IMG_20261116_192827.png
Spread the love

ಕೋಟ: ದಿನಾಂಕ:16-11-2027 (ಹಾಯ್ ಉಡುಪಿ ನ್ಯೂಸ್)ಸಾಸ್ತಾನ ಗೋಳಿಗರಡಿ ದೇವಸ್ಥಾನದ ಬಳಿ ನಿಲ್ಲಿಸಿದ್ದ ವ್ಯಕ್ತಿಯೊಬ್ಬರ ಮೋಟಾರ್ ಸೈಕಲ್ ಕಳವಾಗಿದ್ದು, ಕಳವಾದ ಬೈಕ್ ಕುಂದಾಪುರದ ತಲ್ಲೂರು ಸಮೀಪ ಅಪಘಾತಕ್ಕೀಡಾದ ಬಳಿಕ ಪತ್ತೆಯಾಗಿದೆ.
ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ನಾಗರಾಜ ಪೂಜಾರಿ (48) ಎಂಬವರು ಅ.27ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ತಮ್ಮ KA-20-HK-1943 ನೋಂದಣಿ ಸಂಖ್ಯೆಯ ಹೋಂಡಾ ಎಸ್‌ಪಿ 160 ಮೋಟಾರ್ ಸೈಕಲ್‌ನ್ನು ಸಾಸ್ತಾನ ಗೋಳಿಗರಡಿ ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿ, ಕೀಯನ್ನು ಟ್ಯಾಂಕ್ ಕವರ್‌ನಲ್ಲಿ ಇಟ್ಟು ಪೂಜೆಗೆ ತೆರಳಿದ್ದರು.

ಸುಮಾರು 2.30ಕ್ಕೆ ಪೂಜೆ ಮುಗಿಸಿ ಹೊರಬಂದು ನೋಡಿದಾಗ ಮೋಟಾರ್ ಸೈಕಲ್ ಕಾಣೆಯಾಗಿತ್ತು. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಇದೇ ದಿನ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಿಂದ ನಾಗರಾಜ ಪೂಜಾರಿ ಅವರಿಗೆ ಕರೆ ಬಂದಿದ್ದು, ಅವರ ಬೈಕ್‌ನ್ನು ಮಾರುತಿ ಎಂಬಾತ ಚಲಾಯಿಸಿಕೊಂಡು ಹೋಗಿ ಕುಂದಾಪುರದ ತಲ್ಲೂರು ಸಮೀಪ ಕಾರಿಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ. ಅಪಘಾತದಲ್ಲಿ ಗಾಯಗೊಂಡ ಮಾರುತಿಯನ್ನು ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2026ರಂತೆ ಪ್ರಕರಣ ದಾಖಲಾಗಿತ್ತು.
ಬೈಕ್ ಕಳವಾದ ದಿನವೇ ಅಪಘಾತದ ಬಳಿಕ ಪತ್ತೆಯಾಗಿದ್ದರಿಂದ ನಾಗರಾಜ ಪೂಜಾರಿ ಅವರು ಆರಂಭದಲ್ಲಿ ಕಳ್ಳತನದ ಬಗ್ಗೆ ದೂರು ನೀಡಿರಲಿಲ್ಲ. ಇದೀಗ ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2026, ಕಲಂ 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!