Spread the love

ನಾನು ಹಿಂದೂ
ನಾನು ಮುಸ್ಲಿಂ,
ನಾನು ಸಿಖ್,
ನಾನು ಕ್ರಿಶ್ಚಿಯನ್,
ನಾನು ಬೌದ್ಧ,
ನಾನು ಜೈನ,
ನಾನು ಲಿಂಗಾಯತ,
ನಾನು ಒಕ್ಕಲಿಗ,
ನಾನು ದಲಿತ.
ನಾನು…………..

ಇಲ್ಲ ನೀವು ಈ ಎಲ್ಲವನ್ನೂ ಮೀರಿ ಮೊದಲು ಭಾರತೀಯರು….

We the people of India………

ಹೀಗೆ ಹೇಳಿದ್ದು ಭಾರತ ಗಣರಾಜ್ಯಗಳ ಒಕ್ಕೂಟದ ಸಂವಿಧಾನ……

ವೇದ ಉಪನಿಷತ್ತುಗಳು ಭಗವದ್ಗೀತೆ – ಖುರಾನ್ – ಬೈಬಲ್ – ಗ್ರಂಥ ಸಾಹಿಬ್ – ಬುದ್ದ ಜ್ಞಾನ – ಜೈನ ಪಂಥ – ಬಸವ ತತ್ವ – ಶೈವ ಪಂಥ – ದ್ವೈತ – ಅದ್ವೈತ – ವಿಶಿಷ್ಟಾದ್ವೈತ ಎಲ್ಲವನ್ನೂ ಒಳಗೊಂಡ ಆದರೆ ಎಲ್ಲವನ್ನೂ ಸಂಕಲಿಸಿದ – ಎಲ್ಲವನ್ನೂ ಸಮೀಕರಿಸಿದ ಪರ್ಯಾಯ ಮಾರ್ಗವೇ ಸಂವಿಧಾನ…..

ಧರ್ಮಗಳ ಕೊಳೆಯನ್ನು ತೊಳೆದು ಹೊಳಪು ನೀಡಿ ಸಮಾನತೆ ಸ್ವಾತಂತ್ರ್ಯ ಎಂಬ ಹೊಸ ನಾಗರಿಕ ಲಕ್ಷಣಗಳ ಆಧುನಿಕ ರೂಪವೇ ಸಂವಿಧಾನ…

ಜನರನ್ನು ಶ್ರೇಷ್ಠತೆಯ ವ್ಯಸನದ ಭ್ರಮೆಗಳಿಗೆ ಒಳಪಡಿಸುವ ಧರ್ಮಗಳು, ಆಚರಣೆಗಳ ಮೂಲಕ ವಿಭಜಿಸುವ ಧರ್ಮಗಳು,
ಹುಟ್ಟಿನ ಆಧಾರದ ಮೇಲೆ ಬೇರ್ಪಡಿಸುವ ಜಾತಿಗಳು, ಇವುಗಳಿಗೆ ಬದಲಾವಣೆ ತಂದು ಮನುಷ್ಯತ್ವದ ಆಧಾರದ ಮೇಲೆ ಒಂದು ಗೂಡಿಸುವ ವಿಧಿ ವಿಧಾನಗಳೇ – ನೀತಿ ನಿಯಮಗಳೇ ಸಂವಿಧಾನ……

ಬಹುತ್ವ ಭಾರತ ಬಲಿಷ್ಠ ಭಾರತ ಆಶಯವನ್ನು ವಾಸ್ತವದಲ್ಲಿ ನಿಜವಾಗಿಸಲು ಇರುವ ಅತ್ಯುತ್ತಮ ಮಾರ್ಗ ಸಂವಿಧಾನ…..

ಯಾವ ದೃಷ್ಟಿಕೋನದಿಂದ ನೋಡಿದರು ಭಾರತದಲ್ಲಿ ಮನುಷ್ಯ ಪ್ರೀತಿಯ ಸಂಕೇತ ಸಂವಿಧಾನ ಮಾತ್ರ……

ಇಂತಹ ಸಂವಿಧಾನವನ್ನು ಅಳವಡಿಸಿಕೊಂಡು ಅದನ್ನು ಸಂಭ್ರಮದಿಂದ ಜಾರಿ ಮಾಡಿ ಗಣರಾಜ್ಯಗಳ ಒಕ್ಕೂಟವಾದ ನೆನಪಿನ ದಿನ ಜನವರಿ 26…….

ಸಂವಿಧಾನವೇ ಧರ್ಮವಾದ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ಮತ್ತು ವೈವಿಧ್ಯಮಯ ದೇಶ ಭಾರತ. ಅದನ್ನು ವರ್ಣಿಸುವುದೇ ಒಂದು ಹೆಮ್ಮೆ…….

ಜೀವ ನೀಡಿದ ಜನ್ಮಭೂಮಿಯೆ,
ನಿನಗಿದೋ ಬಹುದೊಡ್ಡ ಸಲಾಂ……

ಎಷ್ಟೊಂದು ಅದ್ಭುತ, ಆಶ್ಚರ್ಯ, ವೈವಿಧ್ಯತೆಗಳ ಮಡಿಲು ನಿನ್ನದು…….

