ಬೆಂಗಳೂರು: ದಿನಾಂಕ:29-10-2026(ಹಾಯ್ ಉಡುಪಿ ನ್ಯೂಸ್) ಕಾಂಗ್ರೆಸ್ ಸರ್ಕಾರದ ದಿಕ್ಕೆಟ್ಟ ಆಡಳಿತ, ಆರ್ಥಿಕ ದಿವಾಳಿತನ ಹಾಗೂ ಹಗಲು ದರೋಡೆ ನೀತಿಯಿಂದಾಗಿ ರಾಜ್ಯದ ಜನಸಾಮಾನ್ಯರ ಮೇಲೆ ಮತ್ತೊಮ್ಮೆ ಭಾರಿ ಬೆಲೆ ಏರಿಕೆಯ ಹೊರೆ ಹೊರೆಸಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಒಂದೆಡೆ ರೈತರ ಬೆವರಿಗೆ ಸರಿಯಾದ ಬೆಲೆ ನೀಡದೆ ವಂಚಿಸುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಹಾಲಿನ ದರವನ್ನು ಬರೋಬ್ಬರಿ 8 ರೂ.ನಷ್ಟು ಏರಿಕೆ ಮಾಡುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ಮತ್ತಷ್ಟು ನರಕ ಮಾಡುತ್ತಿದೆ.
ರೈತರಿಗೆ ಕೊಡುವ ಉದ್ದೇಶವಿದ್ದರೆ, ತಾವು ಕೊಡಬೇಕೆ ಹೊರತು ಜನಸಾಮಾನ್ಯರ ಜೇಬಿನಿಂದ ಕಿತ್ತುಕೊಂಡು ಕೊಡುವುದಲ್ಲ. ತಮ್ಮ ಗ್ಯಾರಂಟಿ ಯೋಜನೆಗಳ ವೈಫಲ್ಯ ಹಾಗೂ ಆಡಳಿತಾತ್ಮಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಈ ಕಾಂಗ್ರೆಸ್ ಸರ್ಕಾರ ಹಾಲಿನ ದರ ಹೆಚ್ಚಳದ ಮೂಲಕ ನೇರವಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ.
ರೈತರಿಗೆ ಕೊಡುವ ನೆಪದಲ್ಲಿ ಹಾಲಿನ ದರವನ್ನು ಗಗನಕ್ಕೇರಿಸಿ, ಜನಸಾಮಾನ್ಯರ ದಿನನಿತ್ಯದ ಬದುಕನ್ನೇ ದುಸ್ತರಗೊಳಿಸುತ್ತಿರುವ ಈ ಜನವಿರೋಧಿ ಸರ್ಕಾರದ ನಿರ್ಧಾರವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೂಡಲೇ ಈ ದರ ಏರಿಕೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸುತ್ತೇನೆ.
ಜನರ ಬದುಕಿನ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ, ಜನರ ಆಕ್ರೋಶವೇ ಉತ್ತರವಾಗಲಿದೆ ಎಂದು ಹೇಳಿದ್ದಾರೆ.
