Spread the love

ಅಹ ಅಹ ಆಹಾ ಆಹಾ…….
😁😁😁😁😁😁……

ತಲೆ ಹಿಡುಕರ ನಡುವೆ……….

ಸಾರ್ವಜನಿಕರು, ಮಾಧ್ಯಮಗಳು, ಶಾಸಕರು, ಮಂತ್ರಿಗಳು, ವಿರೋಧ ಪಕ್ಷಗಳ ನಾಯಕರು, ಮಾಜಿ ಮುಖ್ಯಮಂತ್ರಿಗಳು ಕೊನೆಗೆ ರಾಜ್ಯದ ಮುಖ್ಯಮಂತ್ರಿ ಸೇರಿ ಎಲ್ಲರು ಕಳೆದ ಒಂದು ವಾರದಿಂದ ಒಬ್ಬ ವ್ಯಕ್ತಿಯ ಬಗ್ಗೆ ನಿರಂತರವಾಗಿ ಹೆಸರು ಹೇಳಿಯೇ ಮಾತನಾಡುತ್ತಿದ್ದಾರೆ.

ಆಶ್ಚರ್ಯ !!! ಯಾರಿರಬಹುದು ಆತ. ಇಡೀ ಕರ್ನಾಟಕದ ಶಾಸಕಾಂಗದ ಮೇಲೆ ಇಷ್ಟೊಂದು ಪ್ರಭಾವ ಬೀರಿರುವ ವ್ಯಕ್ತಿ ಯಾರು ???
ಆತ ಮಾಡಿರಬಹುದಾದ ಘನಾಂಧಾರಿ ಕೆಲಸ ಏನಿರಬಹುದು ? ಆತ ಸಮಾಜ ಸೇವಕನೇ ? ಯಾವುದಾದರೂ ಕ್ಷೇತ್ರದಲ್ಲಿ ಏನಾದರೂ ಅದ್ಭುತ ಸಾಧನೆ ಮಾಡಿರುವವನೇ ? ಸಾರ್ವಜನಿಕ ಹೋರಾಟಗಾರನೇ ? ಎಂದು ಸುದ್ದಿಯ ಮೂಲವನ್ನು ಹುಡುಕಿದಾಗ ತಿಳಿದು ಬಂದದ್ದು ಆತನೊಬ್ಬ ವೃತ್ತಿ ನಿರತ ತಲೆ ಹಿಡುಕ. ಸ್ವತಃ ಮುಖ್ಯಮಂತ್ರಿಗಳೇ ಅವನ ಸಂಪರ್ಕ ಜಾಲಗಳು ಕಳೆದ 20 ವರ್ಷಗಳಿಂದ ಕರ್ನಾಟಕದ ಶಾಸಕಾಂಗದಲ್ಲಿ ಹಬ್ಬಿಕೊಂಡಿದೆ ಎಂದು ಮಾಧ್ಯಮಗಳ ಮುಂದೆ ನೇರವಾಗಿಯೇ ಹೇಳಿದರು….

ಆತನ ಈಗಿನ ಜನಪ್ರಿಯ ಹೆಸರು ಸ್ಯಾಂಟ್ರೋ ರವಿ. ಬಹುಶಃ ಮೊದಲು‌ ಆತ ಹುಂಡೈ ಸ್ಯಾಂಟ್ರೋ ಕಾರಿನಲ್ಲಿ ಓಡಾಡುತ್ತಿದ್ದ ಕಾರಣದಿಂದಾಗಿ ಈ ಹೆಸರು ಬಂದಿರಬಹುದು……

ಸುಮಾರು ‌10/15 ವರ್ಷಗಳ ಹಿಂದೆಯೇ ಆಗಿನ ಹಾಯ್ ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲಾ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಈತನ ಕರ್ಮ ಕಾಂಡಗಳ ಬಗ್ಗೆ ಮುಖಪುಟದಲ್ಲಿ ಪ್ರಸಾರ ಮಾಡಲಾಗಿತ್ತು. ಪೋಲಿಸ್ ಇಲಾಖೆಯಲ್ಲಿ ಈತನ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ವ್ಯವಸ್ಥೆಯ ದುರಂತ ನೋಡಿ. ಆತ ಸಾರ್ವಜನಿಕವಾಗಿ ಅಷ್ಟು ಕುಖ್ಯಾತನಾಗಿ ಕೆಟ್ಟ ಹೆಸರು ಪಡೆದಿದ್ದರು ಮುಂದೆ ಹದಿನೈದು ವರ್ಷಗಳಲ್ಲಿ ರಾಜ್ಯದ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಬೆಳೆಯುತ್ತಾನೆ ಎಂದಾದರೆ ಸಮಾಜ ನಡೆಯುತ್ತಿರುವ ಹಾದಿಯ ಬಗ್ಗೆ ಅನುಮಾನ ಉಂಟಾಗುತ್ತಿದೆ…..

