IMG_20261118_204207.png
Spread the love

ಕೋಟ: ದಿನಾಂಕ :18-11-2026(ಹಾಯ್ ಉಡುಪಿ ನ್ಯೂಸ್) ಕೆದೂರು ಗ್ರಾಮದ ಹೊಸಮಠ ಧರ್ಮಗೋಳಿ ಹಳೆಯಮ್ಮ ದೈವಸ್ಥಾನದ ಅಡುಗೆ ಕೋಣೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 99 ಸಾವಿರ ರೂ. ಮೌಲ್ಯದ ತಾಮ್ರದ ಪಾತ್ರೆಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ.

ದೈವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರರಾದ ಅವಿನಾಶ (36) ಅವರು ನ.7ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ದೈವಸ್ಥಾನದ ಕಾರ್ಯಕ್ರಮದ ನಿಮಿತ್ತ ಪಾತ್ರೆಗಳನ್ನು ತರಲು ಸಭಾಭವನದ ಸಮೀಪವಿರುವ ಅಡುಗೆ ಕೋಣೆಗೆ ತೆರಳಿದಾಗ ಬೀಗ ಒಡೆದಿರುವುದು ಕಂಡುಬಂದಿದೆ.
ಪರಿಶೀಲಿಸಿದಾಗ ಅಡುಗೆ ಕೋಣೆಯಲ್ಲಿದ್ದ ಆರು ದೊಡ್ಡ ತಾಮ್ರದ ಜೋಡು ಕೊಳಗಗಳು (ಹಂಡೆಗಳು) ಹಾಗೂ ಒಂದು ದೊಡ್ಡ ತಾಮ್ರದ ಬಾಣಲೆ ಕಳವಾಗಿರುವುದು ಬೆಳಕಿಗೆ ಬಂದಿದೆ.
ಅ.18ರ ಸಂಜೆ 7 ಗಂಟೆಯಿಂದ ನ.7ರ ಬೆಳಿಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳರು ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 99,000 ರೂ. ಎಂದು ತಿಳಿದುಬಂದಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 184/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 331(3), 331(4) ಮತ್ತು 305ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: No Copying!