ಮಣ್ಣಿನ ಗಣೇಶ ಕಲ್ಲಿನ ಗಣೇಶ,
ಮರದ ಗಣೇಶ ತಾಮ್ರದ ಗಣೇಶ,
ಕಂಚಿನ ಗಣೇಶ ಬೆಳ್ಳಿಯ ಗಣೇಶ,
ಚಿನ್ನದ ಗಣೇಶ ವಜ್ರದ ಗಣೇಶ……….
ಬಣ್ಣದ ಗಣೇಶ ನವರಸ ಗಣೇಶ,
ಪರಿಸರ ಪ್ರೇಮಿ ಗಣೇಶ ಕಾಗದದ ಗಣೇಶ, ಮೇಣದ ಗಣೇಶ ಮೈಲುತುತ್ತದ ಗಣೇಶ, ತರಕಾರಿ ಗಣೇಶ ಹಣ್ಣಿನ ಗಣೇಶ,
ಧವಸ ಧಾನ್ಯಗಳ ಗಣೇಶ..……
ಬಲಮುರಿ ಗಣೇಶ ಎಡಮುರಿ ಗಣೇಶ, ಕುಳಿತಿರುವ ಗಣೇಶ ನಿಂತಿರುವ ಗಣೇಶ, ಆಯುಧಧಾರಿ ಗಣೇಶ ವಿಶ್ವರೂಪಿ ಗಣೇಶ ಪ್ರಸನ್ನವದನ ಗಣೇಶ ಉಗ್ರ ರೂಪಿ ಗಣೇಶ………
ನೃತ್ಯ ಮಾಡುತ್ತಿರುವ ಗಣೇಶ ಯೋಧನಾಗಿರುವ ಗಣೇಶ
ಸಿಕ್ಸ್ ಪ್ಯಾಕ್ ಗಣೇಶ,
ಡೊಳ್ಳು ಹೊಟ್ಟೆಯ ಗಣೇಶ,
ಋಷಿ ರೂಪದ ಗಣೇಶ,
ಖುಷಿ ಮೂಡಿನ ಗಣೇಶ
ಬಹುಮುಖಿ ಗಣೇಶ…….
ಎಲ್ಲವೂ ಮಾರಾಟಕ್ಕಿದೆ..
ನಿಮ್ಮೆಲ್ಲಾ ಸಂಕಷ್ಟಹರ ಗಣಪ ನಮ್ಮಲ್ಲಿದ್ದಾನೆ…
ಮದುವೆ ಆಗದವರಿಗೊಂದು ಗಣೇಶ ಮಕ್ಕಳಾಗದವರಿಗೊಂದು ಗಣೇಶ
ಅವಿದ್ಯಾವಂತರಿಗೊಂದು ಗಣೇಶ ಬುದ್ದಿವಂತರಿಗೊಂದು ಗಣೇಶ ಬಡವರಿಗೊಂದು ಗಣೇಶ ಶ್ರೀಮಂತರಿಗೊಂದು ಗಣೇಶ
ನಿರುದ್ಯೋಗಿಗಳಿಗೊಂದು ಗಣೇಶ ವ್ಯಾಪಾರಸ್ತರಿಗೊಂದು ಗಣೇಶ……
ರೋಗಿಗಳಿಗೊಂದು ಗಣೇಶ ಆರೋಗ್ಯವಂತರಿಗೊಂದು ಗಣೇಶ ದಂಪತಿಗಳಿಗೊಂದು ಗಣೇಶ ವಿಚ್ಚೇದಿತರಿಗೊಂದು ಗಣೇಶ
ಹಣ ಮಾಡಲೊಂದು ಗಣೇಶ
ಆಸ್ತಿ ಮಾಡಲೊಂದು ಗಣೇಶ
ಅಧಿಕಾರ ಹಿಡಿಯಲೊಂದು ಗಣೇಶ………
ಪ್ರಚಾರಕ್ಕೊಂದು ಗಣೇಶ ವಿರೋಧಿಗಳನ್ನು ಹಣಿಯಲೊಂದು ಗಣೇಶ
ಬ್ರಹ್ಮಚಾರಿಗಳಿಗೊಂದು ಗಣೇಶ ಸಂಸಾರಸ್ತರಿಗೊಂದು ಗಣೇಶ
ಪ್ರೇಮಿಗಳಿಗೊಂದು ಗಣೇಶ ವಿರಹಿಗಳಿಗೊಂದು ಗಣೇಶ …..
ಇದಲ್ಲದೆ ಇನ್ನೂ ಸಾವಿರಾರು…
ಯಾವುದು ಬೇಕು ನಿಮಗೆ …..
