ದಿನಾಂಕ:05-09-2026 (ಹಾಯ್ ಉಡುಪಿ ನ್ಯೂಸ್)
ದಿ | ಮಹಾದಾನಿ ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ, ಕಾಡಬೆಟ್ಟು, ಉಡುಪಿ.
ವರದಿ: ಶ್ರೀರಾಮ ದಿವಾಣ ಮೂಡುಬೆಳ್ಳೆ
ಉಡುಪಿ: ಸರಕಾರಕ್ಕೆ ಸೇರಬೇಕಾಗಿದ್ದ ಬಹುಕೋಟಿ ಬೆಲೆಬಾಳುವ ಭೂಮಿಯನ್ನು ಸುಳ್ಳು ಮಾಹಿತಿ ನೀಡಿ ಉಡುಪಿ ತಾಲೂಕು ಕಂದಾಯ ಇಲಾಖೆಯಿಂದ ಪಡೆದುಕೊಂಡ ದಾಖಲೆಗಳನ್ನು ಮುಂದಿಟ್ಟುಕೊಂಡು ಅಕ್ರಮವಾಗಿ ಕಬಳಿಕೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಕೋರ್ಟ್ ಆದೇಶದ ವಿರುದ್ಧ ಖಾಸಗೀ ವ್ಯಕ್ತಿಯೊಬ್ಬರು ಸಲ್ಲಿಸಿದ ರಿಟ್ ಪಿಟೀಷನ್ (ನಂ. 21692 OF 2019)ನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್ ಅವರ ಬೆಂಚ್ 2026 ಆಗಸ್ಟ್ 31ರಂದು ವಜಾಗೊಳಿಸಿ ಆದೇಶಿಸಿದೆ. ಪ್ರತಿವಾದಿಗಳ ಪರವಾಗಿ ನ್ಯಾಯವಾದಿಗಳಾದ ಕೆ. ಪ್ರಸನ್ನ ಶೆಟ್ಟಿ ಹೆಬ್ರಿ ಹಾಗೂ ಸ್ಪೂರ್ತಿ ಹೆಗ್ಡೆ ಎನ್. ಅವರು ವಾದಿಸಿದ್ದರು.

ಇ.ಎಸ್. ಇಂದಿರೇಶ್, ನ್ಯಾಯಮೂರ್ತಿಗಳು

ಕೆ. ಪ್ರಸನ್ನ ಶೆಟ್ಟಿ ಹೆಬ್ರಿ, ನ್ಯಾಯವಾದಿಗಳು
ಅಕ್ರಮ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳ ನ್ಯಾಯಾಲಯ (ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಐ.ಎ.ಎಸ್., ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು)ವು ಪ್ರತಿವಾದಿ, ಉಡುಪಿಯ ಶ್ರೀರಾಮ ದಿವಾಣ ಅವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಮಂಡಿಸಿದ ವಾದವನ್ನು ಮನ್ನಿಸಿ 2019ರ ಜನವರಿ 28ರಂದು ಅವರ ಪರವಾಗಿ ಆದೇಶ ನೀಡಿತ್ತು. ಈ ಆದೇಶದ ವಿರುದ್ದ ರಿವಿಷನ್ ಅರ್ಜಿದಾರರಾದ ಉಡುಪಿಯ ದಿವಂಗತ ಅಚ್ಯುತನ್ ರವರ ಪುತ್ರ ಅರವಿಂದ ಎಂಬವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸಿ ಡಿಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.
ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಐ. ಎ. ಎಸ್.
ಉಡುಪಿ ಜಿಲ್ಲೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಾಡಬೆಟ್ಟು ನಿವಾಸಿಯಾಗಿದ್ದ ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಎಂಬವರು ತಮ್ಮ ಸ್ವಾರ್ಜಿತ 2.29 ಎಕರೆ ಆಸ್ತಿಯನ್ನು 1944ರ ಎಪ್ರಿಲ್ ಒಂದರಂದು ಸರಕಾರದ ಹೆಸರಿಗೆ ವೀಲುನಾಮೆ ಬರೆದು ನೋಂದಾಯಿಸಿದ್ದರು.
