ವಿಚಿತ್ರ ಸ್ವಾರ್ಥದ ನ್ಯಾಯ ನೀತಿ…..
ನನ್ನ ತಾಯಿ ದೈವೀ ಸ್ವರೂಪಿ,
ನನ್ನ ತಂದೆ ಮುಗ್ದ ಮತ್ತು ಶ್ರಮ ಜೀವಿ,
ನನ್ನ ಅಜ್ಜ ಅಜ್ಜಿ ನಿಷ್ಕಲ್ಮಶ ಮನಸ್ಸಿನವರು,
ನನ್ನ ಹೆಂಡತಿ ಪ್ರೀತಿಯ ಸಾಗರ,
ನನ್ನ ಅಣ್ಣ ಮಮತೆಯ ಸಾಕಾರ ಮೂರ್ತಿ,
ನನ್ನ ಅತ್ತಿಗೆ ಮಮತಾಮಯಿ,
ನನ್ನ ತಂಗಿ ಕರುಣಾಮಯಿ,
ನನ್ನ ಗಂಡ ದಕ್ಷ ಪ್ರಾಮಾಣಿಕ,
ನನ್ನ ಮಗ ಮಗಳು ಅತ್ಯಂತ ಸಹೃದಯಿಗಳು,………..
ಹೀಗೆ ಸಾಮಾನ್ಯವಾಗಿ ಎಲ್ಲರೂ ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮವರ ಬಗ್ಗೆ ಅದರಲ್ಲೂ ರಕ್ತ ಸಂಬಂಧಿಗಳ ಬಗ್ಗೆ ಹೇಳುತ್ತಿರುತ್ತಾರೆ.( ಕೆಲವು ಅಪರೂಪದ ಅಪವಾದಗಳು ಇರಬಹುದು )
ಆದರೆ ಬಹುತೇಕ ಜನರ ಅಭಿಪ್ರಾಯ ಇದೇ ಆಗಿರುತ್ತದೆ.
ಹಾಗಾದರೆ ಇಷ್ಟೊಂದು ಒಳ್ಳೆಯವರಿಂದ ಕೂಡಿರುವ ನಮ್ಮ ಸಮಾಜ ಅತ್ಯಂತ ಆದರ್ಶ ನಾಗರಿಕ ಸಮಾಜವಾಗಿರಬೇಕಿತ್ತಲ್ಲವೇ ?
ಈ ಭ್ರಷ್ಟಾಚಾರ ಮೋಸ ವಂಚನೆ ನಂಬಿಕೆ ದ್ರೋಹ, ಡಾಕ್ಟರ್ ಲಾಯರ್ ಪೋಲೀಸ್ ರಾಜಕಾರಣಿ, ಕಂಟ್ರಾಕ್ಟರ್ ಮುಂತಾದ ಸಮಾಜದ ಎಲ್ಲಾ ಕ್ಷೇತ್ರದ ಜನರ ಮೇಲೆ ಅನುಮಾನ ಏಕೆ. ಇವರೆಲ್ಲರೂ ನಮ್ಮ ತಾಯಿ ತಂಗಿ ಅಣ್ಣ ಅಕ್ಕ ಅಪ್ಪ ಅಮ್ಮ ಮಕ್ಕಳಲ್ಲಿ ಒಬ್ಬರಾಗಿರಬೇಕಲ್ಲವೇ ?
ಆದರೂ ಏಕೆ ವ್ಯವಸ್ಥೆ ಹೀಗಿದೆ.
ಸಮಸ್ಯೆ ಇರುವುದೇ ಇಲ್ಲಿ.
ಸಮಾಜದ ಒಟ್ಟು ಹಿತದ ದೃಷ್ಟಿಯಲ್ಲಿ ನಾವು ಇವರನ್ನು ನೋಡುವುದಿಲ್ಲ. ನಮ್ಮ ವೈಯಕ್ತಿಕ ಬದುಕಿನ ಸ್ವಾರ್ಥದ ಹಿತದಿಂದ ಇವರನ್ನು ಗುರುತಿಸುತ್ತೇವೆ.