ನಿನ್ನಲ್ಲಿರುವ ಜಾತಿಗಳೆಷ್ಟೋ, ಧರ್ಮಗಳೆಷ್ಟೋ, ದೇವರುಗಳೆಷ್ಟೋ,……

ನಿನ್ನಲ್ಲಡಗಿರುವ ಭಾಷೆಗಳೆಷ್ಟೋ, ಪಕ್ಷಗಳೆಷ್ಟೋ, ಪ್ರದೇಶಗಳೆಷ್ಟೋ,…..

ನಿನೊಂದಿರುವ ನದಿಗಳೆಷ್ಟೋ, ಬೆಟ್ಟಗಳೆಷ್ಟೋ, ಸರೋವರಗಳೆಷ್ಟೋ,……

ನೀನಾಚರಿಸುವ ಉತ್ಸವಗಳೆಷ್ಟೋ, ಜಾತ್ರೆಗಳೆಷ್ಟೋ, ಸಂಪ್ರದಾಯಗಳೆಷ್ಟೋ,….

ನಿನ್ನಭಿಮಾನದ ಕಲೆ, ಸಾಹಿತ್ಯ, ಸಂಗೀತ, ತಂತ್ರಜ್ಞಾನಗಳೆಷ್ಟೋ,

ನೀನನುಭವಿಸಿದ ದಾಳಿ, ಹಿಂಸೆ, ದೌರ್ಜನ್ಯ, ಅತ್ಯಾಚಾರಗಳೆಷ್ಟೋ,..

ನಿನ್ನೊಳಗಿನ ಅಮಾಯಕರು, ಅಸಹಾಯಕರು, ಶೋಷಿತರೆಷ್ಟೋ,…..

ನಿಜವಾದ ದೇಶದ್ರೋಹಿಗಳೆಷ್ಟೋ, ಕಪಟ ದೇಶಭಕ್ತರೆಷ್ಟೋ,
ಕ್ರೂರಿಗಳೆಷ್ಟೋ, ವಂಚಕರೆಷ್ಟೋ,…….

ಆಗರ್ಭ ಶ್ರೀಮಂತರೆಷ್ಟೋ, ಹಸಿವಿನಿಂದ ಸತ್ತವರೆಷ್ಟೋ,
ದೇವ ಮಂದಿರಗಳ ವ್ಯೆವಿದ್ಯತೆಯೆಷ್ಟೋ,
ಸ್ಮಶಾನಗಳ ಭಿನ್ನತೆಯೆಷ್ಟೋ,…….

ಮಸೀದಿಗಳೆಷ್ಟೋ,
ಚರ್ಚುಗಳೆಷ್ಟೋ,
ಜೈನ ಮಂದಿರಗಳೆಷ್ಟೋ ಗುರುದ್ವಾರಗಳೆಷ್ಟೋ,
ಬೌದ್ದ ಸ್ತೂಪಗಳೆಷ್ಟೋ,….

ಪ್ರಕೃತಿಯ ವಿಕೋಪಗಳೆಷ್ಟೋ, ಮಾನವನ ಚೇಷ್ಟೆಗಳೆಷ್ಟೋ,….

ಆದರೂ,
ನಿಂತಿರುವೆ ಹೆಬ್ಬಂಡೆಯಾಗಿ, ವಜ್ರದೇಹಿಯಾಗಿ,
ಹೂ ಹೃದಯದ ಮಾತೆಯಾಗಿ, ಶುಭ್ರಮನಸ್ಸಿನ ಮಮತೆಯಾಗಿ,……

ಇಷ್ಟಾದರೂ ಇರಿಯುತ್ತಿದ್ದಾರೆ ನಿನ್ನನ್ನು ನಿನ್ನದೇ ಹಿತಶತ್ರುಗಳು,…..

ನಿನ್ನೊಂದಿಗೆ ತಾವೂ ನಾಶವಾಗುತ್ತೇವೆಂಬ ಅರಿವಿಲ್ಲದ ಮತಿಹೀನರು,…..

ಎಲ್ಲವೂ ತಿಳಿದಿರುವ ಜ್ಞಾನಿಗಳು ನಾವೆಂಬ ಅಹಂಕಾರದ ಅಜ್ಞಾನಿಗಳು,….

ಸ್ವಾತಂತ್ರ್ಯದ ಅರ್ಥಗೊತ್ತಿಲ್ಲ, ಸಮಾನತೆಯ ಮಹತ್ವ ತಿಳಿದಿಲ್ಲ,……

ತಾಳ್ಮೆ ಇಲ್ಲ, ತ್ಯಾಗವಿಲ್ಲ, ಕರುಣೆಯಿಲ್ಲ, ದುರಹಂಕಾರವೇ ಎಲ್ಲಾ…….

ಆದರೂ,
ಇಷ್ಟೆಲ್ಲಾ ಹೊತ್ತಿರುವ, ನಮಗೆಲ್ಲಾ ಆಶ್ರಯ ನೀಡಿರುವ,
ನಿನ್ನ ಮಡಿಲ ಮಕ್ಕಳಾದ ನಮ್ಮಿಂದ,
ಭಾರತ ದೇಶವೇ ಇಗೋ ನಿನಗೊಂದು ಬಹುದೊಡ್ಡ ಸಲಾಂ…….

ಎಲ್ಲರಿಗೂ ಭಾರತ ಗಣರಾಜ್ಯೋತ್ಸವದ ಶುಭಾಶಯಗಳು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!