ಕಾಪು: ದಿನಾಂಕ:25-09-2026(ಹಾಯ್ ಉಡುಪಿ ನ್ಯೂಸ್) ವಾಟ್ಸಪ್ ಗ್ರೂಪ್ ನಲ್ಲಿ ಸುದ್ದಿ ಯೊಂದನ್ನು ಫಾರ್ವರ್ಡ್ ಮಾಡಿರುವ ವಿಚಾರದಲ್ಲಿ ಯುವಕನೋರ್ವನಿಗೆ ಇಬ್ಬರು ವ್ಯಕ್ತಿಗಳು ಬೆದರಿಸಿದ ಕಾರಣ ಯುವಕ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಅವಸ್ಥೆ ಯಲ್ಲಿ ಇರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಪು ಉಳಿಯಾರಗೋಳಿ ಗ್ರಾಮದ ನಿವಾಸಿ ರಿಜ್ವಾನ್ ಹಾಜಿ ಮೊಹಮ್ಮದ್ (23) ಎಂಬವರು ಒಂದೂವರೆ ವರ್ಷದಿಂದ ಪೊಲಿಪುವಿನಲ್ಲಿರುವ ಅಬ್ದುಲ್ ರಜಾಕ್ ಎಂಬುವವರ ಬೈಕ್ ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುತ್ತಾರೆ.
ದಿನಾಂಕ 10/09/2026 ರಂದು ಮಲ್ಲಾರಿನ ನಿವಾಸಿಯಾದ ಅಬೂಬಕ್ಕರ್ ಹಾಜಿ ಎಂಬುವವರು ಕಾಪು ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಅಮೀರ್ ಹಂಝ, ಇಮ್ತಿಯಾಜ್ ಹಾಗೂ ನಜೀರ್ ಕಲ್ಲಾಪು ಎಂಬುವವರ ವಿರುದ್ಧ ಕಾಪು ಠಾಣೆಯಲ್ಲಿ ಕೇಸ್ ದಾಖಲಿಸಿರುವ ವಿಚಾರವು ಜಯಕಿರಣ ದಿನಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಅದರ ತುಣುಕನ್ನು ಗ್ಯಾರೇಜಿನಲ್ಲಿ ಕೆಲಸ ಮಾಡುವ ಇಮ್ತಿಯಾಜ್ ವಾಟ್ಸಪ್ ಮೂಲಕ ರಿಜ್ವಾನ್ ಹಾಜಿ ಮೊಹಮ್ಮದ್ ರವರಿಗೆ ಕಳುಹಿಸಿದ್ದು, ಅವರು ಆ ತುಣುಕನ್ನು ತನ್ನ ವಾಟ್ಸಪ್ ನಲ್ಲಿರುವ “Eid Meelad rally” ಎಂಬ ಸ್ನೇಹಿತರ ಗ್ರೂಪ್ ಗೆ ಕಳುಹಿಸಿರುತ್ತಾರೆ.
ದಿನಾಂಕ 21/09/2026 ರಂದು ರಿಜ್ವಾನ್ ಹಾಜಿ ಮೊಹಮ್ಮದ್ ಹೆಸರಿನಲ್ಲಿ ಅವರ ಮನೆಗೆ ರಿಜಿಸ್ಟರ್ ಪೋಸ್ಟ್ ಒಂದು ಬಂದಿದ್ದು, ಅದು ಮೊಹಮ್ಮದ್ ಇಕ್ಬಾಲ್ ಎಂಬ ವಕೀಲರು ಬರೆದ ಪತ್ರವಾಗಿದ್ದು, ಅದರಲ್ಲಿ ಅಮೀರ್ ಹಂಝ ರಜಬ್ ರವರ ವಿರುದ್ಧವಾಗಿ ವಾಟ್ಸಪ್ ನಲ್ಲಿ ಅವಮಾನ ಮಾಡುವ ಉದ್ದೇಶದಿಂದ ಪೋಸ್ಟ್ ಹಾಕಿ ಅವರ ಗೌರವಕ್ಕೆ ಧಕ್ಕೆಯುಂಟಾಗುವಂತೆ ಮಾಡಿದ್ದು, ಈ ಕಾರಣದಿಂದ ಅವರಿಗೆ ಕ್ಷಮೆಯಾಚಿಸಿ 25 ಲಕ್ಷ ರೂಪಾಯಿಗಳ ಮಾನನಸ್ಟ ನೀಡತಕ್ಕದ್ದು ಎಂಬ ವಿಷಯ ಇರುತ್ತದೆ.
