Spread the love

ಮಹರ್ಷಿಗಳೇ,
ನಮ್ಮ ಸಂಸಾರದಲ್ಲಿ ಹೊಂದಾಣಿಕೆ ಸಾಧ್ಯವಾಗುತ್ತಿಲ್ಲ. ಪ್ರತಿನಿತ್ಯ ಜಗಳ. ಅದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಬದುಕುವ ಆಸೆ ಉಳಿದಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ…….

ಸ್ವಾಮೀಜಿಗಳೇ,
ಕೊರೋನಾ ಎಂಬ ಮಹಾ ಮಾರಿ ಜಗತ್ತನ್ನೇ ನಾಶ ಮಾಡಲು ಅಥವಾ ಜನರಿಗೆ ಪಾಠ ಕಲಿಸಲು ದೇವರು ಕಳುಹಿಸಿದ ದೂತನಂತೆ ನಿಜವೇ. ದಯವಿಟ್ಟು ತಿಳಿಸಿ…..

ಗುರುಗಳೇ,
ನಾನು ಮಾಡುತ್ತಿರುವ ಎಲ್ಲಾ ವ್ಯವಹಾರಗಳು ಸೋಲುತ್ತಿವೆ. ಅದರಿಂದಾಗಿ ಅಪಾರ ನಷ್ಟವಾಗಿ ತುಂಬಾ ಸಾಲ ಮಾಡಿಕೊಂಡಿದ್ದೇನೆ. ಆಗಾಗ ಆತ್ಮಹತ್ಯೆಯ ಯೋಚನೆ ಸುಳಿಯುತ್ತಿದೆ. ಇದಕ್ಕೆ ಏನಾದರೂ ಪರಿಹಾರ ಇದೆಯೇ……

ಪೂಜ್ಯರೇ,
ಖಾಸಗೀಕರಣ ಮತ್ತು ಇತರ ಹೊಸ ಹೊಸ ಕಾನೂನುಗಳಿಂದ ದೇಶಕ್ಕೆ ಒಳ್ಳೆಯದಾಗುತ್ತದೆಯೇ ಅಥವಾ ಕೆಟ್ಟದ್ದು ಆಗುತ್ತದೆಯೇ ದಯವಿಟ್ಟು ತಿಳಿಸಿ. ಎಲ್ಲಾ ಕಡೆ ಅದರದೇ ಚರ್ಚೆ ಮತ್ತು ಗಲಾಟೆ…..

ದೈವಜ್ಞರೆ,
ಮನುಷ್ಯ ಮಂಗಳ ಗ್ರಹಕ್ಕೆ ಕಾಲಿಡುವ ಪ್ರಯತ್ನ ಮಾಡುತ್ತಿದ್ದಾನೆ. ಒಂದು ವೇಳೆ ಅದು ಯಶಸ್ವಿಯಾದರೆ ಅಮಂಗಳ ಉಂಟಾಗಿ ಭೂ ಮಂಡಲಕ್ಕೆ ಗಂಡಾಂತರ ಇದೆಯೇ…..

ಹೀಗೆ ಕೆಲವು ಸಾವಿರ – ಲಕ್ಷಗಳು ಸೇರುವ ಸಮಾರಂಭಗಳಲ್ಲಿ ಭಕ್ತರು ಧಾರ್ಮಿಕ ಮುಖಂಡರನ್ನು ವಿವಿಧ ರೀತಿಯ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆ ಕೇಳುತ್ತಾರೆ. ಆತ ಅಥವಾ ಆಕೆ ಈ ಎಲ್ಲಾ ಪ್ರಶ್ನೆಗಳಿಗೂ ನಗುನಗುತ್ತಾ ಯಾವುದೇ ಹಿಂಜರಿಕೆ ಇಲ್ಲದೆ ಆತ್ಮವಿಶ್ವಾಸದಿಂದ ಉತ್ತರಿಸುತ್ತಾರೆ. ಬಹುತೇಕರು ಆ ಉತ್ತರದಿಂದ ತೃಪ್ತರಾಗುತ್ತಾರೆ ಮತ್ತು ಮತ್ತಷ್ಟು ಭಕ್ತರನ್ನು ಆ ಗುಂಪಿಗೆ ಸೇರಿಸುತ್ತಾರೆ. ಇದು ಎಲ್ಲಾ ಧರ್ಮ ಗಳಲ್ಲೂ ನಡೆಯುತ್ತಿದೆ.

