Spread the love

ಉಡುಪಿ ಜಿಲ್ಲೆಯ ರಜತ ಸಂಭ್ರಮವನ್ನು ಆಚರಿಸಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಪತ್ರಿಕೆಗಳಲ್ಲಿ ವರದಿಯಾಗುತ್ತಿದೆ. ಬಿಜೆಪಿ ಜನಪ್ರತಿನಿಧಿಗಳು, ನಾಯಕರು ಉಡುಪಿ ಜಿಲ್ಲೆ ತಮ್ಮದೇ ಕೊಡುಗೆ ಎಂಬಂತೆ ಫೋಸ್ ಕೊಡುತ್ತಿರುವುದು ಕಂಡುಬರುತ್ತಿದೆ.

ಉಡುಪಿ ಜಿಲ್ಲೆಯಾಗಲು ಮೂಲ ಕಾರಣಕರ್ತರು ಯು. ಆರ್. ಸಭಾಪತಿಯವರು. ಅದರೆ ಈಗ ಪತ್ರಕರ್ತರ ಸಹಿತ ಎಲ್ಲರೂ ಈ ಒಂದು ಸತ್ಯವನ್ನು ಮರೆತಿದ್ದಾರೆ. ಈ ಮರೆವಿಗೆ ಏನು ಕಾರಣವೆಂದು ನನಗೆ ಗೊತ್ತಿಲ್ಲ. ಇದು ಉದ್ಧೇಶಪೂರ್ವಕ ಮರೆವು ಇರಬೇಕು.

ಯು. ಆರ್. ಸಭಾಪತಿಯವರು ಮೊದಲ ಬಾರಿಗೆ ಶಾಸಕರಾದ ಅವಧಿಯಲ್ಲಿ, ಶಾಸಕರಾಗಿ ಅಂದಾಜು ಒಂದು ವರ್ಷವಾದ ಬಳಿಕ ಸದನದಲ್ಲಿ ಮಾತನಾಡುತ್ತಾ ಕುಂದಾಪುರ, ಕಾರ್ಕಳ ಮತ್ತು ಉಡುಪಿ ತಾಲೂಕನ್ನು ಜಿಲ್ಲೆಯಾಗಿಸಬೇಕು ಎಂದು ಒತ್ತಾಯಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಜೆ. ಎಚ್. ಪಟೇಲರು, “ನೀವು ಹೊಸದಾಗಿ ಶಾಸಕರಾದವರು ಚೆನ್ನಾಗಿ ಮಾತಾಡುತ್ತೀರಿ, ಅತ್ಯುತ್ಸಾಹದಿಂದ ಮಾತಾಡುತ್ತೀರಿ, ಆದರೆ ಒಂದು ತಾಲೂಕನ್ನು ಜಿಲ್ಲೆಯಾಗಿ ಮಾಡುವಾಗ ರಾಜ್ಯ ಸರಕಾರದ ಬೊಕ್ಕಸಕ್ಕಾಗುವ ಹೊರೆ ಎಷ್ಟು ಎಂಬುದೇನಾದರೂ ನಿಮಗೆ ಗೊತ್ತಾ… ?” ಎಂದು ಪ್ರಶ್ನಿಸಿದ್ದರು. ಮರುದಿನವೇ ಶಾಸಕ ಸಭಾಪತಿಯವರು ಉಡುಪಿ ತಾಲೂಕಿನ ವರಮಾನದ ಸಮಗ್ರ ವಿವರಗಳನ್ನು ದಾಖಲೆಗಳ ಸಹಿತ ಬೆಂಗಳೂರಿಗೆ ತಮ್ಮವರ ಮೂಲಕ ತರಿಸಿಕೊಂಡು ಸಿಎಂ ಪಟೇಲರ ಕೈಗೆ ಕೊಟ್ಟಿದ್ದರು.

ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕೆಸಿಪಿ ಪಕ್ಷದ ಅಬ್ಯರ್ಥಿಯಾಗಿ ಸ್ಪರ್ಧಿಸಿ ವಿಜಯಿಯಾದವರು ಯು. ಆರ್. ಸಭಾಪತಿಯವರು. ಬಂಗಾರಪ್ಪರ ಕೆಸಿಪಿಯ ಏಕೈಕ ಶಾಸಕರು.

ಅಂದು ಸಭಾಪತಿಯವರು ಸದನದಲ್ಲಿ ಉಡುಪಿ ತಾಲೂಕನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದಾಗ, ಮುಖ್ಯಮಂತ್ರಿ ಪಟೇಲರು ಮರು ಪ್ರಶ್ನಿಸಿದಾಗ ಅದೇ ಸದನದಲ್ಲಿ ಕುಳಿತಿದ್ದವರು ಅಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಜಯಪ್ರಕಾಶ್ ಹೆಗ್ಡೆಯವರು.

ಬಳಿಕ ಜಯಪ್ರಕಾಶ್ ಹೆಗ್ಡೆಯವರು ಸಚಿವರಾದರು. ಜಿಲ್ಲಾ ಉಸ್ತುವಾರಿ ಸಚಿವರಾದರು. ಶಾಸಕ ಸಭಾಪತಿಯವರ ಶ್ರಮದ ಫಲವಾಗಿ ಉಡುಪಿ ತಾಲೂಕು ಜಿಲ್ಲೆಯಾಯಿತು. ಸಚಿವರಾದ ಕಾರಣಕ್ಕೆ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲೆಯಾದುದರ ಕ್ರೆಡಿಟ್ ನ್ನು ಜಯಪ್ರಕಾಶ್ ಹೆಗ್ಡೆ ಪಡೆದುಕೊಂಡರು. ಆದರೆ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಅಲ್ಲವೇ.

ವಾಸ್ತವವನ್ನು ಮರೆಯುವುದು ಒಳ್ಳೆಯ ರಾಜಕಾರಣವಲ್ಲ. ನಿಷ್ಪಕ್ಷಪಾತವಾಗಿರಲೇಬೇಕಾದ ಪತ್ರಕರ್ತರು ಸತ್ಯಕ್ಕೆ ಆದ್ಯತೆ ನೀಡದಿರುವುದು ವಿಷಾದನೀಯವೇ ಸರಿ. ಯು. ಆರ್. ಸಭಾಪತಿಯವರನ್ನು ಜಿಲ್ಲೆಯ ಜನರು ಈಗ ನೆನಪಿಸಿಕೊಳ್ಳಲೇಬೇಕು.

~ ಶ್ರೀರಾಮ ದಿವಾಣ, ಉಡುಪಿ
25/08/2022

error: No Copying!