ದಿನಾಂಕ 22/09/2026 ರಂದು ರಿಜ್ವಾನ್ ಹಾಜಿ ಮೊಹಮ್ಮದ್ ಗ್ಯಾರೇಜಿಗೆ ಬೇಕಾದ ಟೈಯರ್ ನ್ನು ತರಲು ಪೊಲಿಪುವಿನಲ್ಲಿರುವ ಉಮೇಶ್ ರವರ ಟೈಯರ್ ಅಂಗಡಿಗೆ ಹೋಗಲು ಬೈಕೊಂದರಲ್ಲಿ ಗ್ಯಾರೇಜ್ ನಿಂದ NH 66 ಉಡುಪಿ-ಮಂಗಳೂರು ರಸ್ತೆಯ ಮೂಲಕ ಹೊರಟು ಸರ್ವೀಸ್ ರಸ್ತೆಯ ಮುಕ್ತಾಯದ ಅಂಚಿನಲ್ಲಿ ಬೈಕನ್ನು ನಿಲ್ಲಿಸಿ ರಸ್ತೆಯ ಇನ್ನೊಂದು ಬದಿಯಲ್ಲಿದ್ದ ಟೈಯರ್ ಅಂಗಡಿಗೆ ಹೋಗಲು ಸರ್ವೀಸ್ ರಸ್ತೆಯನ್ನು ದಾಟುತ್ತಿರುವ ಸಮಯ ಸಂಜೆ 5:00 ಗಂಟೆಯ ಸುಮಾರಿಗೆ NH 66 ಉಡುಪಿ-ಮಂಗಳೂರು ರಸ್ತೆಯಲ್ಲಿ ಉಡುಪಿ ಕಡೆಯಿಂದ ಬಂದ ಇಮ್ತಿಯಾಜ್ ರವರ KIA ಕಾರು ರಿಜ್ವಾನ್ ಹಾಜಿ ಮೊಹಮ್ಮದ್ ರವರನ್ನು ಅಡ್ಡಗಟ್ಟಿದ್ದು, ಕಾರಿನಿಂದ ಇಳಿದು ಬಂದ ಇಮ್ತಿಯಾಜ್ ಹಾಗೂ ಅಮೀರ್ ಹಂಝ ರವರು ರಿಜ್ವಾನ್ ಹಾಜಿ ಮೊಹಮ್ಮದ್ ರನ್ನು ತಡೆದು ನಿಲ್ಲಿಸಿ “ನೀನು ವಾಟ್ಸಫ್ ಗ್ರೂಪ್ ನಲ್ಲಿ ನಮ್ಮ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತೀಯಾ, ನಿನ್ನನ್ನು ಜೀವಂತ ಬಿಡುವುದಿಲ್ಲ, ಈಗಾಗಲೇ ನ್ಯಾಯಾಲಯದಲ್ಲಿ ನಿನ್ನ ವಿರುದ್ಧ 25 ಲಕ್ಷ ರೂಗಳ ಮಾನನಷ್ಟ ಮೊಕದ್ದಮೆ ಹಾಕಿದ್ದು, ನಮ್ಮ ವಕೀಲರ ಮುಖಾಂತರ ನೋಟಿಸನ್ನು ಕೂಡಾ ಕಳುಹಿಸಿರುವುದಾಗಿ ತಿಳಿಸಿರುತ್ತಾರೆ.
ಆಗ ರಿಜ್ವಾನ್ ಹಾಜಿ ಮೊಹಮ್ಮದ್ ಅವರಲ್ಲಿ ಕ್ಷಮೆಯನ್ನು ಕೇಳಿದ್ದು, ಆದರೂ ಅವರು ನಿನಗೆ ಕ್ಷಮೆ ನೀಡಲು ಆಗುವುದಿಲ್ಲ. ನೀನು 25 ಲಕ್ಷ ಬದಲು ಇಲ್ಲಿಯೇ 5 ಲಕ್ಷ ರೂ ಕೊಟ್ಟರೆ ಈ ವಿಷಯವನ್ನು ಇಲ್ಲಿಯೇ ಬಿಡುತ್ತೇವೆ. ಇಲ್ಲದಿದ್ದರೆ ನಿನ್ನನ್ನು ಕೋರ್ಟಿಗೆ ಎಳೆದು 25 ಲಕ್ಷ ರೂಗಳನ್ನು ವಸೂಲಿ ಮಾಡುತ್ತೇವೆ. ನೀನು ಕೋರ್ಟಿನಲ್ಲಿಯೂ ತಪ್ಪಿಸಿಕೊಂಡರೆ ನಿನ್ನನ್ನು ಕಾಪುವಿನಲ್ಲಿ ಜೀವಂತವಾಗಿರಲು ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿರುತ್ತಾರೆ.
