Spread the love

1) ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ, ಶಿಕ್ಷೆಯಾಗುತ್ತಿಲ್ಲ. ದೊಡ್ಡ ಪ್ರಮಾಣದ ಪ್ರತಿಭಟನೆ ಅಥವಾ ಸಾರ್ವಜನಿಕ ಆಕ್ರೋಶಗಳು ಕಾಣುತ್ತಿಲ್ಲ. ಹಾಗಾದರೆ ವ್ಯವಸ್ಥೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದರೆ ಖಂಡಿತ ಇಲ್ಲ. ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಹಾಗಾದರೆ ಏನಿದು ಮಾಯೆ. ಇದೇ ಒಂದು ಅದ್ಬುತವಲ್ಲವೇ…..

2) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ, ವೈಜ್ಞಾನಿಕ ಪ್ರಜ್ಞೆ ಮೂಡಿಸಿ, ನಿಷ್ಪಕ್ಷಪಾತವಾಗಿ ವಿವೇಚನೆಯಿಂದ ಸುದ್ದಿಗಳನ್ನು ಪ್ರಸಾರ ಮಾಡುತ್ತಾ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕಾದ ಮಾಧ್ಯಮಗಳು ಅದಕ್ಕೆ ವಿರುದ್ಧವಾಗಿ ಸರ್ವಾಧಿಕಾರವನ್ನು ಬೆಂಬಲಿಸುತ್ತಾ, ಪಕ್ಷಪಾತವಾಗಿ ವರ್ತಿಸುತ್ತಾ, ಮೌಡ್ಯಗಳನ್ನು ಬಿತ್ತುತ್ತಾ, ಸಾರ್ವಜನಿಕರನ್ನು ಹಿಂಸೆಗೆ ಪ್ರಚೋದಿಸುತ್ತಾ, ವಿವೇಚನಾ ರಹಿತ ಚರ್ಚೆಗಳನ್ನು ಮಾಡುತ್ತಾ ಇದ್ದರೂ ಸಾರ್ವಜನಿಕರು, ಅಧಿಕಾರಿಗಳು, ಬುದ್ಧಿಜೀವಿಗಳು, ಧಾರ್ಮಿಕ ನಾಯಕರು ದೊಡ್ಡ ಪ್ರಮಾಣದಲ್ಲಿ ಅದರ ವಿರುದ್ಧ ಧ್ವನಿ ಎತ್ತದೇ ಮೌನವಾಗಿ ಇದ್ದು ತಾವು ಮಾತ್ರ ಪ್ರಕಾಂಡ ಪಂಡಿತರು ಎಂಬಂತೆ ಸಾರ್ವಜನಿಕವಾಗಿ ಬಿಂಬಿಸಿಕೊಳ್ಳುವುದು ಸೋಜಿಗವಲ್ಲವೇ. ಇದು ಒಂದು ಅದ್ಬುತ….

3) ಇತಿಹಾಸವನ್ನು ಯಾವ ಅಧೀಕೃತ ಮಾನದಂಡಗಳ ಆಧಾರದ ಮೇಲೆ ದಾಖಲಿಸಲಾಗುತ್ತದೆ ಎಂಬುದರ ಸಾಮಾನ್ಯ ಜ್ಞಾನವೂ ಇಲ್ಲದೇ ಯಾರೋ ಬರೆದ ಅವರ ಅನುಭವಗಳ ಪುಸ್ತಕ, ಯಾರದೋ ಭಾವನೆಗಳ ಪತ್ರಗಳು, ಯಾರದೋ ಅಭಿಪ್ರಾಯಗಳ ಭಾಷಣಗಳು, ಇನ್ಯಾರದೋ ವಿಮರ್ಶೆಗಳ ಆಧಾರದ ಮೇಲೆ ಹಾದಿ ಬೀದಿಯಲ್ಲಿ, ಮಾಧ್ಯಮಗಳಲ್ಲಿ ಅಧ್ಯಯನ, ಚಿಂತನೆ, ವಾಸ್ತವಿಕ ಪ್ರಜ್ಞೆ, ಜವಾಬ್ದಾರಿ ಏನೂ ಇಲ್ಲದೇ ಚರ್ಚಿಸುತ್ತಾ ಅದರ ಕಾರಣದಿಂದಾಗಿ ಸಮಾಜದ ಶಾಂತಿ ಕದಡಿ ಯಾರದೋ ವ್ಯಕ್ತಿತ್ವಗಳನ್ನು ಕುಗ್ಗಿಸುತ್ತಾ – ಹಿಗ್ಗಿಸುತ್ತಾ – ಘಟನೆಗಳನ್ನು ವೈಭವೀಕರಿಸುತ್ತಾ ಸಂಘರ್ಷಮಯ ವಾತಾವರಣ ಸೃಷ್ಟಿಯಾಗುತ್ತಿದ್ದರೂ ಜನ ಮಾತ್ರ ತಣ್ಣಗೆ ಇದು ತಮಗೆ ಸಂಬಂಧಿಸಿಲ್ಲ ಎಂದು ತಮ್ಮ ಪಾಡಿಗೆ ತಾವು ಬದುಕುತ್ತಿರುವುದು ಒಂದು ಆಶ್ಚರ್ಯಕರ ವಿದ್ಯಮಾನವಲ್ಲವೇ..
ಇದು ಒಂದು ಅದ್ಬುತ…

