ಬೆಂಗಳೂರು: ದಿನಾಂಕ:19-11-2026(ಹಾಯ್ ಉಡುಪಿ ನ್ಯೂಸ್) ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಆಡಳಿತಾತ್ಮಕ ಬದಲಾವಣೆ ಮಾಡಿರುವ ರಾಜ್ಯ ಸರಕಾರ, ಬರೋಬ್ಬರಿ 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಬೆಂಗಳೂರು ಪೊಲೀಸ್ ಕಮಿಷನರೇಟ್ನಿಂದ ಹಿಡಿದು ರಾಜ್ಯದ ವಿವಿಧ ಪೊಲೀಸ್ ವಿಭಾಗಗಳವರೆಗೆ ಮಹತ್ವದ ಬದಲಾವಣೆ ಮಾಡಲಾಗಿದೆ.
ಬೆಂಗಳೂರಿಗೆ ಹೊಸ ಪೊಲೀಸ್ ಆಯುಕ್ತರು
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ವರ್ಗಾಯಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಬಿ.ಕೆ. ಸಿಂಗ್ ಅವರಿಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರಿನ ಸಂಚಾರ, ಆಡಳಿತ, ಪೂರ್ವ, ಪಶ್ಚಿಮ ಮತ್ತು ಉತ್ತರ ವಿಭಾಗಗಳಲ್ಲಿಯೂ ಹಲವು ಅಧಿಕಾರಿಗಳ ವರ್ಗಾವಣೆ ನಡೆದಿದೆ.
ಮಂಗಳೂರಿಗೆ ಹೊಸ ಪಶ್ಚಿಮ ವಲಯ ಐಜಿಪಿ
ಮಂಗಳೂರು ಸೇರಿದಂತೆ ಕರಾವಳಿ ಭಾಗದ ಪೊಲೀಸ್ ಆಡಳಿತಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯಾಗಿದ್ದು, ಎನ್. ಶಶಿಕುಮಾರ್ ಅವರನ್ನು ಪಶ್ಚಿಮ ವಲಯದ ನೂತನ ಐಜಿಪಿಯಾಗಿ ನೇಮಕ ಮಾಡಲಾಗಿದೆ.
2007ನೇ ಬ್ಯಾಚ್ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ಶಶಿಕುಮಾರ್, ಈ ಹಿಂದೆ 2021ರ ಜನವರಿಯಿಂದ 2023ರ ಫೆಬ್ರವರಿವರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಕರಾವಳಿ ಭಾಗದ ಪೊಲೀಸ್ ಆಡಳಿತದ ಪ್ರಮುಖ ಜವಾಬ್ದಾರಿ ಅವರಿಗೆ ವಹಿಸಲಾಗಿದೆ.
ವಿವಿಧ ವಿಭಾಗಗಳಲ್ಲೂ ಬದಲಾವಣೆ
ಕಲಬುರಗಿ ನಗರ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಆರ್. ಜೈನ್, ದಕ್ಷಿಣ ವಲಯ ಮೈಸೂರು ಡಿಐಜಿಯಾಗಿ ಎಂ. ಪುಟ್ಟಮಾದಯ್ಯ ಹಾಗೂ ನೇಮಕಾತಿ ವಿಭಾಗದ ಡಿಐಜಿಯಾಗಿ ಡಾ. ಎಂ. ಅಶ್ವಿನಿ ಅವರನ್ನು ನಿಯೋಜಿಸಲಾಗಿದೆ.
ಇದಲ್ಲದೆ ರೈಲ್ವೆ ಪೊಲೀಸ್, ಸಂಚಾರ ವಿಭಾಗ, ಆಂತರಿಕ ಭದ್ರತೆ, ಲೋಕಾಯುಕ್ತ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಅಧಿಕಾರಿಗಳ ಜವಾಬ್ದಾರಿ ಬದಲಿಸಲಾಗಿದೆ.
ಒಟ್ಟಿನಲ್ಲಿ ರಾಜ್ಯದ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಪುನರ್ವ್ಯವಸ್ಥೆ ನಡೆದಿದ್ದು, ಹೊಸ ಅಧಿಕಾರಿಗಳ ನೇಮಕದೊಂದಿಗೆ ಪೊಲೀಸ್ ಇಲಾಖೆಯ ಮುಂದಿನ ಕಾರ್ಯವೈಖರಿ ಕುತೂಹಲ ಮೂಡಿಸಿದೆ.