ಇಲ್ಲಿನ ಮುಖ್ಯ ಪ್ರಶ್ನೆ ಒಬ್ಬ ಧಾರ್ಮಿಕ ಗುರು ಇಷ್ಟೆಲ್ಲಾ ಪ್ರಶ್ನೆಗಳಿಗೆ, ಅದರಲ್ಲೂ ಸಾಂಸಾರಿಕ, ತಾಂತ್ರಿಕ, ಖಗೋಳ, ರಾಜಕೀಯ ಮುಂತಾದ ಎಲ್ಲಾ ಕ್ಷೇತ್ರದ ಪ್ರಶ್ನೆಗಳಿಗೂ ನಿಂತ ನಿಲುವಿನಲ್ಲಿ ಉತ್ತರಿಸಲು ಸಾಧ್ಯವೇ….

ಒಬ್ಬ ಮನುಷ್ಯನಿಗೆ ಮಿತಿ ಇಲ್ಲವೇ ಅಥವಾ ಇವರು ಎಲ್ಲಾ ಮಿತಿಗಳನ್ನು ದಾಟಿದ ಅತಿ ಮಾನವರೇ, ಅದರಿಂದಾಗಿಯೇ ಅವರು ಮಹರ್ಷಿಗಳಾಗಿದ್ದಾರೆಯೇ……

ಸ್ವಲ್ಪ ಯೋಚಿಸಿ ನೋಡಿ….
ಒಬ್ಬ ಮಹರ್ಷಿ ಇಲ್ಲಿಯವರೆಗೂ ಜಗತ್ತಿನ ಯಾರಿಗೂ ಸರಿಯಾಗಿ ಅರ್ಥವಾಗದ ಸುಖ ಸಂಸಾರದ ಸೂತ್ರಗಳ ಬಗ್ಗೆ ಪುಂಖಾನುಪುಂಖವಾಗಿ ಸಲಹೆ ಕೊಡುತ್ತಾನೆ. ಅದು ಸಾಧ್ಯವೇ. ಸಂಸಾರವೆಂಬುದು ಒಂದು ಬೃಹತ್ ಸಾಗರ ಅಥವಾ ಚದುರಂಗದ ಆಟವಿದ್ದಂತೆ. ಕೊಟ್ಯಾನುಕೋಟಿ ಚಲನೆಗಳನ್ನು ಹೊಂದಿರುತ್ತದೆ. ಕೆಲವು ಯಶಸ್ವಿಯಾಗಬಹುದು, ಕೆಲವು ವಿಫಲವಾಗಬಹುದು, ಕೆಲವು ಅನಿವಾರ್ಯ ಹೊಂದಾಣಿಕೆ ಆಗಬಹುದು, ಕೆಲವು ಮೇಲ್ನೋಟವೇ ಬೇರೆ ಒಳ ನೋಟವೇ ಬೇರೆ ಆಗಿರಬಹುದು ಹೀಗೆ ನಾನಾ ವಿಧಗಳಲ್ಲಿ ಇರಬಹುದು. ಅದಕ್ಕೆ ಒಂದು ನಿರ್ಧಿಷ್ಟ ಪರಿಹಾರ ಸಾಧ್ಯವೇ.

ಒಬ್ಬ ಮಹಾನ್ ಪಂಡಿತ ಸಲಹೆ ಕೊಡುತ್ತಾನೆ. ಗಂಡ ಹೆಂಡತಿ ಜಗಳ ಆಗುವಾಗ ಇಬ್ಬರಲ್ಲಿ ಒಬ್ಬರು ಮೌನವಹಿಸಬೇಕಂತೆ. ಅದು ವಾಸ್ತವವೇ. ಅಷ್ಟು ಹೊಂದಾಣಿಕೆ ಇದ್ದಿದ್ದರೆ ಜಗಳವೇ ಆಗುತ್ತಿರಲಿಲ್ಲ. ಕೌಟುಂಬಿಕ ನ್ಯಾಯಾಲಯಗಳು ತುಂಬಿ ತುಳುಕುತ್ತಿರಲಿಲ್ಲ. ಸುಖ ಸಂಸಾರದ ಸೂತ್ರಗಳು ಮೊದಲೇ ಸಿದ್ದವಾಗಿರುವುದಿಲ್ಲ. ಅವು ಆಯಾ ವ್ಯಕ್ತಿ ಮತ್ತು ಸಂದರ್ಭಗಳ ಅನುಭವದ ಪಾಠಗಳು.