4) ಹುಟ್ಟಿನಿಂದ ಯಾರೂ ಮೇಲಲ್ಲ ಅಥವಾ ಕೀಳಲ್ಲ ಎಂದು ಗೊತ್ತಿದ್ದರೂ ಇಡೀ ವ್ಯವಸ್ಥೆಯ ಎಲ್ಲಾ ಚಟುವಟಿಕೆಗಳು ಬಹುತೇಕ ಜಾತಿಯ ಆಧಾರದ ಮೇಲೆಯೇ ನಡೆಯುತ್ತಿದ್ದರೂ ಜಾತಿ ವ್ಯವಸ್ಥೆಯ ವಿರುದ್ಧ ಎಲ್ಲರೂ ಮಾತನಾಡುತ್ತಾ ಆಂತರ್ಯದಲ್ಲಿ ಅದರ ಬಗ್ಗೆ ಅಭಿಮಾನ ಹೊಂದಿ ಅದನ್ನೇ ತಮ್ಮ ಐಡೆಂಟಿಟಿ ಮಾಡಿಕೊಂಡು ಬದುಕುತ್ತಿರುವ ಮುಖವಾಡಗಳು ತಮ್ಮದೇ ಆತ್ಮಗಳಿಗೆ ತಿಳಿಯುತ್ತಿಲ್ಲ ಎಂಬುದೇ ಒಂದು ಅದ್ಭುತ….

5) ಪರರ ಹಣ ಆಸ್ತಿ ಒಡವೆ ಎಲ್ಲವೂ ಹೇಸಿಗೆಗೆ ಸಮಾನ. ನಾವು ದುಡಿದ – ನಮ್ಮ ಶ್ರಮದ ಸಂಪತ್ತಿನ ಮೇಲೆ ಮಾತ್ರ ನಮಗೆ ಅನುಭವಿಸುವ ಅಧಿಕಾರ ಇರುವುದು, ಮಾನವನ ಬದುಕಿನ ಸಾರ್ಥಕತೆ ಅಡಗಿರುವುದು ದಾನ ಧರ್ಮ ನ್ಯಾಯ ನೀತಿ ಕರಣೆ ತ್ಯಾಗ ಸತ್ಯ ಸರಳತೆ ಪ್ರಾಮಾಣಿಕತೆ ಎಂಬ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಎಂಬ ತತ್ವಗಳನ್ನು ನಾವು ಪೂಜಿಸುವ – ಆರಾಧಿಸುವ – ಅಭಿಮಾನಿಸುವ – ಗೌರವಿಸುವ – ಬೆಂಬಲಿಸುವ – ಇಷ್ಟಪಡುವ ಎಲ್ಲರೂ ಹೇಳಿದ್ದಾರೆ ಮತ್ತು ಅದನ್ನು ನಾವು ಒಪ್ಪುತ್ತೇವೆ ಸಹ. ಆದರೂ ಇಡೀ ಸಮಾಜ ಕೆಲವರನ್ನು ಹೊರತುಪಡಿಸಿ ಬಹುತೇಕ ಇದಕ್ಕೆ ವಿರುದ್ಧ ನಡವಳಿಕೆಗಳನ್ನು ಅನುಸರಿಸುತ್ತಿದೆ. ಇಷ್ಟೊಂದು ವೈರುಧ್ಯಗಳ ಮಧ್ಯೆ ನಾವು ಜೀವಿಸುತ್ತಿರುವುದು ಒಂದು ಅದ್ಬುತವಲ್ಲವೇ…

