( ನಿನ್ನೆಯ ಲೇಖನದ ಮುಂದುವರಿದ ಭಾಗ……..)
ಮಹಾಭಾರತದ ಶ್ರೀಕೃಷ್ಣ —
ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮ ಗಾಂಧಿ………
( ಇದು ಗಾಂಧಿ ಮತ್ತು ಕೃಷ್ಣರ ನಡುವಿನ ಹೋಲಿಕೆಯಲ್ಲ. ವ್ಯಾವಹಾರಿಕ ಚತುರತೆಯ ಯಶಸ್ಸು ಮತ್ತು ಮಾನವೀಯ ಮೌಲ್ಯಗಳ ಅಧಃಪತನದ ಕಾರಣಗಳ ಹುಡುಕಾಟ ಮಾತ್ರ )
ಕೃಷ್ಣ ಸ್ವತಃ ಎಲ್ಲಿಯೂ ಅಷ್ಟಾಗಿ ಆಯುಧಗಳನ್ನು ಉಪಯೋಗಿಸುವುದಿಲ್ಲ. ಆದರೆ ತೀರಾ ಅವಶ್ಯವಾದಾಗ ಸುದರ್ಶನ ಚಕ್ರ ಬಳಸಿದ ಉದಾಹರಣೆ ಇದೆ.
ಧರ್ಮ ಆಧಾರಿತ ತಂತ್ರಗಾರಿಕೆಯ ಕೃಷ್ಣ ವಿಚಾರಗಳು ಮತ್ತು ಅದೇ ಧರ್ಮ ಆಧಾರಿತ ಮಾನವೀಯ ಮೌಲ್ಯಗಳ ಗಾಂಧಿ ವಿಚಾರಗಳು ಮತ್ತು ತದನಂತರ ಸೃಷ್ಟಿಯಾದ ಅಂಬೇಡ್ಕರ್ ಸಂವಿಧಾನ, ನಮ್ಮನ್ನು ಸುತ್ತುವರೆದಿರುವ ಇಸ್ಲಾಂ ಕ್ರಿಶ್ಚಿಯನ್ ಭೌದ್ದ ಧರ್ಮಗಳು, ಮಾರ್ಕ್ಸ್ ವಾದ ಬಂಡವಾಳ ಶಾಹಿ ವ್ಯವಸ್ಥೆ ಪ್ರಜಾಪ್ರಭುತ್ವ ಇವುಗಳನ್ನು ಗಮನದಲ್ಲಿಟ್ಟುಕೊಂಡು ಅಭಿಪ್ರಾಯ ರೂಪಿಸಿಕೊಳ್ಳಬೇಕು.
ಆದರೆ ಗಾಂಧಿ ಒಮ್ಮೆಯೂ ಯಾವುದೇ ಆಯುಧ ಬಳಸಲಿಲ್ಲ. ಲೇಖನಿಯನ್ನೇ ಆಯುಧವಾಗಿ ಬಳಸಿ ವಿರೋಧಿಗಳನ್ನು ಮಣಿಸುತ್ತಿದ್ದರು.
ಕೃಷ್ಣನಿಗೆ ಮಹಾ ಸ್ತ್ರೀ ಲೋಲ, ರಸಿಕ, ಶೃಂಗಾರ ಪ್ರಿಯ, ಸಾಂಕೇತಿಕವಾಗಿ ಎಷ್ಟೋ ಹೆಂಡಿರ ಮುದ್ದಿನ ಗಂಡ ಎಂಬ ಬಿರುದುಗಳು ಕಥೆಯ ರೂಪದಲ್ಲಿ ಇದೆ.
