ಉಡುಪಿ: ದಿನಾಂಕ:11-09-2026(ಹಾಯ್ ಉಡುಪಿ ನ್ಯೂಸ್) ಶ್ರೀ ಕ್ರಷ್ಣ ಮಠದ ಪರ್ಯಾಯ ಶ್ರೀ ಶೀರೂರು ಮಠದ ಹಿಂದಿನ ವೈಕುಂಠಸ್ಥರಾಗಿರುವ ಪರಮ ಪೂಜ್ಯ ಸ್ವಾಮೀಜಿ ಗಳಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು ಕಳೆದ ತಮ್ಮ ಪರ್ಯಾಯ ಅವಧಿಯಲ್ಲಿ ಶ್ರೀ ಕ್ರಷ್ಣ ಮಠದ ಗೋಶಾಲೆಯ ಮುಂಭಾಗದ ನವಗ್ರಹ ವಿಗ್ರಹಗಳ ಬದಿಯಲ್ಲಿ ಪಂಚಮುಖಿ ಮುಖ್ಯಪ್ರಾಣ ದೇವರ ಶಿಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಈ ವಿಗ್ರಹಕ್ಕೆ ಭಕ್ತರು ಪ್ರದಕ್ಷಿಣೆ ಬಂದು ವಿಗ್ರಹದ ಪಾದ ಮುಟ್ಟಿ ನಮಸ್ಕರಿಸಲು ಮುಕ್ತ ಅವಕಾಶವನ್ನು ಕಲ್ಪಿಸಿದ್ದರು.

ನಿನ್ನೆ ರಾತ್ರೋರಾತ್ರಿ ಈ ವಿಗ್ರಹವನ್ನು ತೆರವುಗೊಳಿಸಲಾಗಿದ್ದು ಭಕ್ತರು ಇಂದು ಮುಂಜಾನೆ ಪಂಚಮುಖಿ ಮುಖ್ಯಪ್ರಾಣ ವಿಗ್ರಹ ತೆರವು ಆಗಿರುವ ಬಗ್ಗೆ ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ. ಈಗನ ಪರ್ಯಾಯ ಯತಿಗಳು ಶ್ರೀ ಕ್ರಷ್ಣ ಮಠದಲ್ಲಿ ಮಾಡುತ್ತಿರುವ ಬದಲಾವಣೆಗಳ ಬಗ್ಗೆ ಸಾರ್ವಜನಿಕರಲ್ಲಿ ಹಲವಾರು ಅಸಮಾಧಾನಗಳಿದ್ದು ಅದಕ್ಕೆ ಪಂಚಮುಖಿ ಮುಖ್ಯಪ್ರಾಣ ವಿಗ್ರಹ ತೆರವು ಸೇರ್ಪಡೆ ಯಾಗಿದೆ.
ಮಹಿಳೆಯರು ಮುಖ್ಯಪ್ರಾಣನ ವಿಗ್ರಹವನ್ನು ಸ್ಪರ್ಶಿಸಿ ನಮಸ್ಕರಿಸುವುದು ಸರಿಯಲ್ಲ ಮುಖ್ಯಪ್ರಾಣ ಬ್ರಹ್ಮಾಚಾರಿ ಎಂಬ ಮೊಂಡು ವಾದ ಮುಂದಿಟ್ಟು ವಿಗ್ರಹವನ್ನು ತೆರವು ಗೊಳಿಸಲಾಗಿದೆ ಎಂದು ದೇವಸ್ಥಾನದ ಮೂಲಗಳಿಂದ ತಿಳಿದು ಬಂದಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
