Spread the love

ಅಕ್ಕಿಗಾಗಿ ಹಕ್ಕಿನ ಹೋರಾಟ ( ನಾಟಕ‌)
“””””‘””””””””””””””””””””””””””””””””””””””‘”””””
ರೈತರು ಕಷ್ಟ ಪಟ್ಟು ಬೆಳೆದ – ಉಗ್ರಾಣದಲ್ಲಿ ಇರುವ ಅಕ್ಕಿಯನ್ನು ಸಾರ್ವಜನಿಕರ ಮತಗಳಿಂದ ಗೆದ್ದು, ಸಾರ್ವಜನಿಕರ ತೆರಿಗೆ ಹಣದಿಂದಲೇ ಬದುಕುತ್ತಿರುವ ಎರಡು ಸರ್ಕಾರಗಳಿಗೆ ಹಂಚಿಕೊಂಡು ತಿನ್ನಲು‌ ಸಾಧ್ಯವಾಗದೆ ಬೀದಿಯಲ್ಲಿ ಜಗಳವಾಡುವ ಮಟ್ಟಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ದುರ್ಗತಿ ಬಂತೇ ಅಥವಾ ತಂದರೇ…….

ಕರ್ನಾಟಕ ಸರ್ಕಾರ ಕಾಂಗ್ರೇಸ್ ಪಕ್ಷದ ಮತ್ತು ಸಿದ್ದರಾಮಯ್ಯನವರ ಸ್ವಂತ ಆಸ್ತಿಯಲ್ಲ ಹಾಗೆಯೇ ಕೇಂದ್ರ ಸರ್ಕಾರ ಬಿಜೆಪಿ ಮತ್ತು ನರೇಂದ್ರ ಮೋದಿಯವರ ಸ್ವಂತ ಆಸ್ತಿಯಲ್ಲ. ಒಂದು ಸ್ಪಷ್ಟ ಮತ್ತು ಅತ್ಯುತ್ತಮ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಇವರು ಸಾರ್ವಜನಿಕ ಸೇವಕರು. ಇವರ ಇಷ್ಟದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಹ ಇದೆ. ಅದು ಸಹ ಸಾರ್ವಜನಿಕ ಹಣದಿಂದಲೇ ಕೂಲಿ ಪಡೆದು ಕಾರ್ಯನಿರ್ವಹಿಸುತ್ತಿದೆ.

ಅಕ್ಕಿ ಹಂಚಿಕೆಯಂತ ಸಣ್ಣ ವಿಷಯವನ್ನು ಮಾತುಕತೆಯಿಂದ ಬಗೆಹರಿಸಲು ಸಾಧ್ಯವಾಗದೆ ಬೀದಿ ಜಗಳವಾಡಿದರೆ ಸಾಮಾನ್ಯ ಜನ ಬಸ್ಸಿನ ಸೀಟಿಗಾಗಿ, ಜಮೀನಿಗಾಗಿ, ನೀರಿಗಾಗಿ, ಮಕ್ಕಳು ಸಿಹಿ ತಿಂಡಿಗಾಗಿ, ಪ್ರಾಣಿಗಳು ಮಾಂಸಕ್ಕಾಗಿ, ಪಕ್ಷಿಗಳು ಆಹಾರಕ್ಕಾಗಿ ಜಗಳವಾಡಿದರೆ ಅದು ತಪ್ಪೇ. ಐಎಎಸ್‌ ಅಧಿಕಾರಿಗಳು, ಉನ್ನತ ನ್ಯಾಯಾಲಯದ ನ್ಯಾಯಾಧೀಶರು, ಮಂತ್ರಿಗಳು, ವಿಜ್ಞಾನಿಗಳು, ತತ್ವಜ್ಞಾನಿಗಳು, ಸಂವಿಧಾನ ತಜ್ಞರು ಯಾರಿಗೂ ಈ ಸಮಸ್ಯೆ ಬಗೆಹರಿಸಲು ಸಾಮರ್ಥ್ಯವಿಲ್ಲ ಅಥವಾ ಅವಕಾಶವಿಲ್ಲ ಅಥವಾ ಆಸಕ್ತಿಯಿಲ್ಲ ಎನ್ನುವುದಾದರೆ ಈ ವಿಶೇಷಣಗಳಿಗೆ ಅರ್ಥವಿದೆಯೇ…..

