ಕುಂದಾಪುರ: ದಿನಾಂಕ:14-11-2026(ಹಾಯ್ ಉಡುಪಿ ನ್ಯೂಸ್)ವಿವಾಹದ ಬಳಿಕ ಗರ್ಭಿಣಿಯಾದ ಸಂದರ್ಭದಲ್ಲಿ ಪತಿ ಹಾಗೂ ಆತನ ಸಂಬಂಧಿಕರು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದಾಗಿ ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಸಂಬಂಧ ಒಟ್ಟು 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಅಮ್ಮಂಜೆ ಗ್ರಾಮದ ಶಬಾನಾ (25) ಎಂಬುವವರ ವಿವಾಹವು 21-06-2021 ರಂದು ಕುಂದಾಪುರ ತಾಲೂಕಿನ ಬೀಜಾಡಿಯ ಚೌತ್ರಬೆಟ್ಟುವಿನಲ್ಲಿ ಮಹಮ್ಮದ್ ಶರೀಫ್ ಅವರೊಂದಿಗೆ ನಡೆದಿತ್ತು. ವಿವಾಹದ ಬಳಿಕ ದಂಪತಿ ಜೀವನ ನಡೆಸುತ್ತಿದ್ದು, ಪತಿ ವಿದೇಶದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.
ಮದುವೆಯಾದ ಮೊದಲ ತಿಂಗಳು ಅನ್ಯೋನ್ಯವಾಗಿದ್ದ ಪತಿ, ಪತ್ನಿ ತಾನು ಗರ್ಭಿಣಿ ಎಂಬ ವಿಚಾರ ತಿಳಿಸಿದ ಬಳಿಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡಲು ಆರಂಭಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅದೇ ರೀತಿ ಪತಿಯ ಸಂಬಂಧಿಕರಾದ ಆಯಿಷಾ ಬಿ., ನೆಫೀಸಾ, ಮಹಮ್ಮದ್ ಮುನೀರ್, ದಿಲ್ಶಾದ್, ಮಹಮ್ಮದ್ ಸಿದ್ದೀಕ್, ಸುನೇಫ, ಆಮಿನಾ ಹಾಗೂ ಫಾರೂಕ್ ಅವರು ಕೂಡ ನಿಂದನೆ, ಮಾನಸಿಕ ಕಿರುಕುಳ ಮತ್ತು ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ವಿಚ್ಛೇದನ ನೀಡುವಂತೆ ಒತ್ತಾಯಿಸಿ ಹಿಂಸೆ ನೀಡಲಾಗಿದ್ದು, ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಗರ್ಭಪಾತಕ್ಕೆ ಪ್ರಯತ್ನಿಸಲಾಗಿದೆ ಹಾಗೂ ಮಗು ಜನಿಸಿದ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚವನ್ನೂ ಭರಿಸದೆ ಕಿರುಕುಳ ಮುಂದುವರಿಸಲಾಗಿದೆ ಎಂದು ಶಬಾನಾ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 101/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 85, 115(2), 352 ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