ಹಳೆಯ ಜಾನಪದ ಕಥೆಯೊಂದು ನೆನಪಾಗುತ್ತಿದೆ. ಮುಂದೆ ಕೆಲವು ಸಿನಿಮಾಗಳಲ್ಲಿ ಸಹ ಆ ದೃಶ್ಯಗಳನ್ನು ಉಪಯೋಗಿಸಿಕೊಂಡರು…..

ಒಂದು ಊರಿನಲ್ಲಿ ಒಬ್ಬ ಬಾಲಕನಿರುತ್ತಾನೆ. ಒಮ್ಮೆ ಯಾವುದೋ ಕಾರಣಕ್ಕೆ ತನ್ನ ತಾಯಿಗೆ ಸುಳ್ಳು ಹೇಳುತ್ತಾನೆ. ಆಗ ಆ ತಾಯಿ ಅವನಿಗೆ ಚೆನ್ನಾಗಿ ಹೊಡೆದು ಇನ್ನು ಮುಂದೆ ಯಾವ ಕಾರಣಕ್ಕೂ ಸುಳ್ಳು ಹೇಳಬಾರದು. ಸತ್ಯವನ್ನೇ ಹೇಳಬೇಕು. ನಡೆದದ್ದನ್ನು – ನೋಡಿದ್ದನ್ನು ನೇರವಾಗಿ ಹೇಳಬೇಕು ಎಂದು ತಿಳಿವಳಿಕೆ ಹೇಳುತ್ತಾಳೆ. ಕೆಲ ಸಮಯದ ನಂತರ ಆತ ಆಕಸ್ಮಿಕವಾಗಿ ಆ ಊರಿನಲ್ಲಿ ಒಂದು ವಿವಾಹಿತ ಗಂಡು ಹೆಣ್ಣಿನ ಅನೈತಿಕ ಸಂಬಂಧವನ್ನು ನೋಡುತ್ತಾನೆ. ಅದನ್ನು ನೇರವಾಗಿ ಊರಿನ ಮುಖಂಡರಿಗೆ ಹೇಳುತ್ತಾನೆ. ಊರಿನ ಮುಖಂಡ ಆ ಪ್ರೇಮಿಗಳಿಗೆ ಬಹಿಷ್ಕಾರ ಹಾಕಿ ಶಿಕ್ಷೆ ವಿಧಿಸುತ್ತಾನೆ. ಆಗ ಗಂಡಿನ ಕಡೆಯವರು ಈ ಬಾಲಕ ಕಣ್ಣಿಗೆ ಕಂಡ ಸತ್ಯವನ್ನು ಹೇಳಿದ್ದಕ್ಕೆ ಕೋಪಗೊಂಡು ಇವನಿಗೆ ಹೊಡೆಯುತ್ತಾರೆ ಮತ್ತು ಅವನ ತಾಯಿಗೂ ಕೆಟ್ಟದಾಗಿ ನಿಂದಿಸಿ ಆಕೆ ಸಹ ಬೇಸರದಿಂದ ಕೋಪಗೊಂಡು ಇವನನ್ನು ನಿಜ ಹೇಳಿದ್ದಕ್ಕಾಗಿ ಹೊಡೆಯುತ್ತಾಳೆ.

ಬಾಲಕ ಗೊಂದಲಕ್ಕೆ ಒಳಗಾಗುತ್ತಾನೆ. ಒಂದು ರಾತ್ರಿ ಅದೇ ಬಾಲಕ ನಿದ್ದೆಯಲ್ಲಿ ಕನವರಿಸುತ್ತಿರುತ್ತಾನೆ ” ನಾನು ಸತ್ಯ ಹೇಳಬೇಕಾ ಅಥವಾ ಸುಳ್ಳು ಹೇಳಬೇಕಾ ? “

ಈಗ ಸಾಮಾನ್ಯ ಜನರ ಸ್ಥಿತಿ ಕೂಡ ಬಹುತೇಕ ಇದೇ ಆಗಿದೆ. ಒಳ್ಳೆಯವರಾಗಿ ಬದುಕಿ ಕಷ್ಟ ಪಡಬೇಕೇ ಅಥವಾ ಕೆಟ್ಟವರಾಗಿ ಸುಖ ಪಡಬೇಕೇ ? ಎಂಬ ಗೊಂದಲದಲ್ಲಿದ್ದಾರೆ….

