ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲ ಸೆಕ್ಷನ್ 38 ಮತ್ತು ದಿಟ್ಟಂ ದಾಖಲೆಯಲ್ಲಿ ಶ್ರೀದೇವಳದಲ್ಲಿ ತಪ್ತ ಮುದ್ರಾ ಧಾರಣೆ ಮತ್ತು ಮಧ್ವ ಜಯಂತಿ ಆಚರಿಸಲು ಅವಕಾಶವಿಲ್ಲ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲ ದಾಖಲೆ ಮತ್ತು ನಿಯಮಕ್ಕೆ ವಿರುದ್ಧವಾಗಿ, ಕೇವಲ ಒಂದು ಮಾಧ್ವ ಪಂಥ/ ಪಂಗಡದ ಮುದ್ರಾ ಧಾರಣೆ ಮತ್ತು ಮಧ್ವ ಜಯಂತಿಗೆ ಅವಕಾಶ ಮಾಡಿಕೊಡುವುದಾದಲ್ಲಿ, ಬಹು ಸಂಖ್ಯಾತ ಹಿಂದೂಗಳು ಮತ್ತು ಶಿವ ಭಕ್ತರಿಗೆ ಮತ್ತು ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ರುದ್ರಾಕ್ಷಿ ಮಾಲಾ ಧಾರಣೆ, ಲಿಂಗಧಾರಣೆ, ವಿಭೂತಿ ಧಾರಣೆ, ಅಯ್ಯಪ್ಪ ಸ್ವಾಮಿ ಮಾಲಾ ಧಾರಣೆ ಸೇರಿದಂತೆ ಮತ್ತಿತರ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾಕೆ ಅನುಮತಿ ಕೊಡಬಾರದು…. ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಮತ್ತು ಸಮಗ್ರ ಹಿಂದೂ ಸಮಾಜಕ್ಕೆ ಸೇರಿದ ದೇವಸ್ಥಾನದಲ್ಲಿ ಎಲ್ಲಾ ಹಿಂದುಗಳ ಧಾರ್ಮಿಕ ಆಚರಣೆಗೂ ಕೂಡ ಅವಕಾಶ ನೀಡಿ. ಈ ವಿಷಯದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ತಾರತಮ್ಯ ಮಾಡಬಾರದು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದಿಟ್ಟಂಗೆ ವಿರುದ್ಧವಾಗಿ ಮುದ್ರಾಧಾರಣೆ ಮತ್ತು ಮಧ್ವ ಜಯಂತಿ ಮಾಡಬಹುದು ಎಂದಾದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಹಾಶಿವರಾತ್ರಿ ದಿವಸ ರುದ್ರ ಹೋಮ ಲಕ್ಷ ಬಿಲ್ವಾರ್ಚನೆ ಇತ್ಯಾದಿ ಧಾರ್ಮಿಕ ಆಚರಣೆಯನ್ನು ಮಾಡಬೇಕು. ಈ ವಿಚಾರದಲ್ಲಿ ಬಹು ಸಂಖ್ಯಾತ ಹಿಂದೂಗಳಿಗೆ ಮತ್ತು ಶಿವಭಕ್ತರಿಗೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ತಾರತಮ್ಯ ಮತ್ತು ಅನ್ಯಾಯ ಎಸಗಿದರೆ ಇದರ ವಿರುದ್ಧ ಚಳವಳಿ ಅನಿವಾರ್ಯ ಎಂದು ಶೈವ ಕ್ಷೇತ್ರ ಸಂರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಎಚ್ಚರಿಕೆ ನೀಡಿದೆ.