ಗಾಂಧಿ ಇದಕ್ಕೆ ವಿರುದ್ದವಾಗಿ ಏಕ ಪತ್ನಿ ವ್ರತಸ್ಥ ಮಾತ್ರವಲ್ಲದೆ ಮದುವೆ ಮತ್ತು ಮಕ್ಕಳಾದ ನಂತರವೂ ಬ್ರಹ್ಮ ಚರ್ಯ ನಿಯಂತ್ರಣ ಪಾಲಿಸಲು ಕರೆಕೊಡುತ್ತಾರೆ
ಕೃಷ್ಣ ಅತಿಮಾನುಷ ಮತ್ತು ಚಾಣಾಕ್ಷ ತಂತ್ರಗಳಿಂದ ತನ್ನ ಕಾರ್ಯಗಳನ್ನು ಗೆಲ್ಲುತ್ತಾ ಹೋದರೆ ಗಾಂಧಿ ಪ್ರೀತಿ ವಿಶ್ವಾಸ ಕರುಣೆ ಸರಳತೆ ಯಿಂದಲೇ ಗೆಲುವು ದಾಖಲಿಸಿದರು.
ಕೃಷ್ಣನಿಗೆ ಗುರಿಯೇ ಮುಖ್ಯ. ಅದಕ್ಕಾಗಿ ಯಾವ ಮಾರ್ಗ ಅನುಸರಿಸಲೂ ಹಿಂಜರಿಯುವುದಿಲ್ಲ. ಆದರೆ ಗಾಂಧಿಗೆ ಗುರಿಗಿಂತ ಮಾರ್ಗ ಮುಖ್ಯ. ಕೆಟ್ಟ ಮಾರ್ಗದಲ್ಲಿ ಗುರಿ ತಲುಪಲು ಅವರೆಂದೂ ಇಷ್ಟಪಡಲಿಲ್ಲ.
ಈ ಇಬ್ಬರನ್ನೂ ಇನ್ನಷ್ಟು ಹತ್ತಿರದಿಂದ ನೋಡಲು ಒಂದು ಕಾಲ್ಪನಿಕ ” ರೇ ” ಪ್ರಪಂಚಕ್ಕೆ ಹೋಗೋಣ.
ಒಂದು ವೇಳೆ ಕೃಷ್ಣ, ಗಾಂಧಿಯ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರವೇಶಿಸಿದ್ದರೆ ಹೇಗಿರುತ್ತಿತ್ತು…….
ಬ್ರಿಟೀಷರು ಭಾರತವನ್ನು ಇನ್ನೂ ಇಪ್ಪತ್ತು ಮೂವತ್ತು ವರ್ಷಗಳ ಮೊದಲೇ ತೊರೆಯುತ್ತಿದ್ದರು. ಭಾರತ ಪಾಕಿಸ್ತಾನ ವಿಭಜನೆಯಾಗುತ್ತಿರಲಿಲ್ಲ. ಇದು ಹಿಂದುತ್ವದ ರಾಷ್ಟ್ರವಾಗಿ ಆಡಳಿತ ನಡೆಸಿ ಮುಸ್ಲಿಮರು ಎರಡನೇ ದರ್ಜೆಯ ನಾಗರಿಕರಾಗಿ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿದ್ದರು ಮತ್ತು ಅವರ ಮೇಲೆ ದೌರ್ಜನ್ಯ ನಿರಂತರವಾಗಿರುತ್ತಿತ್ತು.
ಬೇರೆ ವಿಷಯಗಳಲ್ಲಿ ಒಂದಷ್ಟು ಸುಧಾರಣೆ ಸಾಧ್ಯವಾಗುತ್ತಿದ್ದರೂ ಜಾತಿ ವ್ಯವಸ್ಥೆ ಇನ್ನೂ ಹೆಚ್ಚು ಅಧೀಕೃತತೆ ಪಡೆಯುತ್ತಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಕುರುಕ್ಷೇತ್ರಕ್ಕಿಂತ ಹೆಚ್ಚಿನ ಹಿಂಸೆ ನಡೆದು ಭಾರತದ ಸ್ವಾತಂತ್ರ್ಯಕ್ಕೆ ಒಂದು ಅರ್ಥವೇ ಇರುತ್ತಿರಲಿಲ್ಲ. ಎಲ್ಲಾ ಕಡೆ ಅಂಗವಿಕಲರು, ವಿದುವೆಯರು, ಅನಾಥರು ತುಂಬಿತುಳುಕುತ್ತಿದ್ದರು.