ಸರ್ವಶಕ್ತ ಸರ್ವಾಂತರ್ಯಾಮಿ ಗಣೇಶ ನಮ್ಮವನು.
ನಿಮ್ಮೆಲ್ಲ ಸಂಕಷ್ಟಗಳ ನಿವಾರಕ ಇವನು.
ಇಂದೇ ನಿಮ್ಮ ಆಯ್ಕೆಯ ಗಣೇಶನನ್ನು ಕಾಯ್ದಿರಿಸಿ…….
ನಿಮ್ಮ ಮನೆ ಬಾಗಿಲಿಗೆ,
ಮನಸ್ಸಿನ ಅಂತರಾಳಕ್ಕೆ,
ಬದುಕಿನ ಜೊತೆಯಾಟಕ್ಕೆ,
ಉಚಿತವಾಗಿ ತಲುಪಿಸಲಾಗುತ್ತದೆ……
ಫಲಿತಾಂಶ ಮಾತ್ರ ಖಚಿತ..
ಯಾವ ಮೋಸ ವಂಚನೆ ಇಲ್ಲದೆ ಶತಶತಮಾನಗಳಿಂದ ಮಾರಾಟ ಮಾಡುತ್ತಿದ್ದೇವೆ………..
ವಿಶೇಷ ಕೊಡುಗೆ…..
ಕ್ರಿಶ್ಚಿಯನ್ ಸಿಖ್ ಜೈನ್ ಬೌದ್ಧ ಪಾರ್ಸಿ ಮುಸ್ಲಿಂ ಧರ್ಮದವರು ತಮ್ಮ ತಮ್ಮ ಧರ್ಮದ ಭಿನ್ನತೆಯನ್ನು ರಕ್ತ ಮಾಂಸ ಮೂಳೆ ನರಗಳ ಮುಖಾಂತರ ದೃಢಪಡಿಸಿದರೆ ಅತ್ಯಂತ ಬೆಲೆಬಾಳುವ ಗಣೇಶನನ್ನು ಉಚಿತವಾಗಿ ಕೊಡಲಾಗುತ್ತದೆ….
ನಿಮ್ಮೆಲ್ಲಾ ಕಷ್ಟಗಳು ಪರಿಹಾರ ಆಗುವವವರೆಗೂ ನಮ್ಮ ಗಣೇಶನ ಮಾರಾಟ ನಿರಂತರ…….
ಬೇಗ ಬನ್ನಿ,
ಇಂದೇ ಕಾಯ್ದಿರಿಸಿ……
ಹೊಟ್ಟೆ ಪಾಡಿಗಾಗಿ ದೇವರನ್ನೂ ಮಾರಾಟ ಮಾಡಲಾಗುತ್ತಿದೆ…
ಬದಲಾಗಿ ದೇವರ ಗುಣಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿದ್ದಿದ್ದರೆ…..
ಗಣೇಶೋತ್ಸವ……..
ಆಚರಣೆಗಿಂತ ಅನುಷ್ಠಾನ ಮುಖ್ಯ…..
ನಮ್ಮೊಳಗೊಬ್ಬ ಗಣೇಶನನ್ನು ಪ್ರತಿಷ್ಠಾಪಿಸಿಕೊಳ್ಳೋಣವೇ…….
ಗಣೇಶ ಎಂಬುದು ಒಂದು ಪೌರಾಣಿಕ, ಕಾಲ್ಪನಿಕ, ಜನಪದೀಯ ಪಾತ್ರ.
