Spread the love

ಅಕ್ಷರ ಕಲಿಕೆ ಒಂದು ನೈಪುಣ್ಯ ಅಥವಾ ಸುಲಭವಾಗಿ ಮಾಹಿತಿ ತಿಳಿಯುವ ಒಂದು ವಿಧಾನ ಅಥವಾ ಜೀವನ ಕೌಶಲ್ಯದ ಸಾಧನವೇ ಹೊರತು ಅದೇ ಜ್ಞಾನವಲ್ಲ, ಅರಿವಲ್ಲ, ಮೌಲ್ಯವಲ್ಲ, ಬದುಕಲ್ಲ.

ಅಕ್ಷರ ಕಲಿಕೆ ಎಂಬುದು ಅಡುಗೆ ಮಾಡುವ, ಹೊಲಿಗೆ ಮಾಡುವ, ವಾಹನ ಚಾಲನೆ ಮಾಡುವ, ಮನೆ ಕಟ್ಟುವ, ಭೇಟೆಯಾಡುವ ರೀತಿಯ ಒಂದು ಕೌಶಲವೇ ಹೊರತು ಅದು ಎಲ್ಲವನ್ನೂ ಒಳಗೊಂಡ ವಿಶೇಷ ಅತಿಮಾನುಷ ಶಕ್ತಿಯೇನು ಅಲ್ಲ.

ಅಕ್ಷರ ಕಲಿಯದೆಯೂ ವ್ಯಕ್ತಿತ್ವವಿದೆ, ಜ್ಞಾನವಿದೆ, ನಾಗರೀಕತೆಯಿದೆ ಬದುಕಿದೆ,
ಹಾಗೆಯೇ ಅಕ್ಷರ ಕಲಿತೂ ಅಜ಼್ಞಾನವಿದೆ, ಮೋಸವಿದೆ, ಅಮಾನವೀಯತೆಯಿದೆ, ಅನಾಗರಿಕತೆ ಇದೆ……

ಅಕ್ಷರಸ್ಥರ ಈಗಿನ ಮೋಸ ವಂಚನೆ ದುಷ್ಟತನ ಭ್ರಷ್ಟಾಚಾರ ಜಾತಿವಾದ ಶೋಷಣೆ ಅಪನಂಬಿಕೆ ಎಲ್ಲವನ್ನೂ ಗಮನಿಸಿದಾಗ ಅನಕ್ಷರಸ್ಥರ ಕೈ ಬಾಯಿ ಮೆದುಳು ಮನಸ್ಸು ಹೃದಯ ನಾಲಿಗೆ ನಂಬಿಕೆ ವ್ಯವಹಾರ ಆ ಮುಗ್ಧತೆ ಮತ್ತು ಆ ಶುದ್ಧತೆಯ ಮಹತ್ವ ನಮಗೆ ಅರಿವಾಗುತ್ತದೆ….

ನ್ಯಾಯಾಂಗ ಕಾರ್ಯಾಂಗ ಶಾಸಕಾಂಗ ಪತ್ರಿಕಾರಂಗ ಧರ್ಮಾಂಗ ಶಿಕ್ಷಕರು ಪೋಲೀಸರು ವಕೀಲರು ಎಲ್ಲವನ್ನೂ ಬಹುತೇಕ ಅಕ್ಷರಸ್ಥರೇ ನಿರ್ವಹಿಸುವಾಗಲೂ ಇಡೀ ವ್ಯವಸ್ಥೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ. ಎಲ್ಲಾ ಸ್ವಾತಂತ್ರ್ಯ ಇರುವಾಗಲು ಮನಸ್ಸುಗಳು ಗುಲಾಮಿತನದತ್ತ ಅಥವಾ ಜೀತ ಪದ್ಧತಿಯತ್ತ ಸಾಗುತ್ತಿವೆ…..

ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರು, ಧರ್ಮಾಂಧರು, ಜಾತಿವಾದಿಗಳು, ವಂಶಾಡಳಿತದ ಒಂದೇ ಕುಟುಂಬದವರು, ಜೈಲಿನ ಕಂಬಿ ಎಣಿಸಿದವರು, ಗಡೀಪಾರಾದವರು ಹೀಗೆ ನೀಚಾತಿನೀಚರನ್ನು ಗುಪ್ತ ಮತದಾನದ ಮೂಲಕ ನಮ್ಮ ಜನಪ್ರತಿನಿಧಿಗಳಾಗಿ ಆಯ್ಕೆ ಮಾಡುವವರು ಸಹ ಬಹುತೇಕ ಅಕ್ಷರಸ್ಥರೇ ಎಂಬುದನ್ನು ಹೇಗೆ ಮರೆಯುವುದು.

