IMG_20261128_141908.png
Spread the love

ಕುಂದಾಪುರ: ದಿನಾಂಕ:28-11-2026(ಹಾಯ್ ಉಡುಪಿ ನ್ಯೂಸ್) ಆಟೋ ರಿಕ್ಷಾ ಬಾಡಿಗೆ ವಿಚಾರವಾಗಿ ಉಂಟಾದ ವೈಮನಸ್ಸಿನ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಬೆಳ್ಳಾಲ ಗ್ರಾಮದ ಆಟೋ ರಿಕ್ಷಾ ನಿಲ್ದಾಣದ ಬಳಿ ನಡೆದಿದೆ.
ಬೆಳ್ಳಾಲ ಗ್ರಾಮದ ಸುಧಾಕರ (35) ಎಂಬವರು ಆಟೋ ಹಾಗೂ ಗೂಡ್ಸ್ ರಿಕ್ಷಾ ಬಾಡಿಗೆ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ನವೆಂಬರ್ 25ರಂದು ಸಂಜೆ ಅವರ ಪತ್ನಿಯ ಮೊಬೈಲ್‌ಗೆ ಕರೆ ಮಾಡಿದ ಸಂಬಂಧಿ ಭಾಸ್ಕರ ಎಂಬಾತ, ಮಧುಕರನ ಆಟೋ ರಿಕ್ಷಾದ ಬಾಡಿಗೆಗೆ ಯಾಕೆ ಹೋಗಲಿಲ್ಲ ಎಂದು ಪ್ರಶ್ನಿಸಿ ಅವಾಚ್ಯವಾಗಿ ನಿಂದಿಸಿ, ಬೆಳ್ಳಾಲ ಆಟೋ ರಿಕ್ಷಾ ನಿಲ್ದಾಣಕ್ಕೆ ಬಂದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಅಲ್ಲದೆ, ಸುಧಾಕರ ಅವರ ಅಣ್ಣ ಗಣಪ ಅವರಿಗೂ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನವೆಂಬರ್ 26ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ ಸುಧಾಕರ ಅವರು ಬೆಳ್ಳಾಲ ಆಟೋ ರಿಕ್ಷಾ ನಿಲ್ದಾಣದ ಬಳಿ ಇದ್ದಾಗ ಅಲ್ಲಿಗೆ ಬಂದ ಭಾಸ್ಕರ, ರಿಕ್ಷಾ ಇಟ್ಟುಕೊಂಡಿರುವ ವಿಚಾರವಾಗಿ ನಿಂದಿಸಿ ದೊಣ್ಣೆಯಿಂದ ಕೈ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದಾನೆ. ಬಳಿಕ ನೆಲಕ್ಕೆ ಕೆಡವಿ ಕಾಲಿನಿಂದ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ತುಳಿದಿದ್ದಾನೆ ಎನ್ನಲಾಗಿದೆ. ಅಲ್ಲದೆ, ಆಟೋ ರಿಕ್ಷಾದ ಹಿಂಭಾಗಕ್ಕೂ ದೊಣ್ಣೆಯಿಂದ ಹಾನಿ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯಿಂದ ಗಾಯಗೊಂಡ ಸುಧಾಕರ ಅವರು ಚಿಕಿತ್ಸೆಗಾಗಿ ಕುಂದಾಪುರದ ನ್ಯೂ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 65/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 352, 351(2), 115(2), 118(1) ಮತ್ತು 324(4)ರ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!