ಯಾರು ಏನೇ ವೈಚಾರಿಕವಾಗಿ, ಸಾಂಕೇತಿಕವಾಗಿ, ಆಧ್ಯಾತ್ಮಿಕವಾಗಿ ಸಮರ್ಥನೆ ಮಾಡಿಕೊಂಡರು
ಆನೆ ಮುಖದ, ಮನುಷ್ಯ ದೇಹದ ಆ ರೂಪ ಖಂಡಿತ ಪ್ರಕೃತಿಯ ಸೃಷ್ಟಿಯಲ್ಲಿ ಅಸಹಜ ಮತ್ತು ಅಸಾಧ್ಯ ಎಂದು ನಮ್ಮೆಲ್ಲರಿಗು ಗೋಚರಿಸುತ್ತದೆ……
ಇನ್ನು ಗಣೇಶನ ಸೃಷ್ಟಿಯ ಕಥೆ ತುಂಬಾ ಬಾಲಿಶ ಎನಿಸುತ್ತದೆ. ಏಕೆಂದರೆ ಪಾರ್ವತಿಯ ಸ್ನಾನ, ಅದಕ್ಕೆ ಗಣೇಶನ ಕಾವಲು, ಶಿವನನ್ನೇ ಬಾಗಿಲಲ್ಲಿ ತಡೆಯುವುದು, ಗಣೇಶನ ಶಿರಚ್ಛೇದ, ನಂತರ ಸತ್ಯ ತಿಳಿದು ಪಶ್ಚಾತ್ತಾಪ, ಆನೆಯ ತಲೆ ಕಡಿದು ಗಣೇಶನಿಗೆ ಜೋಡಣೆಯ ಕಥೆ ಮಕ್ಕಳಿಗೆ ಕೇಳಲು ಚೆನ್ನ ಅಷ್ಟೇ. ಅದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಬಹುಶಃ ಸರ್ವ ಶಕ್ತ ಶಿವನ ಸಹನೆ ಮತ್ತು ಜ್ಞಾನವನ್ನೇ ಅನುಮಾನಗಳಿಗೆ ಈಡು ಮಾಡುತ್ತದೆ. ಶಿವನನ್ನು ಹಿಂಸಾವಾದಿಯಂತೆ ಚಿತ್ರಿಸುತ್ತದೆ. ಸಮರ್ಥನೆಗಳು ವಾಸ್ತವವಾಗಿರದೆ ಪೌರಾಣಿಕವಾಗಿದ್ದು ಅದು ನಂಬಿಕೆ ಮತ್ತು ಭಕ್ತಿಯ ಹಂತ ಮೀರುವುದಿಲ್ಲ.
ಆದ್ದರಿಂದ ಗಣೇಶನ ಕಥೆಯನ್ನು ಈ ಆಧುನಿಕ ಕಾಲದಲ್ಲಿ ನಾವು ಹೇಗೆ ಸ್ವೀಕರಿಸಬಹುದು ಅಥವಾ ಸ್ವೀಕರಿಸಬೇಕು ಎಂಬುದು ಮುಖ್ಯವಾಗುತ್ತದೆ.
ದೈವ ಭಕ್ತಿಯ ಜನರ ನಂಬಿಕೆಯಲ್ಲಿ ಗಣೇಶ ವಿಘ್ನ ನಿವಾರಕ. ಕಷ್ಟಗಳನ್ನು ಪರಿಹರಿಸುವ ದೇವರು.
ಅದರಿಂದಾಗಿ ಯಾವುದೇ ಕೆಲಸದ ಪ್ರಾರಂಭದಲ್ಲಿ ಆತನ ಮೂರ್ತಿಯನ್ನು ಸ್ಥಾಪಿಸಿ ಅದಕ್ಕೆ ಪ್ರಥಮ ಪೂಜೆ ಸಲ್ಲಿಸಿ, ಶ್ಲೋಕ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಗುತ್ತದೆ.
ಈ ಆಚರಣೆಯನ್ನು ನಾವು ಹೀಗೆ ಗ್ರಹಿಸಬಹುದೆ….
ಯಾವುದೇ ವ್ಯಾಪಾರ ವ್ಯವಹಾರ ಸಮಾರಂಭ ಕೆಲಸ ಏನೇ ಪ್ರಾರಂಭ ಮಾಡಿದರು ಅದರಲ್ಲಿ ತೊಂದರೆ ಬರಬಹುದು. ಅದನ್ನು ಮೊದಲೇ ನಿರೀಕ್ಷಿಸಿ – ಸ್ವೀಕರಿಸಿ ಅರ್ಥಮಾಡಿಕೊಂಡು ಅದನ್ನು ಎದುರಿಸುವ ಮನಸ್ಥಿತಿ ರೂಪಿಸಿಕೊಳ್ಳಬೇಕು. ಗಣೇಶನೆಂಬ ವ್ಯಕ್ತಿ ಅಥವಾ ಶಕ್ತಿ ನಮ್ಮ ನೆರವಿಗೆ ಬರುವುದಿಲ್ಲ. ಆದರೆ ನಾವೇ ನಮ್ಮ ಸಾಮರ್ಥ್ಯದಿಂದ ಅದನ್ನು ನಿವಾರಿಸಿಕೊಳ್ಳಬೇಕು.
ಗಣೇಶ ವಿದ್ಯೆಗೆ ಅಧಿಪತಿ ಎಂದೂ ಕರೆಯಲಾಗುತ್ತದೆ. ಅಂದರೆ ಜ್ಞಾನ ಒಂದಿದ್ದರೆ ಎಲ್ಲವನ್ನೂ ಜಯಿಸಬಹುದು. ನಮ್ಮೊಳಗೆ ಗಣೇಶನ ಪ್ರತಿಷ್ಠಾಪನೆ ಎಂದರೆ ಜ್ಞಾನದ ಮಟ್ಟ ಹೆಚ್ಚಿಸಿಕೊಳ್ಳುವುದು ಎಂದರ್ಥ. ಅರಿವಿಗೆ ಸರಿಸಾಟಿ ಯಾವುದು ಇಲ್ಲ. ಅರಿವಿನ ಬೆಳಕಲ್ಲಿ ನಮ್ಮ ಬದುಕನ್ನು ಸಾಧ್ಯವಾದಷ್ಟು ನೆಮ್ಮದಿಯ ತಾಣವಾಗಿ ಮಾಡಿಕೊಳ್ಳಬಹುದು.
