IMG_20261125_001037.png
Spread the love

ಗಂಗೊಳ್ಳಿ: ದಿನಾಂಕ:25-11-2026(ಹಾಯ್ ಉಡುಪಿ ನ್ಯೂಸ್) ಕಡಿಮೆ ಬಡ್ಡಿದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಚಿನ್ನವನ್ನು ಪಡೆದು, ಬಳಿಕ ಅಡವಿಟ್ಟ ಚಿನ್ನವನ್ನು ವಾಪಸ್ ನೀಡದೆ ವಂಚಿಸಿರುವ ಆರೋಪದ ಮೇಲೆ ಐವರ ವಿರುದ್ಧ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2025ರಲ್ಲಿ ಕುಂದಾಪುರ ತಾಲೂಕು ಹೊಸಾಡು ಗ್ರಾಮದ ಮುಳ್ಳಿಕಟ್ಟೆಯ ಅಪೇಕ್ಷಾ ಕಾಂಪ್ಲೆಕ್ಸ್‌ನಲ್ಲಿ ಆರೋಪಿತರು PBC ಜ್ಯುವೆಲ್ಲರ್ಸ್ ಗೋಲ್ಡ್ ಲೋನ್ ಎಂಬ ಶಾಖೆಯನ್ನು ತೆರೆದಿದ್ದರು. ಅತೀ ಕಡಿಮೆ ಬಡ್ಡಿದರದಲ್ಲಿ ಚಿನ್ನದ ಅಡಮಾನ ಸಾಲ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ, ಪಿರ್ಯಾದಿದಾರರಾದ ತ್ರಾಸಿ ಗ್ರಾಮದ ವೆಂಕಟೇಶ ಪೈ (48) ಸೇರಿದಂತೆ ಹಲವು ಮಂದಿಯಿಂದ ಚಿನ್ನವನ್ನು ಅಡಮಾನವಾಗಿ ಪಡೆದು ಸಾಲ ನೀಡಿದ್ದರು ಎನ್ನಲಾಗಿದೆ.
ಈ ರೀತಿ ಇದುವರೆಗೆ ಪಿರ್ಯಾದಿದಾರರು ಹಾಗೂ ಇತರ ಸಾರ್ವಜನಿಕರಿಂದ ಒಟ್ಟು 750.98 ಗ್ರಾಂ ಚಿನ್ನವನ್ನು ಅಡಮಾನವಾಗಿ ಪಡೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಅಡವಿಟ್ಟ ಚಿನ್ನವನ್ನು ವಾಪಸ್ ನೀಡುವಂತೆ ಗ್ರಾಹಕರು ಕೇಳಿದಾಗಲೆಲ್ಲಾ ನಂತರ ನೀಡುವುದಾಗಿ ಹೇಳುತ್ತಾ ಆರೋಪಿತರು ಕಾಲಹರಣ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾರ್ವಜನಿಕರಿಂದ ಚಿನ್ನವನ್ನು ಪಡೆದು ಸಾಲ ನೀಡಿದ ಬಳಿಕ ಮೂಲ ಚಿನ್ನವನ್ನು ಮರಳಿಸದೆ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 56/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 316(5), 318(4) ಜೊತೆಗೆ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: No Copying!