ಮೈಸೂರು: ದಿನಾಂಕ:12-10-2026(ಹಾಯ್ ಉಡುಪಿ ನ್ಯೂಸ್)ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ನಾಲ್ಕು ಜ್ಯೋತಿಗಳ ಸಂಗಮ. ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ, ಸಮಾನತೆಯಿಂದ ಶಾಂತಿ ಸಾಧ್ಯ ಎಂದು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ದಸರಾ ಪರಿವರ್ತನೆಯಾಗಿದೆ. ಈಗ ನಡೆಯುತ್ತಿರುವುದು ಪ್ರಜಾ ದರ್ಬಾರಿನ ದಸರಾ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ. ದಸರಾ ಹಬ್ಬದ ಸಂಭ್ರಮ ಮೈಸೂರಿಗೆ ಮಾತ್ರ ಸೀಮಿತವಾಗದೆ ಇಡೀ ರಾಜ್ಯಕ್ಕೆ ಹರಡಿಕೊಂಡಿದೆ. ಮುಂದಿನ 11 ದಿನಗಳ ಕಾಲ ಮೈಸೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ. ಭಾರತೀಯ ಪರಂಪರೆಗೆ ಕನ್ನಡಿ ಹಿಡಿಯುವ ಈ ಮಹೋತ್ಸವ ನಾಡಿನ ಹೆಮ್ಮೆಯ ಸಂಕೇತವಾಗಿದೆ.
ವಿಜಯನಗರದಿಂದ ಮೈಸೂರು ಒಡೆಯರವರೆಗೆ ಸಾಂಸ್ಕೃತಿಕ ಪಯಣ: ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಅದರ ಸಾಂಸ್ಕೃತಿಕ ದೀಪ ಆರದಂತೆ ಕಾಪಾಡಿದರು. ಅರಸರು ದಸರಾವನ್ನು ಕೇವಲ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ವೇದಿಕೆಯನ್ನಾಗಿ ರೂಪಿಸಿದರು. ಮುಖ್ಯಮಂತ್ರಿಯಾಗಿ ನಾಡಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನನ್ನ ಬದುಕಿನ ಸ್ಮರಣೀಯ ದಿನ.
ಕಲೆ, ಸಂಸ್ಕೃತಿಯ ಜೀವಂತ ವೇದಿಕೆ: ಡೊಳ್ಳು, ತಮಟೆ, ನಗಾರಿ, ವೀರಗಾಸೆ, ಕೋಲಾಟ ಮತ್ತು ಯಕ್ಷಗಾನದಂತಹ ಕಲಾಪ್ರಕಾರಗಳು ಕರ್ನಾಟಕದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ಸಾವಿರಾರು ರಂಗಭೂಮಿ ಕಲಾವಿದರು, ಹಾಡುಗಾರರು ಮತ್ತು ಸಂಗೀತಗಾರರು ತಮ್ಮ ಪರಿಶ್ರಮದಿಂದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಂತಹ ಕಲಾವಿದರಿಗೆ ದಸರಾ ದೊಡ್ಡ ವೇದಿಕೆಯಾಗಿದ್ದು, ಅವರ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸುತ್ತದೆ.
ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟಿಸುವ ಮೂಲಕ ನಾಡಹಬ್ಬಕ್ಕೆ ಹೊಸ ಶಕ್ತಿ, ಹುರುಪು ಹಾಗೂ ಯುವ ಚೈತನ್ಯ ತುಂಬಿದ್ದಾರೆ. ಅವರಿಂದ ದಸರಾಕ್ಕೆ ಹೊಸ ಮೆರುಗು ಬಂದಿದೆ. ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ. ಕೊಪ್ಪಳದ ಗವಿಮಠ ಸರ್ವಜನಾಂಗದ ಶಾಂತಿಯ ಮಠ. ಅವರು ಕೇವಲ ಮಠದ ಸ್ವಾಮೀಜಿಯಲ್ಲ, ಜನರ ಸ್ವಾಮೀಜಿ.



ಸರ್ಕಾರದ ಜೊತೆಗೆ ಮಠಗಳೂ ಸಮಾಜದ ಶಕ್ತಿ: ಭಾರತದ ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಠಮಾನ್ಯಗಳು ಮಹತ್ವದ ಕೊಡುಗೆ ನೀಡಿವೆ. ಸಮಾಜದ ಜನರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ ಶಿಕ್ಷಣ, ಸಾಮಾಜಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಠಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ. ಸರ್ಕಾರದ ಜವಾಬ್ದಾರಿಯ ಭಾಗವಾಗಿರುವ ಅನೇಕ ಸಾಮಾಜಿಕ ಕಾರ್ಯಗಳನ್ನು ಮಠಗಳು ತಮ್ಮದೇ ರೀತಿಯಲ್ಲಿ ನಿರ್ವಹಿಸುತ್ತಿವೆ ಎಂಬುದನ್ನು ಮರೆಯುವಂತಿಲ್ಲ.
‘ಬ್ರ್ಯಾಂಡ್ ಮೈಸೂರು’ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ: ಬ್ರ್ಯಾಂಡ್ ಮೈಸೂರು ಪರಿಕಲ್ಪನೆಗೆ ಬುನಾದಿ ಹಾಕಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮಹತ್ವದ್ದಾಗಿದೆ. ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಚಿತ್ರಕಲೆ, ಮೈಸೂರು ಪಾಕ್ ಮತ್ತು ಕನ್ನಂಬಾಡಿ ಅಣೆಕಟ್ಟಿನಂತಹ ಸಾಧನೆಗಳು ಮೈಸೂರಿನ ಹೆಸರನ್ನು ರಾಜ್ಯದ ಗಡಿಗಳಾಚೆಗೂ ಪರಿಚಯಿಸಿವೆ.
ಗ್ಯಾರಂಟಿ ಯೋಜನೆಗಳ ಮೂಲಕ ಸಮಾನತೆಯ ಆಶಯ: ತಾಯಿ ಚಾಮುಂಡೇಶ್ವರಿಯ ಪಾದಕ್ಕೆ ಗೃಹಲಕ್ಷ್ಮಿ ಯೋಜನೆಯ ₹2,000 ಅರ್ಪಿಸಿದ ದಿನದಿಂದ ಇಂದಿಗೆ 1,139 ದಿನಗಳು ಪೂರ್ಣಗೊಂಡಿವೆ. ಅಂದಿನಿಂದ ಇಂದಿನವರೆಗೂ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದೆ ಮುಂದುವರಿಸಿಕೊಂಡು ಬರಲು ಸರ್ಕಾರ ಪ್ರಯತ್ನಿಸಿದೆ.
ನವದುರ್ಗೆಯರ ಆಶೀರ್ವಾದ ಸರ್ಕಾರದ ಮೇಲಿರಲಿ. ದುರ್ಗೆಯರ ಜೊತೆಗೆ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದವೂ ನಮ್ಮ ಮೇಲಿದೆ. ದೇವರ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಮೇಲಿರಲಿ. ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಪರಂಪರೆ, ಕಲೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಒಂದೆಡೆ ಸೇರಿಸುವ ಮಹೋತ್ಸವ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಮೂಲಕ ಕನ್ನಡಿಗರ ಸ್ವಾಭಿಮಾನ ಮತ್ತು ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಚಾಮುಂಡಿ ಬೆಟ್ಟದಲ್ಲಿ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಹೇಳಿದರು.