ಕುರುಕ್ಷೇತ್ರ ಯುದ್ಧ ಗೆದ್ದ ನಂತರ ಪಾಂಡವರಿಗೆ ಆ ಬಗ್ಗೆ ಮೂಡಿದ ವೈರಾಗ್ಯದ ರೀತಿಯಲ್ಲಿ.
ಅದೇ ರೀತಿ ಒಂದು ವೇಳೆ ಗಾಂಧಿ ಮಹಾಭಾರತದ ಸಮಯದಲ್ಲಿ ಹಸ್ತಿನಾಪುರ ಪ್ರವೇಶಿಸಿದ್ದರೆ ಹೇಗಿರುತ್ತಿತ್ತು…….
ಕುರುಕ್ಷೇತ್ರ ಯುದ್ಧವೇ ನಡೆಯುತ್ತಿರಲಿಲ್ಲ. ದಾಯಾದಿ ಕಲಹ ಇದ್ದರೂ ಗಾಂಧಿ ಸತ್ಯ ನ್ಯಾಯ ಉಪವಾಸ ಧರ್ಮದ ಅರ್ಥವನ್ನು ಪ್ರೀತಿಯಿಂದ ತಿಳಿವಳಿಕೆ ಹೇಳಿ, ಸಹನೆಯಿಂದ ದುರ್ಯೋಧನನ ಹಠವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತಿದ್ದರು.
ಪಾಂಡವರು ಮತ್ತು ಕೌರವರ ನಡುವೆ ಜೂಜಾಟವೇ ನಿಷೇಧಿಸಲಾಗುತ್ತಿತ್ತು. ದ್ರೌಪದಿ ವಸ್ತ್ರಾಪವರಣ ಪ್ರಕರಣವನ್ನು ಗಾಂಧಿ ನಾಯಕತ್ವದ ಸಮಯದಲ್ಲಿ ಊಹಿಸಲೂ ಸಾಧ್ಯವಿಲ್ಲ. ಅದನ್ನು ಅವರು ತಮ್ಮ ಆತ್ಮತ್ಯಾಗದಿಂದಲೇ ತಡೆಯುತ್ತಿದ್ದರು.
ಭೀಷ್ಮ ದ್ರೋಣ ಕೃಪಾಚಾರ್ಯರ ಮಧ್ಯಸ್ಥಿಕೆಯಲ್ಲಿ ರಾಜ್ಯವನ್ನು ಒಂದು ಹಂತಕ್ಕೆ ವಿಭಾಗಿಸಿ ಕೌರವರಿಗೆ ಹೆಚ್ಚು ಪ್ರದೇಶ ಕೊಟ್ಟು ಪಾಂಡವರಿಗೆ ಸಮಾಧಾನ ಮಾಡುತ್ತಿದ್ದರು.
ಕರ್ಣನನ್ನು ಸಹ ಒಪ್ಪಿಸಿ ಪಾಂಡವರ ರಾಜ್ಯದ ಪಟ್ಟವನ್ನು ನಿಶ್ಚಿತವಾಗಿ ಅವನಿಗೆ ಒಪ್ಪಿಸುತ್ತಿದ್ದರು.
ಕಂಸ ಜರಾಸಂಧ ಕೀಚಕ ಮುಂತಾದ ದುಷ್ಟ ಶಕ್ತಿಗಳ ಮನಃ ಪರಿವರ್ತನೆಗೆ ಪ್ರಯತ್ನಿಸುತ್ತಿದ್ದರು. ಬಹುತೇಕ ಯಶಸ್ವಿಯಾಗುತ್ತಿದ್ದರು ಆದರೆ ಅವರಿಂದ ಹತರಾಗುವ ಸಾಧ್ಯತೆಯೂ ಇತ್ತು.