ಕಲ್ಯಾಣಿ (ಬಿನ್ ಮೈಲ್ ರಾಮ) ಎಂಬವರ ಮಗಳಾಗಿದ್ದ ನಾರಾಯಣಿ ಅವರು ಅವಿವಾಹಿತರಾಗಿದ್ದರು. ಮಹಾದಾನಿಯೂ, ಮಹಾ ಮಾನವತಾವಾದಿಯೂ, ಸ್ವಾಭಿಮಾನಿಯೂ ಆಗಿದ್ದ ನಾರಾಯಣಿ ಬಾಯಿ ಅವರು, ಆ ಕಾಲದಲ್ಲಿ ಉಡುಪಿಯಲ್ಲಿದ್ದ ಉಡುಪಿ ಲೋಕಲ್ ಫಂಡ್ ಆಸ್ಪ ತ್ರೆಯ ಮೂಲಕ ನಿರ್ಗತಿಕ ಮಹಿಳೆಯರಿಗಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕೆಂಬ ಸದಾಶಯದಲ್ಲಿ ತಮ್ಮ ಸ್ವಾರ್ಜಿತ ಆಸ್ತಿಯನ್ನು ಸರಕಾರಕ್ಕೆ ದಾನವಾಗಿ ನೀಡಿದ್ದರು. ಇವರು 1965ರ ಜುಲೈ 14ರಂದು ನಿಧನರಾಗಿದ್ದರು.
ಅಚ್ಯುತನ್ ಪ್ರವೇಶ !
ನಾರಾಯಣಿ ಅವರು ನಿಧನರಾದ ಮೂರು ವರ್ಷಗಳ ನಂತರ 1968ರಲ್ಲಿ, ತಾನು ನಾರಾಯಣಿ ಅವರ ಗಂಡ ಎಂದು ಹೇಳಿಕೊಂಡು, ಎರಡನೇ ಪತ್ನಿ ಹಾಗೂ ಮಕ್ಕಳೊಂದಿಗೆ ಬಂದ ಎ. ಅಚ್ಯುತನ್ ಎಂಬವರು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ (ಸಂಖ್ಯೆ: 31/68)ಯೊಂದನ್ನು ಹೂಡಿ, ನಾರಾಯಣಿ ಅಮ್ಮಾಳ್ ರವರು ಬರೆದ ನೋಂದಾಯಿತ ವೀಲುನಾಮೆಯನ್ನು ಅನೂರ್ಜಿತಗೊಳಿಸಬೇಕೆಂದು ಕೋರಿಕೊಂಡರು.
ಸರಕಾರಕ್ಕೆ ದಾನ ಮಾಡಿದ ಆಸ್ತಿ ನಾರಾಯಣಿಯವರ ಸ್ವಾರ್ಜಿತ ಎನ್ನುವುದನ್ನು ಮತ್ತು ನಾರಾಯಣಿಯವರಿಗೆ ಮಕ್ಕಳಿಲ್ಲ ಎನ್ನುವುದನ್ನು ಮಾನ್ಯ ಮಾಡಿದ ನ್ಯಾಯಾಲಯವು, ಅಚ್ಯುತನ್ ಅವರ ದಾವೆಯನ್ನು ವಜಾಗೊಳಿಸಿತ್ತಲ್ಲದೆ, ನಾರಾಯಣಿಯವರು ದಾನಮಾಡಿದ ಆಸ್ತಿಯನ್ನು ಅಂದಿನ ಮೈಸೂರು ಸರಕಾರದ ಆರೋಗ್ಯ ಇಲಾಖೆಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಲು ಆದೇಶಿಸಿ ತೀರ್ಪು ನೀಡಿತ್ತು. ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಅಂದು ಸರಕಾರದ ಪರವಾಗಿ ಉಡುಪಿ ನಗರದ ಹಿರಿಯ ನ್ಯಾಯವಾದಿಗಳಾಗಿದ್ದ ವೈ. ಸಿ. ಎಸ್. ಹೆಗ್ಡೆ ಅವರು ವಾದಿಸಿದ್ದರು.
ಉಡುಪಿ ಸಿವಿಲ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಚ್ಯುತನ್ ಅವರು ದ. ಕ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಲ್ಲಿ ಮೇಲ್ಮನವಿ (ರೆಗ್ಯುಲರ್ ಅಪೀಲ್: 05/1973, 07/1973) ಸಲ್ಲಿಸಿದರು. ಈ ಮೇಲ್ಮನವಿಯನ್ನು ಕೂಡ ದ. ಕ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು 1976ರ ಫೆಬ್ರವರಿ 10ರಂದು ವಜಾಗೊಳಿಸಿತ್ತು.
