ಬೆಳಗಾವಿ : (ಹಾಯ್ ಉಡುಪಿ ನ್ಯೂಸ್) ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಷಯವನ್ನು ಪೋಸ್ಟ್ ಮಾಡುವ ಸಂದರ್ಭದಲ್ಲಿ ಅತ್ಯಂತ ಕಾಳಜಿ ಮತ್ತು ಎಚ್ಚರಿಕೆ ಅಗತ್ಯವಾಗಿದೆ ಎಂದು ವಕೀಲ ಮಂಜುನಾಥ್ ತೋರಗಲ್ ಹೇಳಿದರು .
ಅವರು ಹುಕ್ಕೇರಿ ತಾಲೂಕಿನ ಕರಗುಪ್ಪಿ ಯಲ್ಲಿರುವ ನಮ್ಮೂರ ಬಾನುಲಿ ಕೇಂದ್ರದ 7 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಮಾಜಿಕ ಜಾಲತಾಣ ಮತ್ತು ಹೊಣೆಗಾರಿಕೆಗಳು ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು .ಯಾವುದೇ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮುನ್ನ ಆ ವಿಷಯದ ಖಚಿತತೆ ಅಗತ್ಯ ,ಯಾವುದೇ ವಿಚಾರವನ್ನು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದೆ ಪ್ರಕಟಿಸುವಂತಿಲ್ಲ ,ಸಮಾಜಕ್ಕೆ ಹಾನಿ ಉಂಟು ಮಾಡುವ ,ಸಮಾಜಕ್ಕೆ ತಪ್ಪು ತಿಳುವಳಿಕೆ ನೀಡುವ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ರೇ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು .
ಇನ್ನೊಬ್ಬರ ಖಾಸಗಿ ವಿಷಯದ ಕುರಿತು ,ಮಾನಹಾನಿ ಆಗುವಂಥ ವಿಚಾರಗಳು ಯಾವುದೇ ಕಾರಣಕ್ಕೆ ಪ್ರಕಟಿಸುವಂತಿಲ್ಲ .ಕ್ಷಣಾರ್ಧದಲ್ಲಿ ಅತಿ ಹೆಚ್ಚು ಜನರನ್ನು ತಲುಪುವ ಸಾಮಾಜಿಕ ಜಾಲತಾಣದ ಕುರಿತು ಇರುವ ಕಾಯಿದೆ ಕಾನೂನು ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.ಇಂದಿನ ದಿನಮಾನಗಳಲ್ಲಿ ಸಾಮಾಜಿಕ ಜಾಲತಾಣ ಎಷ್ಟು ಅನುಕೂಲಕರ ಅದಕ್ಕಿಂತಲೂ ಹೆಚ್ಚಿನ ಅನಾನುಕೂಲತೆಗಳು ಮತ್ತು ತೊಂದರೆಗಳು ಕೂಡ ಸಾಮಾಜಿಕ ಜಾಲತಾಣದಿಂದ ಆಗುತ್ತಿವೆ ಅಸಂಖ್ಯಾತ ತಪ್ಪುಗಳು ನಡೆಯುತ್ತವೆ
ಇಂತಹ ತಪ್ಪುಗಳು ಹೆಚ್ಚಾನುಹೆಚ್ಚು ಅಪ್ರಾಪ್ತ ವಯಸ್ಕರಿಂದ ನಡೆಯುತ್ತಿವೆ ,ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಅನಾಹುತಗಳು ನಡೆಯುತ್ತಿವೆ ,ಸಾರ್ವಜನಿಕರ ಖಾಸಗಿ ಜೀವನವನ್ನು ಕೂಡ ಸಾಮಾಜಿಕ ಜಾಲತಾಣಗಳು ಹಾಳು ಮಾಡುತ್ತಿವೆ ,ಇತ್ತೀಚಿನ ದಿನಗಳಲ್ಲಿ ಬಹಳಷ್ಟು ವಿಚ್ಛೇದನದ ಪ್ರಕರಣಗಳಿಗೆ ಕೂಡ ಸಾಮಾಜಿಕ ಜಾಲತಾಣ ಕಾರಣವಾಗಿದೆ,ಇವನ್ನೆಲ್ಲ ಎಷ್ಟು ಸಾಧ್ಯವೋ ಅಷ್ಟು ತಡೆಯುವುದಕ್ಕೆ ಎಲ್ಲರೂ ಸೇರಿ ಪ್ರಯತ್ನ ಮಾಡಬೇಕು ,ಪಾಲಕರು ಮಕ್ಕಳನ್ನು ನಿಯಂತ್ರಿಸಬೇಕು ಮಾಧ್ಯಮಗಳ ಗಳು ಕೂಡ ಸಾಮಾಜಿಕ ಜಾಲತಾಣದ ಎಚ್ಚರಿಕೆಯ ಬಳಕೆಯನ್ನು ಜನಸಾಮಾನ್ಯರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು ಎಂದ ಅವರು ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ ಹಾಗಾದಾಗ ತಕ್ಷಣ ಸೈಬರ್ ಅಪರಾಧಿಗಳು ಗಾಗಿಯೇ ಇರುವ ಪೋಲಿಸ್ ಠಾಣೆಗೆ ತಕ್ಷಣ ಹೋಗಿ ದೂರು ಸಲ್ಲಿಸಬೇಕು ಎಂದರು .