ಒಬ್ಬ ಸಾಮಾನ್ಯ ವ್ಯಕ್ತಿ ಶಾಸಕ ಸಂಸದ ಮಂತ್ರಿಗಳನ್ನು ನೋಡುವುದೇ ಕಷ್ಟ. ಆದರೆ ಒಬ್ಬ ತಲೆ ಹಿಡುಕ ಒಂದು ಬೃಹತ್ ರಾಜ್ಯದ ಸರ್ಕಾರವನ್ನೇ ಬುಡಮೇಲು ಮಾಡುವಷ್ಟು ಪ್ರಭಾವ ಹೊಂದಿದ್ದಾನೆ ಎಂದರೆ ಈ ವ್ಯವಸ್ಥೆ ಎಷ್ಟು ಹದಗೆಟ್ಟಿರಬೇಕು ಯೋಚಿಸಿ…..

ಸರ್ಕಾರದ ಮುಖ್ಯ ಅತಿಥಿ ಗೃಹದಲ್ಲಿ ಆತ ತನ್ನ ವ್ಯವಹಾರ ಅಥವಾ ‌ದಂಧೆಯನ್ನು ನಡೆಸುತ್ತಾನೆ. ತಲೆ ಹಿಡುಕತನದಿಂದಲೇ ಕಾರ್ಯಾಂಗದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತಾನೆ. ನ್ಯಾಯಾಂಗದಲ್ಲಿ ಇನ್ನೆಷ್ಟು ಪ್ರಭಾವ ಹೊಂದಿದ್ದಾನೋ ಮಾಹಿತಿ ಇಲ್ಲ…..

ಸಿದ್ದೇಶ್ವರ ಸ್ವಾಮಿಗಳು ಲಿಂಗೈಕ್ಕರಾದಾಗ ಕೇವಲ ಎರಡು ದಿನ ಮಾತ್ರ ಮುಖ್ಯ ‌ಸುದ್ದಿಯಾದರು. ಆದರೆ ಈ‌ ಸ್ಯಾಂಟ್ರೋ ರವಿ ಇನ್ನೂ ಮುಖ್ಯ ಸುದ್ದಿಯಲ್ಲಿ ಇದ್ದಾನೆ. ಇಡೀ ಶಾಸಕಾಂಗ ಮತ್ತು ಕಾರ್ಯಾಂಗದ ಪ್ರಮುಖ ಭಾಗ ಪೋಲೀಸ್ ಇಲಾಖೆ ಅವನ ಹಿಂದೆ ಬಿದ್ದಿದೆ……….

ಶ್ರೀ ಸಾಮಾನ್ಯನನ್ನು ಬದುಕಿಗಾಗಿ ಹಣದ ಬಲೆಯಲ್ಲಿ ಸಿಲುಕಿಸಿ ಆತನನ್ನು ಜೀತದಾಳಾಗಿಸಿ ಈಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ದುಷ್ಟ ಕೂಟ ಆಡಳಿತ ನಡೆಸುತ್ತಿರುವಾಗ ನಾವೆಲ್ಲರೂ ‌ಆ ವಿಷ ಚಕ್ರದಲ್ಲಿ ಸಿಲುಕಿದ್ದೇವೆ. ಸ್ಯಾಂಟ್ರೋ ರವಿ ಅಂತಹವರು ಅವರಿಗೆ ಬೇಕಾದ ಸರ್ಕಾರ ರಚಿಸುವ ಮಟ್ಟಕ್ಕೆ ಬೆಳೆದಿದ್ದಾರೆ……..

ವಿವೇಚನೆ ಇಲ್ಲದ ಮತದಾರ ಮಾತ್ರ ಮತದಾನ ಪವಿತ್ರ ಕರ್ತವ್ಯ ಎಂದು ಒತ್ತುತ್ತಲೇ ಇದ್ದಾನೆ……

ಭ್ರಷ್ಟರು – ದುಷ್ಟರು – ಮತಿಹೀನರ ನಡುವೆ ಈಗ ತಲೆ ಹಿಡುಕರು. ಮುಂದೆ……..

ತಲೆ ಹಿಡುಕರ ನಡುವೆ ಮಾನವೀಯ ಮೌಲ್ಯಗಳ ಹುಡುಕಾಟ ಮಾತ್ರ ನಿರಂತರ…….

ಗೆದ್ದೇ ಗೆಲ್ಲುವೆ ಒಂದು ದಿನ –
ಗೆಲ್ಲಲೇ ಬೇಕು ಒಳ್ಳೇತನ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!