ನಮ್ಮ ಬುದ್ದಿವಂತಿಕೆ ಸಮಾಜದ ಒಳಿತಿಗಾಗಿ ಉಪಯೋಗವಾಗದಿದ್ದರೆ ಅದರ ಪ್ರಯೋಜನವಾದರು ಏನು. ಬಿಜೆಪಿ ಅಭಿಮಾನಿಗಳು ಯಾಕೆ ಕೊಡಬೇಕು ಎಂದರೆ, ಕಾಂಗ್ರೇಸ್ ಅಭಿಮಾನಿಗಳು ಯಾಕೆ ಕೊಡಬಾರದು ಎನ್ನುತ್ತಾರೆ. ಅಷ್ಟರ ಮಟ್ಟಿಗೆ ಎರಡೂ ಗುಂಪಿನವರು ಸಂಕುಚಿತವಾಗಿ ಯೋಚಿಸುತ್ತಾರೆ.

ಅಕ್ಕಿ ವಿತರಣೆ ಒಂದು ಅತ್ಯಂತ ಸಣ್ಣ ವಿಷಯ. ರಾಜ್ಯ ಮತ್ತು ಕೇಂದ್ರದ ಇಬ್ಬರು ಉನ್ನತ ಉಗ್ರಾಣ ಅಧಿಕಾರಿಗಳು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಇಬ್ಬರು ಉನ್ನತ ಅಧಿಕಾರಿಗಳು ಮಾತನಾಡಿ ಒಂದು ತೀರ್ಮಾನ ಮಾಡಬೇಕು ಮತ್ತು ಮಾಡುತ್ತಾರೆ. ಆದರೆ ಸಮಸ್ಯೆ ಇರುವುದು ರಾಜಕಾರಣಿಗಳ ಸ್ವಾರ್ಥದಲ್ಲಿ. ಅವರಿಗೆ ಕೆಟ್ಟ ಹೆಸರು ಬರಲಿ ಎಂದು ಇವರು, ಇವರಿಗೆ ಕೆಟ್ಟ ಹೆಸರು ಬರಲಿ ಎಂದು ಅವರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕುತಂತ್ರ ಮಾಡುತ್ತಾರೆ.

ಇವರ ಈ ಕುಚೇಷ್ಟೆಗಳನ್ನು ಜನರಿಗೆ ಸ್ಪಷ್ಟವಾಗಿ ಮನವರಿಕೆ ಮಾಡಿಕೊಡಬೇಕಾದ ಕರ್ತವ್ಯ ಮತ್ತು ಜವಾಬ್ದಾರಿ ಹೊಂದಿರುವ ಪ್ರಜಾಪ್ರಭುತ್ವ ನಾಲ್ಕನೆಯ ಅಂಗ ಮಾಧ್ಯಮಗಳು ಇದಕ್ಕೆ ಅನವಶ್ಯಕ ಪ್ರಚಾರ ನೀಡಿ ತಮ್ಮ ಪ್ರಶ್ನೆಗಳ ಮೂಲಕ ರಾಜಕಾರಣಿಗಳ ಹುಚ್ಚು ಕೆರಳುವಂತೆ ಮಾಡಿ ಬೆಂಕಿಗೆ ತುಪ್ಪ ಸುರಿಯುತ್ತಾರೆ. ಆಡಳಿತ ಪಕ್ಷದವರನ್ನು ಅವರು ಕೊಡುವುದಿಲ್ಲ ಏನು ಮಾಡುತ್ತೀರಿ ಎಂದೂ, ವಿರೋಧ ಪಕ್ಷದವರನ್ನು ಅವರು ಬಿಡುವುದಿಲ್ಲ ಏನು ಮಾಡುತ್ತೀರಿ ಎಂದೂ ಪದೇ ಪದೇ ಕೇಳಿ ಜನರಲ್ಲಿ ರೋಚಕತೆ ಸೃಷ್ಟಿಸುತ್ತಾರೆ. ಇಡೀ ರಾಜ್ಯ ಇದೇ ವಿಷಯವನ್ನು ಕುರಿತು ಮಾತನಾಡುವಂತೆ ಮಾಡುತ್ತಾರೆ. ಇಲ್ಲಿ ಕೃಷಿ ಶಿಕ್ಷಣ ಆರೋಗ್ಯ ಸಾಮಾನ್ಯರ ಬದುಕನ್ನು ನರಕ ಮಾಡುತ್ತಿದೆ.

