ಉಡುಪಿ: ಜುಲೈ: 4(ಹಾಯ್ ಉಡುಪಿ ನ್ಯೂಸ್) ಪರಿಚಿತರ ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರನ್ನು ಬಂಧಿಸುವಲ್ಲಿ ಉಡುಪಿ ಪೋಲಿಸರು ಯಶಸ್ವಿಯಾಗಿದ್ದಾರೆ .
ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಕಕ್ಕುಂಜೆ ಎಂಬಲ್ಲಿ ವಾಸವಾಗಿರುವ ಪ್ರಮೀಳಾ ಬಂಗೇರಾರವರು ದಿನಾಂಕ 21/01/2022 ರಿಂದ ದಿನಾಂಕ 20/02/2022 ರ ನಡುವಿನ ಸಮಯದಲ್ಲಿ ಯಾರೋ ಕಳ್ಳರು ತನ್ನ ಮನೆಯ ಗೋದ್ರೇಜ್ ನಲ್ಲಿರಿಸಿದ್ದ ಬಂಗಾರದ ಸರ-2, ಬಳೆ-2, ಉಂಗುರ-3, ಕಿವಿಯ ಓಲೆ-1ಜೊತೆ, ಬ್ರೆಸ್ಲೆಟ್-1 ಒಟ್ಟು ಸುಮಾರು 9 ಪವನ್ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ರೂಪಾಯಿ 3,15,000/- ಆಗಿದ್ದು, ಮನೆಗೆ ಬರುತ್ತಿದ್ದ ಸಂತೋಷ ಎಂಬಾತನ ಮೇಲೆ ತನಗೆ ಸಂಶಯ ಇರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಇದ್ದ ಪ್ರಸಾದ್ಕುಮಾರ್ ಕೆ. ಪೊಲೀಸ್ ಉಪ ನಿರೀಕ್ಷಕರು ತನಿಖೆ-1 ಹಾಗೂ ಸಿಬ್ಬಂದಿಯವರಾದ ಸತೀಶ್, ಕಿರಣ್ ರವರು ಆರೋಪಿ ಸಂತೋಷ್ ಪೂಜಾರಿ,(36),ಅಮ್ಮ ಕ್ರಪಾ, ಗರಡಿ ದೇವಸ್ಥಾನದ ಹತ್ತಿರ,ಕಕ್ಕುಂಜೆ, ಶಿವಳ್ಳಿ ಎಂಬವನನ್ನು ಉಡುಪಿ ಕೃಷ್ಣ ಮಠದ ಗೀತಾ ಮಂದಿರದ ಬಳಿಯಿಂದ ಮತ್ತು ಪ್ರಕರಣದಲ್ಲಿ ಬಾಗಿಯಾಗಿದ್ದ ಆರೋಪಿ ರಾಕೇಶ್ ಪಾಲನ್ (37),ಕೂಸು ನಿವಾಸ, ಮಟ್ಟು, ಕಟಪಾಡಿ ಎಂಬವನನ್ನು ಉಡುಪಿ ಉಜ್ವಲ್ ಬಾರ್ ಎದುರಿನಿಂದ ವಶಕ್ಕೆ ಪಡೆದು ಕಳ್ಳರಿಬ್ಬರಿಂದ 2,18,169/- ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಪ್ರಕರಣದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್. ವಿಷ್ಣುವರ್ಧನ್, ಐ.ಪಿ.ಎಸ್ ರವರ ಆದೇಶದಂತೆ, ಶ್ರೀ ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಸುಧಾಕರ ಸದಾನಂದ ನಾಯ್ಕ್, ಡಿವೈಎಸ್ಪಿ ಉಡುಪಿ ರವರ ನಿರ್ದೇರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿರವರ ಮಾರ್ಗದರ್ಶನದಂತೆ ಪಿ.ಎಸ್.ಐ-1 ಮಹೇಶ್ ಟಿ.ಎಮ್, ಪ್ರಸಾದ್ಕುಮಾರ್ ಕೆ. ಪಿ.ಎಸ್.ಐ ತನಿಖೆ-1, ಪಿ.ಎಸ್.ಐ-2 ವಾಸಪ್ಪ ನಾಯ್ಕ್, ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಅರುಣ್ , ಸತೀಶ್ ಬೆಳ್ಳೆ , ಕಿರಣ್, ರವರು ಸಹಕರಿಸಿರುತ್ತಾರೆ.