ಕೋಲಾರ ಜಿಲ್ಲೆಯ ಇತ್ತೀಚಿನ ಘಟನೆಗಳು ಮತ್ತು ಕಂಬಾಲಪಲ್ಲಿಯ ಕಹಿ ನೆನಪುಗಳು…….
ಹೀಗೆ ಕೆಲವು ಕಾರಣಗಳಿಗಾಗಿ ಊರಿನ ಎರಡು ಸಮುದಾಯಗಳ ನಡುವೆ ಬೆಳದ ದ್ವೇಷದ ಕಿಚ್ಚು ಒಂದು ದಿನ ದಲಿತ ಕುಟುಂಬಗಳ ಮನೆಗೆ ಚಿಲಕ ಹಾಕಿ ಬೆಂಕಿ ಇಟ್ಟು ಒಟ್ಟು 7 ಜನರನ್ನು ಜೀವಂತವಾಗಿ ಸುಟ್ಟು ಹಾಕಿದ ಕ್ಷಣಗಳು ಈಗಲೂ ನಮ್ಮ ಕಣ್ಣ ಮುಂದಿದೆ.
2000 ಇಸವಿಯಲ್ಲಿ ಅಂದರೆ 22 ವರ್ಷಗಳ ಹಿಂದೆ ನಡೆದ ಘಟನೆ ರಾಜ್ಯದ ಇತಿಹಾಸದ ಪುಟಗಳಲ್ಲಿ ಅತ್ಯಂತ ದೊಡ್ಡ ದುರಂತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಅದು ಮುಂದಿನ ಪೀಳಿಗೆಗೆ ಬಹುದೊಡ್ಡ ಪಾಠವಾಗಬೇಕಿತ್ತು. ಆದರೆ ಮೊನ್ನೆ ದೇವರ ಕೋಲು ಮುಟ್ಟಿದ್ದಕ್ಕೆ ಬಾಲಕನಿಗೆ ಥಳಿತ ಮತ್ತು ದಂಡ ಹಾಗೆ ನಿನ್ನೆ ದೇವರ ಪ್ರವೇಶದ ವಿಷಯದಲ್ಲಿ ದಲಿತರು ಮತ್ತು ಇತರ ಸಮುದಾಯಗಳ ನಡುವೆ ಘರ್ಷಣೆಯಾಗಿ ಕೆಲವರು ಆಸ್ಪತ್ರೆ ಸೇರಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಶೂದ್ರ ಮತ್ತು ಮೇಲ್ವರ್ಗದ ಮನೆಗಳಿಗೆ ದಲಿತರ ಪ್ರವೇಶಕ್ಕಾಗಿ ಸರ್ಕಾರದೊಂದಿಗೆ ಸೇರಿ ಸಾಕಷ್ಟು ಹೋರಾಟ ಮಾಡುತ್ತಿರುವ ಆತ್ಮೀಯ ಗೆಳೆಯರು ಮತ್ತು ಉಪನ್ಯಾಸಕರೂ ಆದ ಅರಿವು ಶಿವಪ್ಪ ಅವರ ಅನುಭವದಲ್ಲಿ ಕಂಡಂತೆ ಕೋಲಾರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 1500 ಚಿಕ್ಕ ಚಿಕ್ಕ ದೇವಸ್ಥಾನಗಳಿದ್ದು ಅದರಲ್ಲಿ ಸುಮಾರು 1000 ಕ್ಕೂ ಹೆಚ್ಚು ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶವೇ ಇಲ್ಲ. ಅಂದರೆ ಇನ್ನೂ ಎಷ್ಟೊಂದು ಅನಾಗರಿಕ ಪ್ರಪಂಚದಲ್ಲಿ ನಾವಿದ್ದೇವೆ.
ದೇಶ, ದೇಶಭಕ್ತಿ, ಹಿಂದುತ್ವ, ಹಿಂದು ನಾವೆಲ್ಲರೂ ಒಂದು ಧರ್ಮ ಮಾನವೀಯತೆ ಬಗ್ಗೆ ಸದಾ ಮಾತನಾಡುವ ನಾವು ಈ ಅನಿಷ್ಟ ಜಾತಿ ಪದ್ದತಿಯ ವಿಷಯದಲ್ಲಿ ಬಹುತೇಕ ಮೌನಕ್ಕೆ ಶರಣಾಗಿ ಪರೋಕ್ಷವಾಗಿ ಇದನ್ನು ಒಪ್ಪಿಕೊಳ್ಳುತ್ತೇವೆ.