ಸ್ವಂತ ಲಾಭಕ್ಕಾಗಿ , ಟಿಆರ್ ಪಿ ಹೆಚ್ಚಳಕ್ಕಾಗಿ ಮತ್ತು ಕೇವಲ ಪ್ರಚಾರಕ್ಕಾಗಿ ಕೂಡ ತಪ್ಪುಗಳು ನಡೆಯುತ್ತಿವೆ ಇದರಿಂದ ಏನೂ ಆಗುವುದಿಲ್ಲ ಎಂದು ತಿಳುವಳಿಕೆ ತಪ್ಪು ಎಲ್ಲೋ 1ಕಡೆ ಇದನ್ನೆಲ್ಲ ಗಮನಿಸುವ ಮತ್ತು ಗಂಭೀರ ತಪ್ಪುಗಳಾದಾಗ ಅಪರಾಧಿಗಳನ್ನು ಹುಡುಕಿ ಶಿಕ್ಷಿಸುವ ವ್ಯವಸ್ಥೆಯೂ ಇದೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು .
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಳಿಗೆ ವಿರುದ್ಧವಾದ ಪ್ರಕರಣಗಳು ನಡೆದಾಗ ಸರ್ಕಾರಗಳು ಮತ್ತು ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಕ್ರಮ ನಡೆಯುತ್ತಿವೆ ಹಿಜಾಬ್ ಪ್ರಕರಣಕ್ಕೆ 1ಸ್ವಯಂ ಪ್ರೇರಿತ ಪ್ರಕರಣ ದಾಖಲಾಯಿತು ಅದರೊಂದಿಗೆ ಇತರ ಇಪ್ಪತ್ತ್ 4ಪ್ರಕರಣಗಳು ದಾಖಲಾದುದನ್ನು ಅವರು ಉದಾಹರಿಸಿದರು .ಫೇಸ್ ಬುಕ್ ಜಾಲತಾಣವನ್ನು ಕಂಟ್ರೋಲ್ ಮಾಡುವ ಸಣ್ಣ ಪ್ರಯತ್ನ ಕೇವಲ 2ತಿಂಗಳಲ್ಲಿ 3ಜನ ಸಿಇಒಗಳು ರಾಜೀನಾಮೆ ನೀಡುವಂತಾಯಿತು .ಅನಗತ್ಯ ಮತ್ತು ಆಕ್ಷೇಪಾರ್ಹ ಸುದ್ದಿಗಳು ಪ್ರಕಟವಾದಾಗ ಅಥವಾ ಬಿತ್ತರವಾದಾಗ ಲೆಕ್ಕವಿಲ್ಲದಷ್ಟು ಅಕೌಂಟ್ ಗಳನ್ನು ಬ್ಲಾಕ್ ಮಾಡಿದ ಉದಾಹರಣೆಗಳನು ಅವರು ನೀಡಿದರು .
ಸೈಬರ್ ಕ್ರೈಮ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ನಿಯಮಗಳನ್ನು ರೂಪಿಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆ ಆದರೆ ಕಾರ್ಯವೂ ಆರಂಭವಾಗಿದೆ ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವವರು ಈ ಸಂಬಂಧ ಎಲ್ಲ ರೀತಿಯ ಕಾಯ್ದೆ ಕಾನೂನುಗಳನ್ನು ನಿಯಮಗಳನ್ನು ಅರಿತುಕೊಳ್ಳುವ ಅಗತ್ಯವಿದೆ ನೆಲದ ಕಾನೂನುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ ಇಲ್ಲವಾದಲ್ಲಿ ತಪ್ಪುಗಳಾದ ಸಂದರ್ಭದಲ್ಲಿ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದವರು ಹೇಳಿದರು .
ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಶಿವಪೂಜಿ ಮಾತನಾಡಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಅಗಾಧವಾದ ಬದಲಾವಣೆಗಳ ಕುರಿತು ಮಾತನಾಡಿ ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ ಎಂದರು .ಸಂಘವು ಪತ್ರಕರ್ತರಿಗಾಗಿ ರೂಪಿಸಿರುವ ಗ್ರೂಪ್ ಇನ್ಶೂರೆನ್ಸ್ ಯೋಜನೆಯ ಮೊತ್ತವನ್ನು ಈಗಿರುವ ಮೊತ್ತಕ್ಕಿಂತ 2ಪಟ್ಟು ಹೆಚ್ಚಿಸುವ ಕುರಿತು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು .
ಶಿಬಿರದಲ್ಲಿ ಭಾಗವಹಿಸಿದ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ವಕೀಲ ಮಂಜುನಾಥ ತೊರಗಲ್ ಮತ್ತು ಅಧ್ಯಕ್ಷ ಮುರಗೇಶ ಶಿವಪೂಜಿ ಅವರೊಂದಿಗೆ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮುಚ್ಚಳಂಬಿ ಅವರು ಉತ್ತರಿಸಿದರು .
ಮಹಿಳಾ ಕಲ್ಯಾಣ ಸಂಸ್ಥೆಯ ನಿರ್ದೇಶಕ ಎಂ ಎಸ್ ಚೌಗಲಾ , ಗೌರವ ಕಾರ್ಯದರ್ಶಿ ಶ್ರೀಮತಿ ವೈಜಯಂತಿ ಚೌಗಲಾ ,ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕ ಅಕ್ಷಯ್ ಕುಲಕರ್ಣಿ ,ಪತ್ರಕರ್ತರು ,ಟ್ರಸ್ಟಿ ವಸಂತ ಹೊಸಮನಿ ಮುಂತಾದವರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು .ಈ ವಿಚಾರ ಸಂಕಿರಣದಲ್ಲಿ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಪತ್ರಕರ್ತರು ಭಾಗವಹಿಸಿದ್ದರು .