ನವದೆಹಲಿ: ದಿನಾಂಕ 21-03-2023(ಹಾಯ್ ಉಡುಪಿ ನ್ಯೂಸ್) ‘ಭ್ರಷ್ಟ ಬಿಜೆಪಿ ಸರ್ಕಾರದ ಶೋಷಣೆಗಳನ್ನು ಜನರು ಗಮನಿಸುತ್ತಿದ್ದಾರೆ. ಕಾಲ ಬಂದಾಗ ಉತ್ತರಿಸುತ್ತಾರೆ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
‘ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಈಗಲೂ ಒಳಗಾಗುತ್ತಿದ್ದಾರೆ’ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ವಿಚಾರವಾಗಿ ದೆಹಲಿ ಪೊಲೀಸರು ಭಾನುವಾರ ಅವರನ್ನು ವಿಚಾರಣೆ ನಡೆಸಿದ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
‘ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರು, ಬಡವರು, ದಲಿತರು,ಆದಿವಾಸಿಗಳು, ರೈತರು ಮತ್ತು ಯುವ ಜನತೆಯ ಪರವಾಗಿ ರಾಹುಲ್ ಧ್ವನಿ ಎತ್ತಿದ್ದಕ್ಕೆ ರಾಹುಲ್ ಗಾಂಧಿಗೆ ನೋಟಿಸ್ ನೀಡಲಾಗಿದೆ. ಭ್ರಷ್ಟ ಬಿಜೆಪಿ ಸರ್ಕಾರದ ಶೋಷಣೆಯನ್ನು ಜನರು ಗಮನಿಸುತ್ತಿದ್ದಾರೆ. ಸಮಯ ಬಂದಾಗ ಉತ್ತರಿಸುತ್ತಾರೆ ’ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ.
‘38 ವಿದೇಶಿ ಶೆಲ್ ಕಂಪನಿಗಳೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿರುವ ಆರೋಪಿ, ಪ್ರಧಾನಿಯ ಆಪ್ತ ಮಿತ್ರ ಗೌತಮ್ ಅದಾನಿಗೆ ನೋಟಿಸ್ ನೀಡಿಲ್ಲ. ಅದಾನಿ ಮೂಲಕ ರಕ್ಷಣಾ ವಲಯಕ್ಕೆ ನಕಲಿ ಕಂಪನಿಗಳು ಒಳನುಸುಳಿರುವುದಕ್ಕೂ ನೋಟಿಸ್ ಇಲ್ಲ. ಅದಾನಿಗೆ ಅನುಕೂಲ ಮಾಡಿಕೊಡಲು ನಿಯಮ ಬದಲಾಯಿಸಿದ ಪ್ರಕರಣದಲ್ಲಿ ಸರ್ಕಾರವೇ ಆರೋಪಿ ಸ್ಥಾನದಲ್ಲಿದೆ’ ಎಂದು ಪ್ರಿಯಾಂಕಾ ಕಿಡಿಕಾರಿದ್ದಾರೆ.