ಉಡುಪಿ: ದಿನಾಂಕ 23/05/2023(ಹಾಯ್ ಉಡುಪಿ ನ್ಯೂಸ್) ತಮ್ಮನಿಗೆ ಹಲ್ಲೆ ಮಾಡಿದವರಿಗೆ ಗದರಿಸಿದ್ದ ಅಣ್ಣನಿಗೆ ಯುವಕರ ತಂಡವೊಂದು ಚಾಕುವಿನಿಂದ ಇರಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಉಡುಪಿ, ಕೊಳಂಬೆ 3 ನೇ ಅಡ್ಡ ರಸ್ತೆ , ಶಾಂತಿ ನಗರ, ಅಮ್ಮ ನಿಲಯ ನಿವಾಸಿ ದೀಪಕ್ (22) ಎಂಬವರ ಅಣ್ಣ ಶರತ್ ಎಂಬಾತನು ಆತನ ಕೆಲಸದ ಹುಡುಗ ಚರಣ್ ಎಂಬಾತನೊಂದಿಗೆ ಬೈಕ್‌ನಲ್ಲಿ ಉಡುಪಿ ತಾಲೂಕು ಪುತ್ತೂರು ಬಬ್ಬುಸ್ವಾಮಿ ದೇವಸ್ಥಾನದ ಬಳಿ ಹೋಗುತ್ತಿರುವಾಗ ಆಪಾದಿತರಾದ ನಾಗರಾಜ್, ಕಾರ್ತಿಕ್, ದೇಶರಾಜು ಮತ್ತು ಇತರರು 3 ಬೈಕ್‌ಗಳಲ್ಲಿ ಬಂದು, ಶರತ್‌ನನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ, ಕೊಲ್ಲುವ ಉದ್ದೇಶದಿಂದ ಅವರು ತಂದಿದ್ದ ಚೂರಿಗಳಿಂದ ಏಕಾಏಕಿ ಶರತ್‌ನ ಬಲಹಣೆಗೆ, ಎಡಭುಜಕ್ಕೆ, ಬೆನ್ನಿನ ಭಾಗಗಳಿಗೆ ಮತ್ತು ಬಲಗಾಲಿಗೆ ತಿವಿದು ಗಾಯಗೊಳಿಸಿದ್ದಲ್ಲದೆ ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದು ಹೆಲ್ಮೆಟ್‌ನಿಂದ ಹೊಡೆದಿರುತ್ತಾರೆ ಎಂದು ದೂರಿದ್ದಾರೆ.
ಆಪಾದಿತರು ತಿವಿದ ಚಾಕು ಶರತ್‌ನ ದೇಹದಲ್ಲಿಯೇ ಇದ್ದು, ಚರಣ್ ಹಾಗೂ ಇತರರು ಶರತ್‌ನನ್ನು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ. ಸುಮಾರು 15 ದಿನಗಳ ಹಿಂದೆ ಆಪಾದಿತರು ದೀಪಕ್ ರವರಿಗೆ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇವರ ಅಣ್ಣ ಶರತ್‌ನು ಆಪಾದಿತರಿಗೆ ಗದರಿಸಿರುವುದೇ ಈ ಕೃತ್ಯಕ್ಕೆ ಕಾರಣವಾಗಿರುತ್ತದೆ ಎಂದು ದೀಪಕ್ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು , ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 148, 341, 323, 324, 307 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.