ಗಾಂಧಿಯ ಹತ್ಯೆಯ ಕೆಲವೇ ತಿಂಗಳುಗಳಲ್ಲಿ ಪಾಂಡವರು ಮತ್ತು ಕೌರವರು ಮತ್ತೆ ಹೊಡೆದಾಡಿಕೊಳ್ಳುತ್ತಿದ್ದರು.
ಕೇವಲ ಈ ಅಂಶಗಳ ಮೇಲೆ ಮಾತ್ರ ಕೃಷ್ಣ ಇಸಂ ಗಾಂಧಿ ಇಸಂ ನಿರ್ಧರಿಸಲು ಆಗುವುದಿಲ್ಲ. ಇವು ಮೇಲ್ನೋಟದ ಸತ್ಯಗಳು ಮಾತ್ರ. ಒಂದು ಸಮಾಜ ಮತ್ತು ಒಂದು ಬೃಹತ್ ದೇಶವನ್ನು ದೀರ್ಘಕಾಲ ಭದ್ರ ಬುನಾದಿಯ ಮೇಲೆ ನಿಲ್ಲಿಸಬೇಕಾದರೆ ಯಾವ ತತ್ವಗಳು ಅಡಕವಾಗಿರಬೇಕು ಎಂಬ ವಾಸ್ತವಿಕತೆ ಬಹಳ ಮುಖ್ಯ.
ಜೊತೆಗೆ ಮಹಾಭಾರತ ಮತ್ತು ಭಗವದ್ಗೀತೆಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿರುವವರು ಅದರ ಗುಂಗಿಗೆ ಒಳಗಾಗಿ ಕೃಷ್ಣನ ಬಗ್ಗೆ ಆರಾಧನಾ ಭಾವನೆ ಹೊಂದಿದ್ದರೆ ಅಥವಾ ಅದೇ ರೀತಿ ಗಾಂಧಿಯವರನ್ನು ಬಹುವಾಗಿ ಅಭಿಮಾನಿಸಿ ಗಾಂಧಿ ಸಿಂಡ್ರೋಮ್ ಗೆ ಒಳಗಾಗಿದ್ದರೆ ಈ ಹೋಲಿಕೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಇವುಗಳಿಂದ ಮನಸ್ಸನ್ನು ಬಿಡುಗಡೆಗೊಳಿಸಿ ದೂರದಲ್ಲಿ ನಿಂತು ಯೋಚಿಸಿದರೆ ಇದು ಹೆಚ್ಚು ಸ್ಪಷ್ಟವಾಗುತ್ತದೆ.
2023 ರ ಇಂದಿನ ಸನ್ನಿವೇಶದಲ್ಲಿ ಗಾಂಧಿ ಮತ್ತು ಕೃಷ್ಣನ ಚಿಂತನೆಗಳಲ್ಲಿ ಯಾವುದು ಹೆಚ್ಚು ಸೂಕ್ತ ಮತ್ತು ಅದನ್ನು ಪ್ರಜಾಸತ್ತಾತ್ಮಕ ಮತ್ತು ಸಂವಿಧಾನಾತ್ಮಕ ನೆಲೆಯಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮ ಮನದಲ್ಲಿ ಉದ್ಭವಿಸುತ್ತದೆ.
