Spread the love

ಪ್ರಜಾವಾಣಿ,ಡೆಕ್ಕನ್ ಹೆರಾಲ್ಡ್, ಸುಧಾ, ಮಯೂರ ಪತ್ರಿಕೆಗಳ ಸ್ಥಾಪಕ ಕೆ.ಎನ್.ಗುರುಸ್ವಾಮಿಯವರು ಬದುಕಿದ್ದರೆ ಅವರಿಗೆ ಇಂದು ೧೨೧ ವರ್ಷ ತುಂಬುತ್ತಿತ್ತು.

ಮಾಧ್ಯಮ‌ ಕ್ಷೇತ್ರ ಪೂರ್ಣವಾಗಿ ಉದ್ಯಮದ ಹಾದಿ ಹಿಡಿದು ಆಳುವ ಪ್ರಭುಗಳ ತೊಡೆ ಮೇಲೇರಿ ಕೂತಿರುವ ಇಂದಿನ ದಿನಗಳಲ್ಲಿ ಮತ್ತೆ ಮತ್ತೆ ಈ ಅಜ್ಜನ ನೆನಪಾಗುತ್ತಿದೆ.‌

ದೀಪಾವಳಿಯ ದಿ‌ನ ಮಿಠಾಯಿ ಡಬ್ಬದ ಜೊತೆ ಬೋನಸ್ ಹಣದ ಕವರ್ ನೀಡಿ ಕೈ ಕುಲುಕಿದ ಅವರ ಅಂಗೈಯ ಬಿಸುಪು ನೆನಪಾಗುತ್ತಿದೆ.

ಇಂದಿನ
ಮಾಧ್ಯಮ ಕ್ಷೇತ್ರಕ್ಕೆ ತುರ್ತಾಗಿ ಕೆ.ಎನ್.ಗುರುಸ್ವಾಮಿಯವರಂತಹ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇರುವ ಜಾತ್ಯತೀತ ಬಂಡವಾಳಿಗರು ಬೇಕಾಗಿದೆ ಎಂದು ತೀವ್ರವಾಗಿ ಅನಿಸುತ್ತದೆ.

ಪ್ರಜಾವಾಣಿಯನ್ನು ಸ್ಥಾಪಿಸುವಾಗ ಗುರುಸ್ವಾಮಿಯವರಿಗೆ ಕೇವಲ
೪೭ ವರ್ಷ. ಆಗ ಅವರದ್ದು ಕೈ ತುಂಬಾ ಆದಾಯ ಇರುವ ಅಬಕಾರಿ ವ್ಯಾಪಾರದಲ್ಲಿ‌ ಏಕಸ್ವಾಮ್ಯದ‌ ದಿನಗಳು . ಆದರೆ ಗುರುಸ್ವಾಮಿ ಆ ಕಾಲದಲ್ಲಿಯೂ ಲಾಭದಾಯಕವಲ್ಲದ, ಸಂಪೂರ್ಣವಾಗಿ ಬ್ರಾಹ್ಮಣಮಯವಾಗಿದ್ದ ಮಾಧ್ಯಮ ಕ್ಷೇತ್ರ ಪ್ರವೇಶಿಸುವ ಸಾಹಸಕ್ಕೆ ಕೈ ಹಾಕುತ್ತಾರೆ. ಅಬಕಾರಿ‌ ಉದ್ಯಮದಲ್ಲಿನ ಗಳಿಕೆಯನ್ನು ಅದಕ್ಕೆ ಸುರಿಯುತ್ತಾರೆ.

ನನಗಿರುವ ಮಾಹಿತಿ ಪ್ರಕಾರ ಸುಮಾರು ಹತ್ತುವರ್ಷಗಳ ಕಾಲ ಪ್ರಜಾವಣಿ-ಡೆಕ್ಕನ್ ಹೆರಾಲ್ಡ್ ನಷ್ಟದಲ್ಲಿತ್ತಂತೆ. ಕೆಲವು ಹಳೆಯ ಉದ್ಯೋಗಿಗಳು ಹೇಳಿದ್ದಂತೆ ಆ ಕಾಲದಲ್ಲಿ ನೀಡುತ್ತಿದ್ದ ಸಂಬಳದ ನೋಟುಗಳು ಕೂಡಾ ಸಾರಾಯಿ ವಾಸನೆ ಬರುತ್ತಿತ್ತಂತೆ.