ದೊಡ್ಡ ದೊಡ್ಡ ಉದ್ದಿಮೆದಾರರು, ಸಮಾಜ ಸೇವಕರು, ಹೋರಾಟಗಾರರು ಆರ್ಥಿಕ ಅವ್ಯವಸ್ಥೆ, ಭ್ರಷ್ಟಾಚಾರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅದರ ಮೂಲ ತಾಯಿ ಬೇರು ಈ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವುದೇ ಇಲ್ಲ.
ಒಂದು ದೇಶದ ಪ್ರಗತಿಯನ್ನು ಕೇವಲ ಆರ್ಥಿಕ ಅಭಿವೃದ್ಧಿಯಿಂದ ಮಾತ್ರ ಅಳೆಯಬಾರದು. ಅಲ್ಲಿನ ಸಾಮಾಜಿಕ ವ್ಯವಸ್ಥೆಯ ಸೌಹಾರ್ದತೆ – ಮಾನವೀಯ ಮೌಲ್ಯಗಳ ಆಚರಣೆಯ ಪ್ರಾಮಾಣಿಕತೆಯ ಆಧಾರದಲ್ಲಿ ಅದನ್ನು ಗ್ರಹಿಸಬೇಕು.
ಇದು ಕೇವಲ ಕೋಲಾರ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ರಾಜ್ಯದ – ದೇಶದ ಎಲ್ಲಾ ಭಾಗಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೋಲಾರದ ಈಗಿನ ಘಟನೆಗಳಿಂದಾಗಿ ಅದನ್ನು ಇಲ್ಲಿ ಹೆಸರಿಸಬೇಕಾಗಿದೆ.
ಇದೇ ರೀತಿಯ ಅಮಾನುಷ ಘಟನೆ ನಡೆದ ಚಾಮರಾಜನಗರ ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಇತ್ತೀಚೆಗಷ್ಟೇ ಭಾರತ್ ಜೋಡೋ ಪಾದಯಾತ್ರೆ ಸಂದರ್ಭದಲ್ಲಿ ವೈಷಮ್ಯ ಮರೆತು ಎರಡೂ ಸಮುದಾಯಗಳು ಒಂದಾದ ಸುದ್ದಿ ಬಂದಿದೆ. ಅದು ತುಂಬಾ ಸಂತೋಷದ ವಿಷಯ.
ತುಂಬಾ ಆಶ್ಚರ್ಯ ಮತ್ತು ಮೂರ್ಖತನವೆಂದರೇ….
ಗಾಳಿಗಿಲ್ಲದ ಜಾತಿ,
ನೀರಿಗಿಲ್ಲದ ಜಾತಿ,
ಆಹಾರಕ್ಕಿಲ್ಲದ ಜಾತಿ,
ರಕ್ತಕ್ಕಿಲ್ಲದ ಜಾತಿ,
ನೋವಿಗಿಲ್ಲದ ಜಾತಿ,
ಸಾವಿಗಿಲ್ಲದ ಜಾತಿ,……
ಓಟಿಗಾಗಿ ಜಾತಿ,
ರಾಜಕೀಯಕ್ಕಾಗಿ ಜಾತಿ,
ಮದುವೆಗಾಗಿ ಜಾತಿ,
ಧರ್ಮಕ್ಕಾಗಿ ಜಾತಿ,
ಅಜ್ಞಾನದಿಂದ ಜಾತಿ,
ಸಂಘಟನೆಗಾಗಿ ಜಾತಿ,…..
ಘಟನೆಗಳು ಒಂದೋ ಎರಡೋ ಇರಬಹುದು. ಆದರೆ ಪರಿಣಾಮ ಮಾತ್ರ ಇಡೀ ಸಮುದಾಯದ ಮೇಲೆ ಅಳಿಸಲಾಗದ ಆಳ ಗಾಯ ಮಾಡುತ್ತದೆ ಎಂಬುದನ್ನು ಮರೆಯಬಾರದು. ಅದು ಒಡಲೊಳಗೆ ಅದುಮಿಟ್ಟ ಜ್ವಾಲಾಮುಖಿ. ಯಾವಾಗ ಬೇಕಾದರೂ ಅಗ್ನಿಪರ್ವತವಾಗಿ ಸ್ಪೋಟಿಸಬಹುದು. ಎಚ್ಚರ…..
ದೇಶವನ್ನು ಮನುಷ್ಯತ್ವದ ಆಧಾರದಲ್ಲಿ ಕಟ್ಟೋಣ – ಜಾತಿಯ ಆಧಾರದ ಮೇಲಲ್ಲ…….ಯೋಚಿಸಿ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……