6) ಪ್ರಕೃತಿಯೇ ದೇವರು, ಹೆಣ್ಣು ದೇವತೆ, ಅನ್ನ ಆಹಾರ ದೇವರು, ನೀರು ಗಾಳಿ ದೇವರು, ಮಣ್ಣು ದೇವರು, ಅನ್ನದಾತ ದೇವರು, ಗುರುಗಳು ದೇವರು, ವೈದ್ಯ ದೇವರು, ಅಪ್ಪ ಅಮ್ಮ ದೇವರು ಜೊತೆಗೆ ಕಾಣದ ಒಂದು ಬಲವಾದ ದೈವಿಕ ಶಕ್ತಿ ನಮ್ಮನ್ನು ಗಮನಿಸುತ್ತಿದೆ ಎಂಬ ಬಲವಾದ ನಂಬಿಕೆ ಬೇರೂರಿರುವ ಸಮಾಜದಲ್ಲಿ ಇಷ್ಟೊಂದು ಅನ್ಯಾಯ ಅಕ್ರಮ ಶೋಷಣೆ ಕೊಲೆ ಅತ್ಯಾಚಾರ ಅನಾಥಾಶ್ರಮ ವೃದ್ದಾಶ್ರಮ ಪೋಲೀಸ್ ಕೋರ್ಟ್ ಸಿಸಿಟಿವಿ ಎಲ್ಲವೂ ಇಷ್ಟೊಂದು ಪ್ರಮಾಣದಲ್ಲಿ ಇರುವುದು ಏಕೆ ಮತ್ತು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇವುಗಳು ಇದ್ದರೂ ಇನ್ನೂ ಹೆಚ್ಚು ಕೆಟ್ಟ ಘಟನೆಗಳು ನಿರಾತಂಕವಾಗಿ ನಡೆಯುತ್ತಿರುವುದು ಸಹ ಅದ್ಬುತ ಅಲ್ಲವೇ….

7) ಯಾವ ಧರ್ಮಗಳು ( ಮತಗಳು ) ಸಮಾಜವನ್ನು – ಜನರನ್ನು ಒಂದುಗೂಡಿಸಿ ಮಾನವೀಯ ಮೌಲ್ಯಗಳ ಆಧಾರದ ಮೇಲೆ ಶಾಂತಿ ನೆಮ್ಮದಿ ಸೌಹಾರ್ದತೆಯಿಂದ ಈ ಸಮುದಾಯಗಳನ್ನು ಮುನ್ನಡೆಸಬೇಕಾಗಿತ್ತೋ ಅದೇ ಧರ್ಮಗಳು ಇಂದು ಇಡೀ ಸಮಾಜವನ್ನು ಅಗ್ನಿ ಕುಂಡವಾಗಿ ಮಾರ್ಪಡಿಸಿರುವಾಗ ಈಗಲೂ ನಮ್ಮ ಧರ್ಮವೇ ಶ್ರೇಷ್ಠ ಎಂಬ ವ್ಯಸನಕ್ಕೆ ಬಿದ್ದಿರುವುದು ಒಂದು ಕೌತುಕ. ಕಳೆದ 5000 ವರ್ಷಗಳಲ್ಲಿ ಅಂದಾಜು ಸುಮಾರು 15000 ಯುದ್ದಗಳು ನಡೆದಿವೆ ಎಂದು ಅಂದಾಜು. ಇದರಲ್ಲಿ ಬಹುತೇಕ ಧರ್ಮಗಳ ಕಾರಣದಿಂದಲೇ ಆಗಿವೆ. ಆದರೂ ಜನ ಪಾಠ ಕಲಿಯಲಿಲ್ಲ ಎಂಬುದೇ ಒಂದು ಅದ್ಬುತ….

ಕ್ಷಮಿಸಿ ಈ ಅದ್ಭುತಗಳು ಮಾತ್ರವಲ್ಲ ಈ ಸಮಾಜದಲ್ಲಿ ಜಗತ್ತಿಗೇ ಮಾರ್ಗದರ್ಶನಾದ ಒಳ್ಳೆಯ ಏಳು ಅದ್ಬುತಗಳು ಸಹ ಇವೆ. ಆದರೆ ಮನಸ್ಸುಗಳ ಅಂತರಂಗದ ಚಳವಳಿಯ ಅವಶ್ಯಕತೆ ಇರುವುದು ಕೆಟ್ಟದ್ದನ್ನು ಒಳ್ಳೆಯದಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಜಾಗೃತ ಗೊಳಿಸುವುದು. ಒಳ್ಳೆಯದು ಇದ್ದಹಾಗೇ ಇರಲಿ. ಅದನ್ನು ಪ್ರೋತ್ಸಾಹಿಸೋಣ. ಹಾಗೆಯೇ ಕೆಟ್ಟದ್ದನ್ನು ಗುರುತಿಸಿ ಅದನ್ನು ಜನರ ಮನಸ್ಸಿಗೆ ಚುಚ್ಚಿ ಬಡಿದೆಬ್ಬಿಸಿ ಒಂದಷ್ಟು ಪರಿವರ್ತನೆ ಮಾಡುವ ಆಶಯದಿಂದ ಆತ್ಮಸಾಕ್ಷಿಯ ಜಾಗೃತಿಗಾಗಿ ಇದನ್ನು ಹೇಳಬೇಕಾಗಿದೆ.

ಆದ್ದರಿಂದ ಈ‌ ಅಂಶಗಳ ಮಂಥನಕ್ಕಾಗಿ ಭಾರತೀಯ ಸಮಾಜದ ಏಳು ಅದ್ಬುತಗಳ ಒಂದು ನೋಟ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!