ಕುಂದಾಪುರ: ದಿನಾಂಕ:30-10-2026(ಹಾಯ್ ಉಡುಪಿ ನ್ಯೂಸ್) ಕೋಟೇಶ್ವರ ಗ್ರಾಮದ ನಿವಾಸಿ ಯೋರ್ವರು ತನ್ನ ಅಂಗಡಿಯನ್ನು ಬಾಡಿಗೆಗೆ ನೀಡಿದ್ದು ಬಾಡಿಗೆದಾರನ ಬಳಿ ಬಾಕಿ ಬಾಡಿಗೆ ಕೇಳಲು ಹೋದಾಗ ಆತ ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಟೇಶ್ವರ ಗ್ರಾಮದ ಎನ್ ಆರ್ ಆಚಾರ್ಯ ಆಸ್ಪತ್ರೆಯ ಹತ್ತಿರ ನಿವಾಸಿ ಹೆಚ್ ರಂಜಿತ್ ಶೆಟ್ಟಿ (37) ಎಂಬವರ ತಂದೆಯ ಹೆಸರಿನಲ್ಲಿ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ಬೈಪಾಸ್ ಬಳಿ 5 ಅಂಗಡಿಕೋಣೆ ಇದ್ದು, ಅದರಲ್ಲಿ ಒಂದು ಕೋಣೆಯನ್ನು ಪ್ರಮೋದ್ ರಾವ್ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಆಪಾದಿತ ಪ್ರಮೋದ ರಾವ್ ನು ಕಳೆದ 11 ತಿಂಗಳಿಂದ ಬಾಡಿಗೆ ಹಣ ನೀಡಿರುವುದಿಲ್ಲ.
ದಿನಾಂಕ 29-10-2026 ರಂದು ಸಂಜೆ 05:00 ಗಂಟೆಗೆ ರಂಜಿತ್ ಶೆಟ್ಟಿ ರವರ ತಂದೆ ಬಾಡಿಗೆ ಹಣ ಪಡೆಯಲು ಆಪಾದಿತ ಪ್ರಮೋದ್ ರಾವ್ ನ ಅಂಗಡಿ ಬಳಿ ಹೋದಾಗ ಆಪಾದಿತನು ರಂಜಿತ್ ಶೆಟ್ಟಿ ರವರ ತಂದೆಯನ್ನು ತಡೆದು ನಿಲ್ಲಿಸಿ ಅವರನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಇನ್ನು ಮುಂದೆ ಬಾಡಿಗೆ ಹಣ ಕೇಳಲು ಬಂದರೆ ನಿನ್ನ ಕೈಕಾಲು ಮುರಿದು ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಕೈಯಿಂದ ಕೆನ್ನೆಗೆ ಹೊಡೆದು ಕಾಲಿನಿಂದ ಹೊಟ್ಟೆಗೆ ತುಳಿದು ಉಗುರುಗಳಿಂದ ಪರಚಿ ಕುತ್ತಿಗೆ ಒತ್ತಿ ಹಿಡಿದು ದೂಡಿ ಹಾಕಿರುತ್ತಾರೆ. ಇದರಿಂದ ರಂಜಿತ್ ಶೆಟ್ಟಿ ರವರ ತಂದೆಯ ಎರಡೂ ಮುಂಗೈಗೆ ಗಾಯವಾಗಿ ರಕ್ತ ಬಂದಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಂಜಿತ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ:93/2026 ಕಲಂ:126(2)115(2)351(2)352 BNS 2023 ರಂತೆ ಪ್ರಕರಣ ದಾಖಲಾಗಿದೆ.
