ಕೋಟ: ದಿನಾಂಕ:07-11-2026(ಹಾಯ್ ಉಡುಪಿ ನ್ಯೂಸ್) ಸ್ನೇಹಿತನ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಆತನ ಹೆಸರಿನಲ್ಲಿ ಹಣದ ತುರ್ತು ಅಗತ್ಯವಿದೆ ಎಂದು ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರಿಂದ ₹52,000 ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ತೆಕ್ಕಟ್ಟೆಯ ಅನಂತ ಎಂಬವರು ದಯಾನಂದ (64) ಅವರ ಸ್ನೇಹಿತರಾಗಿದ್ದು, ಸೆಪ್ಟೆಂಬರ್ 22ರಂದು ಅನಂತ ಅವರ ವಾಟ್ಸಾಪ್ ಖಾತೆಯಿಂದ ದಯಾನಂದ ಅವರಿಗೆ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಸಂದೇಶ ಕಳುಹಿಸಲಾಗಿದೆ. ಜೊತೆಗೆ ಕ್ಯೂಆರ್ ಕೋಡ್ ಕಳುಹಿಸಿ ₹52,000 ಹಣ ವರ್ಗಾಯಿಸುವಂತೆ ಕೇಳಿಕೊಳ್ಳಲಾಗಿದೆ.
ಸ್ನೇಹಿತನೇ ಹಣ ಕೇಳಿದ್ದಾನೆಂದು ನಂಬಿದ ದಯಾನಂದ ಅವರು, ಸಂದೇಶದಲ್ಲಿದ್ದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ಬ್ಯಾಂಕ್ ಖಾತೆಯಿಂದ ₹52,000 ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಅನಂತರನ್ನು ವಿಚಾರಿಸಿದಾಗ ಅವರ ಮೊಬೈಲ್ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ದಯಾನಂದ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/2026, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