ಇನ್ನು ತಮ್ಮ ಬಳಿ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಕೊರೋನಾ, ಖಗೋಳ, ಆರ್ಥಿಕತೆ ಸೇರಿ ಎಲ್ಲದಕ್ಕೂ ಉತ್ತರಿಸುತ್ತಾರೆ. ಕೆಲವು ವಿಷಯಗಳು ತಮಗೆ ತಿಳಿದಿಲ್ಲ ಎಂಬ ಪರಿಜ್ಞಾನವೇ ಇರುವುದಿಲ್ಲ ಅಥವಾ ಇದ್ದರೂ ಅದನ್ನು ತೋರ್ಪಡಿಕೊಳ್ಳುವುದು ಅವಮಾನ ಎಂಬ ಭ್ರಮಗೆ ಒಳಗಾಗಿರುತ್ತಾರೆ. ಸಕಲಕಲಾ ವಲ್ಲಭರಂತೆ ಮುಖವಾಡ ತೊಟ್ಟಿರುತ್ತಾರೆ.

ತೀರಾ ಕಠಿಣವಾದ ಮತ್ತು ವಾಸ್ತವವಲ್ಲದ ಪ್ರಶ್ನೆ ಎದುರಾದಾಗ ತ್ರಿಲೋಕ ಸಂಚಾರಿಗಳಂತೆ, ಯುಗಗಳ ಪ್ರವರ್ತಕರಂತೆ, ಜನ್ಮಾಂತರ ಬಲ್ಲವರಂತೆ, ಸ್ವರ್ಗ ನರಕಗಳ ಒಡೆಯರಂತೆ ಅದರೊಳಗೆ ಅಡಗಿ ಪಲಾಯನವಾದದ ಉತ್ತರ ನೀಡಿ ಪಾರಾಗುತ್ತಾರೆ.

ಭಕ್ತಿಯೋ ಮೌಡ್ಯವೋ ಸಂಕಷ್ಟವೋ ಯಾವುದೋ ಒತ್ತಡಕ್ಕೆ ಸಿಲುಕಿದ ಜನ ಇದನ್ನೆಲ್ಲಾ ನಂಬುತ್ತಾರೆ. ನಮ್ಮ ಇಡೀ Social structure ನಿರ್ಮಾಣವಾಗಿರುವುದೇ ಹೀಗೆ. ಅದರ ಮೇಲೆಯೇ ಸಮಾಜ ನಿಂತಿದೆ. ಆದ್ದರಿಂದಲೇ ಇದನ್ನು ಸರಿಪಡಿಸುವುದು ಬಹಳ ಕಷ್ಟ.

ಆರ್ಥಿಕತೆ, ರಾಜಕೀಯ, ಸಮಾಜ, ವಿಜ್ಞಾನ, ಸಿನಿಮಾ, ಸಂಗೀತ, ಸಾಹಿತ್ಯ, ಆಧ್ಯಾತ್ಮ, ವೈದ್ಯಕೀಯ, ಇಂಜಿನಿಯರಿಂಗ್, ಚಾಲನೆ ಮುಂತಾದ ಯಾವುದೇ ವಿಷಯವಿರಲಿ ದೀರ್ಘ ಅಧ್ಯಯನ ಮತ್ತು ನಿರಂತರ ಪ್ರಾಯೋಗಿಕ ಅನುಭವದಿಂದ ಆಯಾ ಕ್ಷೇತ್ರಗಳಲ್ಲಿ ಒಂದಷ್ಟು ಪರಿಣತಿ ಸಿಗುತ್ತದೆ.
ಅದೂ ಪರಿಪೂರ್ಣತೆ ಅಲ್ಲದಿದ್ದರೂ ಕನಿಷ್ಠ ಜ್ಞಾನ ಇದ್ದೇ ಇರುತ್ತದೆ.