ಅನಕ್ಷರಸ್ಥರ ಕ್ರೌರ್ಯ ಮತ್ತು ತಪ್ಪುಗಳು ಅವರ ಅಜ್ಞಾನದಿಂದ, ತಪ್ಪು ತಿಳಿವಳಿಕೆಯಿಂದ, ಸಂಪರ್ಕದ ಕೊರತೆಯಿಂದ, ಸಹಜ ಸಂಪ್ರದಾಯಗಳ ಒತ್ತಡದಿಂದ ಘಟಿಸಿದರೆ ಅಕ್ಷರಸ್ಥರ ಕ್ರಿಮಿನಲ್ ಚಟುವಟಿಕೆಗಳು ಉದ್ದೇಶಪೂರ್ವಕವಾಗಿ, ಅತಿ ಸ್ವಾರ್ಥದಿಂದ ಅರಿವಿನ ಅಂಚಿನಲ್ಲಿಯೇ ಸಂಭವಿಸುತ್ತವೆ.

ಪೋಲೀಸ್ ಸ್ಟೇಷನ್ ಅಥವಾ ನ್ಯಾಯಾಲಯದಲ್ಲಿ ದಾಖಲಾಗಿರುವ ಶೇಕಡಾ 90% ರಷ್ಟು ಮೊಕದ್ದಮೆಗಳಲ್ಲಿ ವಾದಿ ಅಥವಾ ಪ್ರತಿವಾದಿಗಳು ಅಕ್ಷರಸ್ಥ ವಂಚಕರೇ ಆಗಿರುತ್ತಾರೆ. ದುರುದ್ದೇಶವೇ ಅದರ ಮೂಲ ಕಾರಣವಾಗಿರುತ್ತದೆ.

ಹೆಬ್ಬೆಟ್ಟು ಅಥವಾ ಅನಕ್ಷರಸ್ಥ ಎಂದು ಮೂದಲಿಸಿದರೆ ಅಕ್ಷರ ಸಂಶೋಧನೆಯ ಹಿಂದಿನ, ಅಕ್ಷರ ಕಲಿಯದ ಇಂದಿನ ಇಡೀ ಜನಾಂಗ ಅಥವಾ ಸಮುದಾಯಗಳನ್ನೇ ಅಗೌರವಿಸಿದಂತೆ ಆಗುತ್ತದೆ.

ಅನಕ್ಷರಸ್ಥರಿಗೆ ಮಾಹಿತಿಯ ಕೊರತೆ ಇರಬಹುದು ಅಥವಾ ತಂತ್ರಜ್ಞಾನದ ಕೊರತೆ ಇರಬಹುದು. ಆದರೆ ಮಾನವೀಯತೆಯ ಕೊರತೆ ಇರುವುದಿಲ್ಲ. ಜ್ಞಾನದ ಕೊರತೆ ಇರುವುದಿಲ್ಲ. ಭತ್ತ ರಾಗಿ ಜೋಳ ಹಣ್ಣು ತರಕಾರಿ ಬೇಳೆಕಾಳುಗಳು ಹೈನುಗಾರಿಕೆ ಕೌಟುಂಬಿಕ ವ್ಯವಸ್ಥೆ ಗೌರವ ಅಭಿಮಾನ ಭಕ್ತಿ ಧೈರ್ಯ ಎಲ್ಲವೂ, ಎಲ್ಲಾ ರೀತಿಯ ಅನುಭಾವಿಕ ವಿಜ್ಞಾನಿಗಳು ರೂಪಗೊಂಡಿದ್ದೇ ಅನಕ್ಷರಸ್ಥರಿಂದ.

ಹಾಗೆಂದು ಅನಕ್ಷರತೆಯನ್ನು ಬೆಂಬಲಿಸುತ್ತಿಲ್ಲ. ಈಗಿನ ಕಾಲಕ್ಕೆ ಎಲ್ಲರೂ ಅಕ್ಷರಸ್ಥರು ಆಗಲೇ ಬೇಕು. ಅದಕ್ಕೆ ಸಂಪೂರ್ಣ ಬೆಂಬಲವಿದೆ. ಆದರೆ ಅನಕ್ಷರಸ್ಥರು ದಡ್ಡರು – ಮೂರ್ಖರು, ವಿವೇಚನೆ ಇಲ್ಲದವರು ಎಂಬ ಟೀಕೆ ದುರಹಂಕಾರದ ಮಾತಾಗುತ್ತದೆ.

ಪ್ರಕೃತಿಯ ಸಹಜ ಬದುಕು ಅಕ್ಷರಗಳ ಮೇಲೆ ನಿಂತಿಲ್ಲ. ಅದು ಅನಿವಾರ್ಯವೂ ಅಲ್ಲ. ಬದುಕು ನಿಂತಿರುವುದು ಜೀವಪರ ನಿಲುವಿನ ಮೇಲೆ ಮತ್ತು ಮಾನವೀಯ ಧರ್ಮದ ಮೇಲೆ ಮಾತ್ರ.

ಇಂದಿನ ಆಧುನಿಕ ಸಮಾಜಕ್ಕೆ ಅತಿ ಅವಶ್ಯಕವಾಗಿ ಬೇಕಾಗಿರುವುದು ಬುದ್ದಿವಂತರಿಗಿಂತ ಹೆಚ್ಚಾಗಿ ಹೃದಯವಂತರು……..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!