ಗುರುಸ್ವಾಮಿಯವರು ಪತ್ರಿಕೆಗೆ ಹಾಕುವ ಬಂಡವಾಳವನ್ನು ಅಬಕಾರಿ ವ್ಯಾಪಾರಕ್ಕೆ ಸುರಿದಿದ್ದರೆ ಇನ್ನಷ್ಟು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದರೇನೋ? ಹಾಗಿದ್ದರೂ ಆ‌ ಮನುಷ್ಯ ಇಂತಹದ್ದೊಂದು ಯೋಚನೆ‌ ಮಾಡಿದ್ರಲ್ಲಾ ಅದಕ್ಕಾಗಿ ಅವರಿಗೊಂದು ಕೈಮುಗಿದು ನಮಸ್ಕಾರ .

ಹಿಂದುಳಿದ ಜಾತಿಗಳಲ್ಲಿ ಗುರುಸ್ವಾಮಿಯವರನ್ನು ಮೀರಿಸಿರುವ ಶ್ರೀಮಂತರಿದ್ದಾರೆ. (ಹಿಂದುಳಿದ ಜಾತಿಗಳ ಶಾಸಕರು ಚುನಾವಣಾ ಕಾಲದಲ್ಲಿ‌ನೀಡಿದ್ದ ಅಫಿಡವಿಟ್ ನೋಡಿ) ಇವರೆಲ್ಲ ಪ್ರತಿದಿನ ಮಾಧ್ಯಮ ನಮ್ಮ‌ ಪರವಾಗಿಲ್ಲ, ಬ್ರಾಹ್ಮಣರ ಕೈಯಲ್ಲಿದೆ, ನಮ್ಮನ್ನು ಅವರು ತುಳಿಯುತ್ತಿದ್ದಾರೆ,ಎಂದೆಲ್ಲ ಗೋಳಾಡುತ್ತಿರುತ್ತಾರೆ.

ಆದರೆ ಯಾರಿಗೂ ತಾವೇ ಸ್ವಲ್ಪ‌ ದುಡ್ಡು ಹಾಕಿ ಪತ್ರಿಕೆ-ಚಾನೆಲ್ ಮಾಡಬಹುದಲ್ಲಾ ಎಂಬ ಯೋಚನೆ ಬರುವುದಿಲ್ಲ.

ನೆನಪಿಡಿ: ರಾಜಕೀಯ ಪ್ರಾತಿನಿಧ್ಯವೊಂದೇ ಅಹಿಂದ‌ ಚಳುವಳಿಯ ಉದ್ದೇಶವಾಗಿದ್ದರೆ ಅದು ಬಹಳ ದಿನ ಬಾಳಲಾರದು. ಮಾಧ್ಯಮ, ಉದ್ಯಮ,ಸಾಹಿತ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ‌ ಅಹಿಂದ ಸಮುದಾಯ‌ಪ್ರಾತಿನಿಧ್ಯ ಗಳಿಸಿಕೊಂಡರೆ ಮಾತ್ರ ರಾಜಕೀಯದಲ್ಲಿ ಅಹಿಂದ ಪ್ರಾತಿನಿಧ್ಯ ಉಳಿಯುತ್ತೆ, ಇಲ್ಲದೆ ಇದ್ದರೆ ಉಳಿದೆಲ್ಲ ಕ್ಷೇತ್ರಗಳಲ್ಲಿನ ಅಹಿಂದೇತರ ಸಮುದಾಯ ರಾಜಕೀಯದಲ್ಲಿನ ಅಹಿಂದವನ್ನು ಮುಗಿಸಿಬಿಡುತ್ತೆ. ಉದಾಹರಣೆ ಕೊಡುವ ಅಗತ್ಯ ಇದೆಯೇ?

– ದಿನೇಶ್ ಅಮಿನ್ ಮಟ್ಟು

error: No Copying!