ಸಮಸ್ಯೆಗಳು ಬರದಂತೆ ತಡೆಯುವುದು ಸಾಧ್ಯವಾಗುವುದಿಲ್ಲ. ಆದರೆ ಅದರ ತೀವ್ರತೆ ಕಡಿಮೆ ಮಾಡುವ ಶಕ್ತಿ ಜ್ಞಾನಕ್ಕೆ ಇದೆ.
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬಾಲಗಂಗಾಧರ ತಿಲಕರು ಜನರನ್ನು ಸಂಘಟಿಸಲು ಗಣೇಶನ ಉತ್ಸವಕ್ಕೆ ಪ್ರೋತ್ಸಾಹ ನೀಡಿದರು ಎಂಬುದು ನಿಜ. ಆದರೆ ಮುಂದೆ ಇದೇ ಉತ್ಸವಗಳು ರಾಜಕೀಯ ಪುಡಾರಿಗಳ, ಚಂದಾ ವಸೂಲಿಗಾರರ, ರೌಡಿಗಳ ಧಂದೆಯಾಗಿ ಬೀದಿ ಬೀದಿಗಳಲ್ಲಿ ತೋರಿಕೆಯ ಆಚರಣೆಗಳಾಗುತ್ತಿರುವುದನ್ನು ಸಹ ಗಮನಿಸಬಹುದು.
ಕೆಲವರಿಗೆ ಇದು ಒಂದು ರೀತಿಯ ಮಜಾ ಮಾಡುವ ಹಬ್ಬವಾದರೆ ಬಹುತೇಕರಿಗೆ ಕಿರಿಕಿರಿ ಉಂಟುಮಾಡುತ್ತಿರುವುದನ್ನು ಕಾಣಬಹುದು.
ಹಬ್ಬಗಳು ಉಳ್ಳವರಿಗೆ ಸಂಭ್ರಮದ, ಸಂತೃಪ್ತಿಯ ಜೀವನೋತ್ಸಾಹದ ಆಚರಣೆಗಳಾದರೆ ಇಲ್ಲದವರಿಗೆ ನೋವಿನ, ಅಸಹಾಯಕತೆಯ, ದುರಾದೃಷ್ಟದ ನೆನಪುಗಳಾಗಿ ಸಹ ಕಾಡುತ್ತದೆ.
ಬಡತನದ ತೀವ್ರತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಸಹ ನಾವು ಯೋಚಿಸಬೇಕಿದೆ.
ನಮ್ಮೊಳಗಿನ ಗಣೇಶ ಹೊರಗಿನ ಮಣ್ಣಿನ, ಕಲ್ಲಿನ, ಮೇಣದ, ಗಣೇಶನಿಗಿಂತ ಶಕ್ತಿಶಾಲಿ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಜಗತ್ತು ಮುಂದುವರಿದಂತೆ ಹಬ್ಬಗಳು ಸಹ ಅರ್ಥ ಕಳೆದುಕೊಂಡು ತೋರಿಕೆಯ ಪ್ರದರ್ಶನಗಳಾಗದೆ ನಿರಾಸಕ್ತಿ ಮೂಡಿಸದೆ ನಮ್ಮಲ್ಲಿ ಹೊಸ ಚೈತನ್ಯದ ಶಕ್ರಿ ಮೂಡಿಸಲು ಅದನ್ನು ಪುನರ್ ರೂಪಿಸಿಕೊಳ್ಳುವ ಅವಶ್ಯಕತೆ ಇದೆ.
ಬದಲಾವಣೆ ಜಗದ ನಿಯಮ. ಇಲ್ಲದಿದ್ದರೆ ನಿಂತ ನೀರಾಗಿ ಕೊಳೆಯಲಾರಂಭಿಸುತ್ತದೆ.
ಇದು ಎಲ್ಲಾ ಧರ್ಮಗಳ ಎಲ್ಲಾ ಹಬ್ಬದ ಆಚರಣೆಗಳಿಗು ಸಮನಾಗಿ ಅನ್ವಯ……
ಗೌರಿ ಗಣೇಶ ಹಬ್ಬದ ಶುಭಾಶಯಗಳು….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……