ಹೆಚ್ಚು ಲಂಚ ತಂದು ಮನೆ ಕಾರು ಒಡವೆ ಪ್ರವಾಸ ಮುಂತಾದ ಮೋಜು ಮಾಡುವ ವ್ಯಕ್ತಿ, ಹೆಂಡತಿ ಮಕ್ಕಳಿಗೆ, ತಂದೆ ತಾಯಿಗಳಿಗೆ ಅತ್ಯಂತ ಪ್ರೀತಿ ಪಾತ್ರವಾಗುತ್ತಾನೆ. ಗಂಡನಿಗೆ ಅಥವಾ ಮಗನಿಗೆ ಬರುವ ಸಂಬಳದಲ್ಲಿ ಇಷ್ಟೊಂದು ಅದ್ದೂರಿ ಜೀವನ ಸಾಧ್ಯವಿಲ್ಲ. ಇದು ಲಂಚದ ಹಣವೇ ಎಂದು ಗೊತ್ತಿದ್ದರೂ ಅದನ್ನು ಸಾಮಾನ್ಯವಾಗಿ ಯಾರೂ ಪ್ರಶ್ನಿಸುವುದಿಲ್ಲ.
ಪ್ರಿಯಕರನಿಗೆ ಅಥವಾ ಗಂಡನಿಗೆ ಮೋಸ ವಂಚನೆ ಮಾಡಿದ ಹೆಣ್ಣು ನಮ್ಮ ಅಕ್ಕ ತಂಗಿ ಮಗಳು ಆಗಿದ್ದರೂ ನಾವು ಸಮರ್ಥಿಸುತ್ತೇವೆ.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ತೆ ಮಾವನಿಗೊಂದು ನ್ಯಾಯ ಅಮ್ಮ ಅಪ್ಪನಿಗೆ ಒಂದು ನ್ಯಾಯ, ಮಗ ಮಗಳಿಗೆ ಒಂದು ನಿಯಮ, ಅಳಿಯ ಸೊಸೆಗೊಂದು ನಿಯಮ.
ಇದರ ವಿಸೃತ ರೂಪವೇ ಇಂದಿನ ಒಟ್ಟು ವ್ಯವಸ್ಥೆಯ ಗೊಂದಲಕ್ಕೆ ಬಹುತೇಕ ಕಾರಣ.
ನ್ಯಾಯ ಅನ್ಯಾಯ ನೀತಿ ಅನೀತಿಗಳ ವಿಷಯ ಬಂದಾಗ ಭಾವನಾತ್ಮಕ ಜೀವಿಗಳಾದ ನಾವು ಪಕ್ಷಪಾತದ ಧೋರಣೆ ಅನುಸರಿಸುತ್ತೇವೆ.
ನಮ್ಮ ಮಗ ಅತ್ಯಾಚಾರಿ ಕೊಲೆಪಾತಕನಾದಾಗ ಅದು ನಮಗೆ ಯೌವ್ವನದ ಸಣ್ಣ ಚೇಷ್ಟೇ ಎಂದೇ ಕಾಣುತ್ತದೆ. ಇತರರು ಮಾಡಿದಾಗ ರಸ್ತೆಯಲ್ಲಿ ಗುಂಡು ಹೊಡೆದು ಸಾಯಿಸಬೇಕೆನಿಸುತ್ತದೆ.
ನನ್ನ ಗಂಡ/ಹೆಂಡತಿ, ಲೋಕಾಯುಕ್ತರ ಬಲೆಯಲ್ಲಿ ಸಿಲುಕಿದಾಗ ಎಷ್ಟೋ ದೊಡ್ಡ ಭ್ರಷ್ಟರ ನಡುವೆ ಇವರು ತುಂಬಾ ಒಳ್ಳೆಯವರು ಇಡೀ ವ್ಯವಸ್ಥೆ ಇವರಿಗೆ ಮೋಸ ಮಾಡಿದೆ ಎನಿಸುತ್ತದೆ.
ಸಮಸ್ಯೆಗಳ ಬಗ್ಗೆ ಏನೋ ಹೇಳಿದೆ. ಆದರೆ ಇಂದಿನ ಸಾಮಾಜಿಕ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಇದನ್ನು ಮೀರಲು ಸಾಧ್ಯವೇ ?
ಇದೇ ನಮ್ಮ ಮುಂದಿರುವ ಬಹುದೊಡ್ಡ ಸವಾಲು. ಮನಸ್ಸುಗಳ ಅಂತರಂಗದ ಚಳವಳಿ ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳವ ಆಶಯವಿದೆ. ಜನರ ಚಿಂತನಾ ಕ್ರಮವನ್ನು ವಿಶಾಲಗೊಳಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುವ ಪ್ರಯತ್ನ ಮುಂದುವರಿಯಲಿದೆ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……