IMG_20260913_104537.jpg
Spread the love

ಕಾರ್ಕಳ:ದಿನಾಂಕ:13-09-2026(ಹಾಯ್ ಉಡುಪಿ ನ್ಯೂಸ್) ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನೀಲ್ ಕುಮಾರ್ ಅವರ ತಲೆ ಕತ್ತರಿಸಿರುವ ರೀತಿಯ ಚಿತ್ರವನ್ನು ಬಳಸಿ, ಪ್ರಚೋದನಕಾರಿ ಹಾಗೂ ಅವಾಚ್ಯ ಶಬ್ದಗಳನ್ನು ಒಳಗೊಂಡ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇರೆಗೆ ಪ್ರಸಾದ್ ಶೆಟ್ಟಿ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಕಳ ತಾಲೂಕಿನ ವಿಘೇಶ್ ಪ್ರಸಾದ್ ರಾವ್ ಅವರು ಸೆ.12ರಂದು ರಾತ್ರಿ 10 ಗಂಟೆ ಸುಮಾರಿಗೆ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ‘Prasad Shetty’ ಎಂಬ ಫೇಸ್‌ಬುಕ್ ಖಾತೆಯಲ್ಲಿ ಶಾಸಕ ಸುನೀಲ್ ಕುಮಾರ್ ಅವರ ಚಿತ್ರವನ್ನು ತಲೆ ಕತ್ತರಿಸಿರುವ ರೀತಿಯಲ್ಲಿ ಎಡಿಟ್ ಮಾಡಿ ವಿಡಿಯೋ ರೂಪದಲ್ಲಿ ಪೋಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಡಿಯೋದಲ್ಲಿ ಶಾಸಕರ ಚಿತ್ರವನ್ನು ಬಳಸಿಕೊಂಡು ಅವಾಚ್ಯ ಶಬ್ದಗಳನ್ನು ಒಳಗೊಂಡ ಧ್ವನಿ ಹಾಗೂ ‘ಹೊಡಿ ಮಗ ಹೊಡಿ ಮಗ’ ಎಂಬ ಸಿನಿಮಾದ ಹಾಡನ್ನು ಹಿನ್ನೆಲೆ ಧ್ವನಿಯಾಗಿ ಅಳವಡಿಸಲಾಗಿತ್ತು ಎನ್ನಲಾಗಿದೆ. ಜನರಿಂದ ಆಯ್ಕೆಯಾದ ಶಾಸಕರನ್ನು ಕೊಲೆ ಮಾಡಬೇಕು ಹಾಗೂ ಹಲ್ಲೆ ನಡೆಸಬೇಕು ಎಂಬ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದಿಂದ ವಿಡಿಯೋವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇಂತಹ ಪ್ರಚೋದನಕಾರಿ ಪೋಸ್ಟ್‌ನಿಂದ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಘೇಶ್ ಪ್ರಸಾದ್ ರಾವ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 192, 351(3), 353(1)(c) ಸೇರಿದಂತೆ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿತ ಪ್ರಸಾದ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

error: No Copying!