ಎಲ್ಲರೂ ಗಮನಿಸಬೇಕಾದ ಅಂಶವೆಂದರೆ, ನರೇಂದ್ರ ಮೋದಿಯವರು ಅಣಬೆ ಸೂಪ್ ಕುಡಿಯುತ್ತಾರೆ. ಸಿದ್ದರಾಮಯ್ಯನವರು ನಾಟಿ ಕೋಳಿ ತಿನ್ನುತ್ತಾರೆ. ಈ ಉಗ್ರಾಣದ ಸಂಗ್ರಹದ ಅಕ್ಕಿಯನ್ನು ತಿನ್ನುವವರು ನಾವುಗಳು. ಜಗಳ ಮಾಡುವವರು ಅವರು. ಇದೇ ಪ್ರಜಾಪ್ರಭುತ್ವ.

ಎಷ್ಟೊಂದು ರೋಷಾವೇಶದಿಂದ ಒಬ್ಬರಿಗೊಬ್ಬರು ಟೀಕೆ ಮಾಡುತ್ತಾ ಜನರಲ್ಲಿ ತಮ್ಮ ಪರವಾಗಿ ಅಭಿಪ್ರಾಯ ಮೂಡಿಸಲು ಪ್ರಯತ್ನಿಸುವ ನಾಟಕವಾಡುತ್ತಾರೆ ಸೂಕ್ಷ್ಮವಾಗಿ ಗಮನಿಸಿ. ಅದರಲ್ಲಿ ಸ್ವಲ್ಪ ಸಮಯ ಇಬ್ಬರೂ ಒಟ್ಟಿಗೆ ಕುಳಿತು ವಾಸ್ತವ ನೆಲೆಯಲ್ಲಿ ಕೊಡು ಕೊಳ್ಳುವ ನೀತಿಯ ಅಡಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಹಿಡಿದು ಬಗೆಹರಿಸಬಹುದಲ್ಲವೇ…..

ಇದೇನು ಚೀನಾ ಪಾಕಿಸ್ತಾನದವರ ಜೊತೆಗಿನ ಗುದ್ದಾಟವೇ. ನಮ್ಮದೇ ದೇಶದ ನಮ್ಮದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿಷಯ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕೆಲಸ ಮಾಡುವುದು ಎಂದರೆ ಪ್ರತಿ ಸಣ್ಣ ವಿಷಯಕ್ಕೂ ಜಗಳ ಮಾಡಬೇಕು ಎಂದು ಅರ್ಥವೇ.

ಮಳೆಯ ವ್ಯತ್ಯಾಸ, ಅದರಿಂದ ಕೃಷಿಯ ಮೇಲಿನ ಪರಿಣಾಮ, ಶಾಲಾ ಕಾಲೇಜುಗಳ ಸಮಸ್ಯೆ, ಪ್ರತಿ ಮನೆಯ ಆರೋಗ್ಯದ ಸಮಸ್ಯೆ, ಪ್ರಕೃತಿಯ ನಿರಂತರ ಮಲಿನತೆ, ಪ್ರತಿ ಸರ್ಕಾರಿ ಕಚೇರಿಯ ಭ್ರಷ್ಟಾಚಾರ ಮುಂತಾದ ಅನೇಕ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ದೊಡ್ಡ ಸವಾಲು ಎಲ್ಲಾ ಶಾಸಕರುಗಳಿಗೆ ಒಂದು ಸವಾಲಾಗಿರುವ ಸಮಯದಲ್ಲಿ ಇರುವ ಅಕ್ಕಿಯನ್ನು ಹಂಚಿಕೊಳ್ಳಲು ಕಿತ್ತಾಡುತ್ತಿರುವ ಈ ರಾಜಕೀಯ ಪಕ್ಷಗಳು ಅದನ್ನು ನೋಡುತ್ತಾ ಸುಮ್ಮನೆ ಕುಳಿತಿರುವ ನಾವು ಒಳ್ಳೆಯ ಮನರಂಜನಾ ಸಿನಿಮಾದಂತಿದೆ.

ಹಂಚಿಕೊಂಡು ತಿನ್ನುವ ಕಾಲ ಹೋಗಿ ಕಿತ್ತುಕೊಂಡು ತಿನ್ನುವ ಅನಾಗರಿಕ ಸಮಾಜದಲ್ಲಿ ನಾವು – ನೀವು. ನಮ್ಮ ಮಕ್ಕಳ ಕಾಲಕ್ಕೆ ಹೊಡೆದಾಡಿಕೊಂಡು ತಿನ್ನಬೇಕಾಗಬಹುದು. ಯೋಚಿಸಿ.
ತಿಳಿವಳಿಕೆ – ನಡವಳಿಕೆಯಾಗದೆ ವ್ಯವಸ್ಥೆ ಬದಲಾಗದು. ಏಕೆಂದರೆ ಅಕ್ಷರ ಕಲಿತ ಅನಕ್ಷರಸ್ಥರು ನಾವು………..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!