದು ಅವರವರ ಅಭಿಪ್ರಾಯ ಅವರವರ ನೆಲೆಯಲ್ಲಿ ಬೇರೆ ಬೇರೆ ರೂಪದಲ್ಲಿ ಬೇರೆ ಬೇರೆ ಮಾರ್ಗದಲ್ಲಿ ಹೇಳಿದ್ದಾರೆ.

ಈ ಎಲ್ಲಾ ಅಂಶಗಳ ಪರ ವಿರೋಧ ದ್ವೇಷ ಅಭಿಮಾನ ಕ್ರಿಯೆ ಪ್ರತಿಕ್ರಿಯೆಗಳ ಸಮ್ಮಿಲನ ನಮ್ಮ ಇಂದಿನ ಜೀವನಶೈಲಿ ರೂಪಿಸುತ್ತಿದೆ.

ಈ ಐತಿಹಾಸಿಕ ವ್ಯಕ್ತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಈ ಸಮಾಜದ ಮೇಲೆ ಪರಿಣಾಮ ಬೀರಿದ್ದಾರೆ.

ಹಾಗಾದರೆ,
ಈ ಕ್ಷಣದಲ್ಲಿ ಭಾರತದ ಸುಮಾರು ‌14೦ ಕೋಟಿ ಜನ ನಾವು ಸಂತೋಷ ಪಡುವಷ್ಟು ನೆಮ್ಮದಿಯಿಂದ ಉತ್ತಮ ಜೀವನಮಟ್ಟದಿಂದ ಬದುಕು ಸಾಗಿಸುತ್ತಿದ್ದಾರೆಯೇ ?
ಅವರ ಕನಿಷ್ಠ ಅವಶ್ಯಕತೆಗಳು, ಭದ್ರತೆ ತೃಪ್ತಿಕರವಾಗಿದೆಯೇ ?

ಹೌದು, ಎಂದಾದಲ್ಲಿ ಅವರುಗಳ ಚಿಂತನೆಗೆ ಸಾರ್ಥಕತೆ ಸಿಗುತ್ತದೆ….

ಇಲ್ಲಾ, ಎಂದಾದಲ್ಲಿ
ಅವರ ಚಿಂತನೆಗಳ ಪ್ರಾಯೋಗಿಕತೆ ಪ್ರಶ್ನಿಸಬೇಕಾಗುತ್ತದೆ……

ನಮಗೆ ಇಡೀ ದೇಶದ ದಿನನಿತ್ಯದ ಚಟುವಟಿಕೆಗಳು ತಿಳಿಯುವುದು ಸುದ್ದಿ ಮಾಧ್ಯಮಗಳಿಂದ. ಅದರ ‌ಆಧಾರದಲ್ಲಿ ಹೇಳುವುದಾದರೆ…….

ಭಾರತದ ಬಹುತೇಕ ಜನ ಅಸಹನೆಯಿಂದ ಬಳಲುತ್ತಿದ್ದಾರೆ,
ಅಪರಾಧ ಅಪಘಾತ ಅನಾರೋಗ್ಯಗಳು ಕಿತ್ತು ತಿನ್ನುತ್ತಿವೆ.
ತಾಂತ್ರಿಕ ಪ್ರಗತಿಯಲ್ಲಿ ಒಂದಷ್ಟು ವಿಶ್ವ ಮಟ್ಟದ ಸಾಧನೆಯಾಗಿದ್ದರೂ ಅದು ಎಲ್ಲರಿಗೂ ಸಿಗದೆ ಮಾನಸಿಕ ಪ್ರಬುದ್ದತೆ ಮತ್ತು ದೈಹಿಕ ಕ್ಷಮತೆ ಕ್ಷೀಣಿಸಿತ್ತಿದೆ.

ಮೇಲ್ಮಟ್ಟದಲ್ಲಿ ಆರ್ಥಿಕ ಪ್ರಗತಿ ಕಾಣಿಸುತ್ತಿದ್ದರೂ, ಮೌಲ್ಯಗಳ ಕುಸಿತ ಪ್ರತಿಯೊಬ್ಬರ ಗಮನಕ್ಕೂ ಬರುತ್ತಿದೆ.ಅದರ ಬಗ್ಗೆ ವ್ಯಾಪಕ ನೋವು ಎಲ್ಲರ ಮನಸ್ಸುಗಳನ್ನು ಕೊರೆಯುತ್ತಿದೆ.

ವಿಶ್ವದ ಬಹುದೊಡ್ಡ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿದೆ.
ಮೇಲ್ನೋಟಕ್ಕೆ ಉತ್ತಮವಾಗಿ ಕಾಣುವ ಅಥವಾ ಕೆಲವರಿಂದ ಹಾಗೆ ಭಾವಿಸುವ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಆಂತರ್ಯದಲ್ಲಿ ಶಿಥಿಲವಾಗಿದೆ…….

ಈ ಕ್ಷಣಕ್ಕೆ ಯಾವುದೇ ನೇರ ಅಪಾಯ ಇಲ್ಲದಿದ್ದರೂ ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳು ಅಪಾಯಕಾರಿ ಹಂತ ತಲುಪುವ ಸಾಧ್ಯತೆ ಇದೆ.

ಶತಶತಮಾನಗಳಿಂದ ಇರುವ ಈ ವ್ಯವಸ್ಥೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತದೆ ಎಂದು ಬಹಳ ಜನ ಭಾವಿಸುತ್ತಾರೆ. ಆದರೆ ಆ ಸಂದರ್ಭದಲ್ಲಿ ಆಗುವ ಸಾವು ನೋವು ನಾಗರಿಕತೆಯ ಅವಸಾನಕ್ಕೆ ದಾರಿ ಮಾಡಿಕೊಡುತ್ತದೆ.
ಅದಕ್ಕೆ ಬದಲಾಗಿ, ನಾವೇ ಅನುಭವದ ಪ್ರಾಯೋಗಿಕ ನಡೆಗಳಿಂದ ನಮ್ಮನ್ನು ನಿಯಂತ್ರಿಸಿಕೊಂಡರೆ, ನಾಗರಿಕ ಪ್ರಜ್ಞೆ ಬೆಳೆಸಿ ಕೊಂಡರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ವ್ಯವಸ್ಥೆ ಬಿಟ್ಟು ಹೋಗಬಹುದು.

ಇಲ್ಲದಿದ್ದರೆ ಈ ಕ್ಷಣದ ಅನಾರೋಗ್ಯಕರ ವಾತಾವರಣ ಅವರನ್ನು ಇನ್ನಷ್ಟು ಭೀಕರತೆಗೆ ತಳ್ಳಬಹುದು…
ಮೇಲಿನ ಮಹಾತ್ಮರ ಎಲ್ಲಾ ಆಶಯಗಳು ಮಣ್ಣು ಪಾಲಾಗಬಹುದು.
ಈಗಲೇ ಎಚ್ಚೆತ್ತುಕೊಳ್ಳೋಣ……..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!