ಅಂದಿನಿಂದ ಈ ವಿಷಯವೂ ರಿಜ್ವಾನ್ ಹಾಜಿ ಮೊಹಮ್ಮದ್ ರ ತಲೆಯಲ್ಲಿ ಕೊರೆಯುತ್ತಿದ್ದು, ಅವರು ಕೇಳಿದ 5 ಲಕ್ಷ ರೂಪಾಯಿಯನ್ನು ಹೊಂದಿಸಲಾಗದೇ, ಅವರು ನೀಡಿದ ಕಿರುಕುಳವನ್ನು ತಾಳಲಾರದೇ ಮಾನಸಿಕವಾಗಿ ನೊಂದುಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡು ಸಾಯುವ ನಿರ್ಧಾರಕ್ಕೆ ಬಂದಿರುತ್ತಾರೆ.
ಅದಕ್ಕಾಗಿ ದಿನಾಂಕ 23/09/2026 ರಂದು ರಾತ್ರಿ 9:00 ಗಂಟೆಗೆ ಕಾಪು ಪೇಟೆಯ ಅಂಗಡಿಯೊಂದರಿಂದ ಫ್ಲೋರ್ ಕ್ಲೀನರ್ ನ್ನು ತೆಗೆದುಕೊಂಡು ಕಾಪುವಿನ ಕಾಂಚನ್ ಮೂಲಸ್ಥಾನದ ಬಳಿ ಹೋಗಿ ಅಲ್ಲಿ ಅದನ್ನು ಸೇವಿಸಿ ಬಳಿಕ ಅವರ ಮನೆಗೆ ಹೋಗಿದ್ದು, ನೋವು ತಾಳಲಾರದೆ ಈ ವಿಚಾರವನ್ನು ಅಮ್ಮನಲ್ಲಿ ತಿಳಿಸಿ, ಬಳಿಕ ಅವರ ಮಾಲಕರಾದ ಅಬ್ದುಲ್ ರಜಾಕ್ ರವರಿಗೂ ಕೂಡಾ ಪೋನ್ ಮಾಡಿ ತಿಳಿಸಿ ತನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದು, ಅದರಂತೆ ಅವರು ರಿಜ್ವಾನ್ ಹಾಜಿ ಮೊಹಮ್ಮದ್ ರ ಮನೆಗೆ ಬಂದು ಅವರ ಕಾರಿನಲ್ಲಿ ಕರೆದುಕೊಂಡು ಹೋಗಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಅಮೀರ್ ಹಂಝ ಹಾಗೂ ಇಸ್ಮಾಯಿಲ್ ರವರು 5 ಲಕ್ಷ ಹಣವನ್ನು ಕೊಡುವಂತೆ ರಿಜ್ವಾನ್ ಹಾಜಿ ಮೊಹಮ್ಮದ್ ರಿಗೆ ಬೆದರಿಸಿದ್ದು, ರಿಜ್ವಾನ್ ಹಾಜಿ ಮೊಹಮ್ಮದ್ ರು ಹಣವನ್ನು ಹೊಂದಿಸಲಾಗದೇ, ಅವರು ನೀಡಿದ ಕಿರುಕುಳವನ್ನು ತಾಳಲಾರದೇ, ಮಾನಸಿಕವಾಗಿ ನೊಂದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಿಜ್ವಾನ್ ಹಾಜಿ ಮೊಹಮ್ಮದ್ ಅವರು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2026 ಕಲಂ: 308(4), 126(2), 351(3), 3(5) BNS ರಂತೆ ಪ್ರಕರಣ ದಾಖಲಾಗಿದೆ.