ಕೃಷ್ಣ ವಾಸ್ತವವಾದಿ ಮತ್ತು ಗಾಂಧಿ ಆದರ್ಶವಾದಿ ಎಂಬಂತೆಯೂ ಕಂಡುಬರುತ್ತದೆ. ಗಾಂಧಿಯವರ Nobality ಅಥವಾ ಪಾವಿತ್ಯತೆ ಅಥವಾ ದೈವಿಕತೆ ಅಥವಾ ಶುದ್ಧತೆ ಒಂದು ಇಡೀ ದೇಶದ ಜನರಲ್ಲಿ ನಿರೀಕ್ಷಿಸುವುದು ಅಸಾಧ್ಯ. ಜನ ಸಮುದಾಯಗಳ ವರ್ತನೆ ಗಮನಿಸಿದರೆ ಅವರಿಗೆ ಸ್ವಾತಂತ್ರ್ಯವೂ ಬೇಕು ನಿಯಂತ್ರಣವೂ ಬೇಕು. ಅರಿಷಡ್ವರ್ಗಗಳನ್ನು ಗೆಲ್ಲುವುದು ಸಾಮಾನ್ಯರಿಗೆ ಕಷ್ಟ ಅಥವಾ ಅಸಾಧ್ಯ. ಅಂತಹ ಸಂದರ್ಭದಲ್ಲಿ ಕೃಷ್ಣನ ತಂತ್ರಗಳು ಅಥವಾ ನಿಲುವುಗಳು ಹೆಚ್ಚು ಪ್ರಯೋಜನಕಾರಿ ಮತ್ತು ದೀರ್ಘಕಾಲದಲ್ಲಿ ವ್ಯವಸ್ಥೆಯ ನಿಯಂತ್ರಣಕ್ಕೆ ಸಹಕಾರಿ.
ಗಾಂಧಿಯ ಆದರ್ಶ ಭೂಲೋಕವನ್ನೇ ಸ್ವರ್ಗದಂತೆ ಮಾಡುತ್ತದೆ. ನಿಜ ನಾಗರಿಕ ಸಮಾಜವೆಂದರೆ ಅದು ಗಾಂಧಿಯವರ ಆದರ್ಶ. ಆದರೆ ಎಲ್ಲರೂ ಗಾಂಧಿಯವರಂತ ವ್ಯಕ್ತಿತ್ವವನ್ನೇ ಹೊಂದಿರಬೇಕಾಗುತ್ತದೆ. ಅದು ಸದ್ಯದಲ್ಲಿ ಅಸಾಧ್ಯ. ಗಾಂಧಿ ಬ್ರಿಟಿಷ್ ಕಾಲದ ಮೀಸಲಾತಿಯನ್ನು ವಿರೋಧಿಸುವುದೂ, ಅಂಬೇಡ್ಕರ್ ಗಾಂಧಿಯನ್ನು ವಿರೋಧಿಸುವುದೂ ಇದೇ ಆದರ್ಶ ಮತ್ತು ವಾಸ್ತವದ ತಾಕಲಾಟ.
ಹಾಗೆ ವಿಚಾರಗಳ ದೃಷ್ಟಿಯಿಂದ ನೋಡಿದರೆ ಗಾಂಧಿ ದೇವರಾಗುತ್ತಾರೆ ಕೃಷ್ಣ ಸಾಮಾನ್ಯ ಮನುಷ್ಯರಂತ್ತಾಗುತ್ತಾರೆ.
ಅತಿ ಮಾನುಷ ಶಕ್ತಿಯ ಕೃಷ್ಣನ ಸಾವು ಸಹಜವಾಗಿರದೆ ಹತ್ಯೆಯಾಗಿರುತ್ತದೆ. ದುರಂತವೆಂದರೇ ಅಹಿಂಸೆಯನ್ನು ಉಸಿರಾಡಿದ ಗಾಂಧಿಯೂ ಹತ್ಯೆಯಾಗುತ್ತಾರೆ.
ಯುದ್ದೋತ್ಸಾಹಿ ಕೃಷ್ಣ,
ಶಾಂತಿ ಪ್ರಿಯ ಗಾಂಧಿ,
ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳ ಒಂದು ಸಣ್ಣ ಪಕ್ಷಿನೋಟ.
ಆಯ್ಕೆಗಳು ನಮ್ಮ ಬದುಕಿನ ಅನುಭವಗಳು ನಮಗೆ ನೀಡಿದ ಜ್ಞಾನದ ಆಧಾರದ ಮೇಲೆ ನಿರ್ಧರಿಸುತ್ತದೆ.
ಆಯ್ಕೆಗಳ ಅವಕಾಶ ಅವರವರ ಭಾವಕ್ಕೆ………. ( ಮುಕ್ತಾಯ )
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..