ಮೌಢ್ಯ ಬಿತ್ತನೆ ಕೇಂದ್ರಗಳಿಗೆ ಮಕ್ಕಳ ಶೈಕ್ಷಣಿಕ ಪ್ರವಾಸ ಆಯೋಜಿಸುವುದರಿಂದ ಆಗುವ ಲಾಭವಾದರೂ ಏನು ?
ರಾಜ್ಯದ ಸರಕಾರಿ ಶಾಲೆಗಳ ಮಕ್ಕಳಿಗೆ ಪ್ರವಾಸ ಕಾರ್ಯಕ್ರಮ ನಡೆಯುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಪ್ರವಾಸ ಕಾರ್ಯಕ್ರಮವನ್ನು ಯೋಜಿಸಿ ಮುಕ್ತಾಯಗೊಳಿಸಬೇಕೆಂದ ಸರಕಾರ ಸೂಚಿಸಿದೆಯಂತೆ.
ಸರಕಾರಿ ಶಾಲಾ ಮಕ್ಕಳನ್ನು ವರ್ಷಕ್ಕೊಂದು ಬಾರಿ ಶಾಲೆಯಿಂದ ಹೊರ ಊರುಗಳಿಗೆ ಪ್ರವಾಸ ಕರೆದೊಯ್ಯುವುದು ಒಂದು ಅತ್ಯುತ್ತಮ ಯೋಜನೆ. ಇದರಿಂದ ಮಕ್ಕಳಿಗೆ ಹಲವು ಪ್ರಯೋಜನಗಳಿವೆ. ಹಿಂದಿನಿಂದಲೂ ಈ ಯೋಜನೆ ಜ್ಯಾರಿಯಲ್ಲಿದೆ.
ಆದರೆ, ಹಿಂದಿನಿಂದಲೂ ಶೈಕ್ಷಣಿಕ ಪ್ರವಾಸಕ್ಕೆ ಸಂಬಂಧಿಸಿದಂತೆ ಒಂದೊಳ್ಳೆಯ ನೀತಿಯನ್ನು ಸರಕಾರ ರೂಪಿಸದಿರುವುದು ಮಾತ್ರ ವಿಷಾದನೀಯವಾದದ್ದು.
ಪ್ರವಾಸದ ಹೆಸರಲ್ಲಿ ಮಕ್ಕಳನ್ನು ಹೆಚ್ಚಾಗಿ ದೇವಸ್ಥಾನಗಳಿಗೆ ಕರೆದೊಯ್ಯಲಾಗುತ್ತದೆ. ಸರತಿ ಸಾಲಲ್ಲಿ ನಿಲ್ಲಿಸುವುದು, ದೇವಸ್ಥಾನದ ಗರ್ಭಗುಡಿಗೆ ಸುತ್ತಿಸುವುದು, ತೀರ್ಥ ಪ್ರಸಾದ ಸ್ವೀಕರಿಸುವುದು, ಕಾಣಿಕೆ ಹಾಕುವುದು, ದೇವಸ್ಥಾನ ಪರಿಸರದಲ್ಲಿರುವ ಫೋಟೋ, ಸರ, ಪದಕ ಇತ್ಯಾದಿಗಳಿರುವ ಅಂಗಡಿಗಳಿಂದ ಮಕ್ಕಳಿಗೆ ಇಷ್ಟವಾದುದನ್ನು ಕೊಂಡುಕೊಳ್ಳುವಂತೆ ಮಾಡುವುದು ಇಷ್ಟು ಬಿಟ್ಟರೆ ಈ ದೇವಸ್ಥಾನಗಳಿಗೆ ಶೈಕ್ಷಣಿಕ ಪ್ರವಾಸ ಆಯೋಜಿಸುವುದರಿಂದ ಮಕ್ಕಳಿಗಾಗುವ ಪ್ರಯೋಜನವಾದರೂ ಏನು ?
ಪ್ರವಾಸವು ವೈಜ್ಞಾನಿಕ, ವೈಚಾರಿಕ, ಐತಿಹಾಸಿಕವಾಗಿದ್ದರೆ ಮಕ್ಕಳಿಗೆ ಉಪಯೋಗ. ಇನ್ನಾದರೂ ಶಿಕ್ಷಕರು, ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಸರಕಾರ ಈನಿಟ್ಟಿನಲ್ಲಿ ಯೋಚಿಸಿ ಮುಂದಿನ ವರ್ಷದಿಂದಲಾದರೂ ಶೈಕ್ಷಣಿಕ ಪ್ರವಾಸಕ್ಕೆ ಸ್ಥಳಗಳನ್ನು ಆಯ್ಕೆ ಮಾಡುವಾಗ ಮಕ್ಕಳನ್ನು ಮೌಢ್ಯ ಬಿತ್ತನೆ ಕೇಂದ್ರಗಳಿಗೆ ಕರೆದೊಯ್ಯುವುದನ್ನು ಬಿಟ್ಟು ಇತರ ಉಪಯುಕ್ತ ಸ್ಥಳಗಳಿಗೆ ಕರೆದೊಯ್ಯುವಂತೆ ಮಾಡಿದರೆ ಅದು ದೇಶಕ್ಕೆ ನಿಜವಾದ ಲಾಭವಾಗಲಿದೆ.
~ ಶ್ರೀರಾಮ ದಿವಾಣ, ಉಡುಪಿ