ಉಡುಪಿ: ಸೆಪ್ಟೆಂಬರ್ ೧೫ (ಹಾಯ್ ಉಡುಪಿ ನ್ಯೂಸ್) ರಾಜ್ಯ ಸರ್ಕಾರ “ಹಿಂದಿ ದಿವಸ” ಆಚರಣೆಯನ್ನು ಒತ್ತಾಯ ಪೂರ್ವಕವಾಗಿ ನಡೆಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಇವರು ಇದನ್ನು ವಿರೋಧಿಸಿ ಜಿಲ್ಲಾಧಿಕಾರಿಯವರ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿಯನ್ನು ಸಲ್ಲಿಸಿದರು.
ಭಾರತ ಒಕ್ಕೂಟ ಸರ್ಕಾರವು ಪ್ರತಿವರ್ಷ ಸೆಪ್ಟೆಂಬರ್ 14 ರಂದು ನಮ್ಮ ತೆರಿಗೆ ಹಣದಲ್ಲಿ ‘ಹಿಂದಿ ದಿವಸ’ ಆಚರಣೆ ನಡೆಸುತ್ತ ಬಂದಿದೆ. ಕೇವಲ ಹಿಂದಿ ದಿವಸವೊಂದನ್ನು ಆಚರಿಸುವ ಮೂಲಕ ದೇಶದ ಎಲ್ಲ ಭಾಷೆಗಳನ್ನು ಕಡೆಗಣಿಸಿ, ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ, ಭಾರತದ ಐಕ್ಯತೆಯನ್ನು ಒಡೆಯುತ್ತಿರುವ ʻಹಿಂದಿ ದಿವಸʼ ಆಚರಣೆಯನ್ನು ಸ್ಥಗಿತಗೊಳಿಸುವಂತೆ ಕೋರಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡರ ಆದೇಶದಂತೆ ಜಿಲ್ಲಾಧ್ಯಕ್ಷರಾದ ಸುಜಯ ಪೂಜಾರಿಯವರ ನೇತ್ರತ್ವದಲ್ಲಿ, ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಸದಸ್ಯರುಗಳು ಹಾಗೂ ತಾಲೂಕು ಅಧ್ಯಕ್ಷರುಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಯವರ ಪರವಾಗಿ ಅಪರ ಜಿಲ್ಲಾಧಿಕಾರಿಣಿ ಶ್ರೀಮತಿ ವೀಣಾ ಜಿ. ಎಸ್. ರವರಿಗೆ ಮನವಿಯನ್ನು ನೀಡಿ, ಜಿಲ್ಲಾಧಿಕಾರಿಯವರ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.