ಆದರೆ ಈ‌ ಧಾರ್ಮಿಕ ಮುಖಂಡರು ಅದರ ಸಂಪೂರ್ಣ ಜ್ಞಾನ ಇಲ್ಲದಿದ್ದರು ಎಲ್ಲವನ್ನೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿವರಿಸಿ ಭ್ರಮಾಲೋಕಕ್ಕೆ ಕೊಂಡೊಯ್ಯುತ್ತಾರೆ.

ಇಲ್ಲಿನ ಇನ್ನೊಂದು ಸೂಕ್ಷ್ಮವೆಂದರೆ ಒಬ್ಬ ವ್ಯಕ್ತಿಗೆ ಅಪರೂಪಕ್ಕೆ ಒಂದಷ್ಟು ಬೇರೆ ಬೇರೆ ಕ್ಷೇತ್ರಗಳ ಜ್ಞಾನ ಸಿದ್ದಿಸಿರಬಹುದು.
ಆದು ಆತನ ವೈಯಕ್ತಿಕ ಬುದ್ದಿವಂತಿಕೆಯಾಗಿರುತ್ತದೆ. ಅದನ್ನೇ ಆತ ಸಾಮಾನ್ಯ ಜನರ ಪರಿಸರ, ಪರಿಸ್ಥಿತಿ, ಮಿತಿಗಳನ್ನು ಅರ್ಥಮಾಡಿಕೊಳ್ಳದೆ ತನ್ನ ಜ್ಞಾನವೇ ಅತ್ಯುತ್ತಮ ಎಂಬಂತೆ ವಿವರಿಸುತ್ತಾನೆ. ಅದು ಎಲ್ಲರಿಗೂ, ಎಲ್ಲಾ ಸಂದರ್ಭಗಳಿಗೂ ಅನ್ವಯವಾಗುವುದಿಲ್ಲ ಎಂಬ ಅರಿವೇ ಇರುವುದಿಲ್ಲ. ನಿಮ್ಮ ಬದುಕಿನ ಅನುಭವಗಳು ನನ್ನ ಬದುಕಿಗೆ ಪೂರಕವೂ ಆಗಬಹುದು ಮಾರಕವೂ ಆಗಬಹುದು. ಆದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.

ಶಿಕ್ಷಣ ಕ್ರೀಡೆ ಅಥವಾ ಯಾವುದೇ ಇರಲಿ ಮಕ್ಕಳಿಗೆ ಅದರ ಬಗ್ಗೆ ‌ಸಾಮಾನ್ಯ ತಿಳಿವಳಿಕೆ ನೀಡುವುದು ಬೇರೆ. ಆದರೆ ಅದರಲ್ಲಿ ಸಂಪೂರ್ಣ ಪರಿಣತಿ ಪಡೆಯಲು ಆ ಮಗುವಿನ ಮಾನಸಿಕ ದೈಹಿಕ ಸಾಮಾಜಿಕ ಸ್ಥಿತಿ ಗತಿ ಪರಿಶೀಲನೆ ತುಂಬಾ ಅಗತ್ಯವಿದೆ. ಅದರ ಕೊರತೆ ಇಂದು ನಮ್ಮನ್ನು ಕಾಡುತ್ತಿದೆ.

ಸ್ವತಂತ್ರ ಚಿಂತನೆ, ಸಾಮಾನ್ಯ ಜ್ಞಾನ ಎಂಬುದು ಜನರಿಂದ ಬಹಳ ದೂರ ಸರಿದಿದೆ. ಬಾಹ್ಯ ಒತ್ತಡದ ಉಡಾಫೆ ಮನೋಭಾವ ನಮ್ಮ ಯುವ ಜನಾಂಗದ ಮೇಲೆ ಸಾಕಷ್ಟು ಪರಿಣಾಮ ಬೀರಿ ಅದರ ಫಲಿತಾಂಶ ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ.

ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಗಮನಹರಿಸುವ ಅವಶ್ಯಕತೆ ಇದೆ. ಧಾರ್ಮಿಕ ಮುಖಂಡರಲ್ಲಿ ಎಲ್ಲದಕ್ಕೂ ಉತ್ತರವಿದೆ ಎಂಬ ಭ್ರಮೆಯಿಂದ ಹೊರಬರಬೇಕಿದೆ………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!