1976ರಲ್ಲಿ ದ. ಕ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಅಚ್ಯುತನ್ ಅವರ ಮೇಲ್ಮನವಿಯನ್ನು ವಜಾಗೊಳಿಸಿದ ನಂತರ ಸರಕಾರ ನಾರಾಯಣಿ ಅಮ್ಮಾಳ್ ರವರು ದಾನ ಮಾಡಿದ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬೇಕಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳು ಈ ವಿಷಯದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದೆ ನಿರ್ಲಕ್ಷಿಸಿದ ಕಾರಣ ಸಂಬಂಧಪಟ್ಟ ಭೂಮಿ ಅನಾಥವಾಯಿತು, ಅನಧಿಕೃತ ವ್ಯಕ್ತಿಗಳ ವಶದಲ್ಲಿರಲು ಕಾರಣವಾಯಿತು ಮತ್ತು ನಿಧಾನವಾಗಿ ಅಚ್ಯುತನ್ ಕುಟುಂಬದವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮರೆತುಬಿಡುವಂತಾಯಿತು.
ಮ್ಯುಟೇಶನ್, ಪಹಣಿ ಬದಲಾವಣೆ ಬೆನ್ನಿಗೆ ವಿಷಯ ಬಹಿರಂಗ
ಸುಧೀರ್ಘ 40 ವರ್ಷಗಳ ನಂತರ ಅಚ್ಯುತನ್ ಅವರ ಕುಟುಂಬದ ಅರವಿಂದ್ ಹಾಗೂ ಇತರರು ಸುಳ್ಳು / ತಪ್ಪು ಮಾಹಿತಿಗಳನ್ನು ನೀಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಡುಪಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ, ನಾರಾಯಣಿ ಅಮ್ಮಾಳ್ ರವರು ಸರಕಾರಕ್ಕೆ ದಾನ ಮಾಡಿದ ಉಡುಪಿ ನಗರಸಭಾ ವ್ಯಾಪ್ತಿಯ ಉಡುಪಿ ನಗರದ ಕಾಡಬೆಟ್ಟುವಿನಲ್ಲಿರುವ ಬಹುಕೋಟಿ ಬೆಲೆಬಾಳುವ ಭೂಮಿಯನ್ನು ರಹಸ್ಯವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಾಗ ಪತ್ರಕರ್ತರೂ, ಜನಪರ ಹೋರಾಟಗಾರರೂ ಆದ ಶ್ರೀರಾಮ ದಿವಾಣ ಅವರ ಗಮನಕ್ಕೆ ಬಂತು. ಶ್ರೀರಾಮ ದಿವಾಣರು ಮಾಹಿತಿ ಹಕ್ಕು ಕಾಯಿದೆಯ ಮುಖಾಂತರ ಕಾಡಬೆಟ್ಟು ಭೂಮಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನೂ ಪಡೆದುಕೊಂಡು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸುವುದರೊಂದಿಗೆ ಈ ಭೂಕಬಳಿಕೆಯ ವಿರುದ್ಧದ ಹೋರಾಟ ಆರಂಭಗೊಂಡಿತು.
ಆರಂಭದಲ್ಲಿ ಪ್ರಕರಣದ ಪರಿಶೀಲನೆ, ತನಿಖೆ ನಡೆಸಿದ ಉಡುಪಿ ತಾಲೂಕು ಕಂದಾಯ ಅಧಿಕಾರಿಗಳು ಮ್ಯುಟೇಶನ್ ಮತ್ತು ಪಹಣಿ ಬದಲಾವಣೆ ಮಾಡಿದ್ದನ್ನು ಸಮರ್ಥಿಸಿಕೊಂಡರಾದರೂ, ನಂತರ ಕುಂದಾಪುರ ಉಪವಿಭಾಗ ಮಟ್ಟದ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಸತ್ಯ ಬಯಲಾಯಿತು.
ಈ ಎಲ್ಲಾ ಬೆಳವಣಿಗೆಗಳ ಬೆನ್ನಿಗೆ ಪ್ರಕರಣ ಎಸಿ ಕೋರ್ಟ್ (ಕುಂದಾಪುರ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ರವರ ನ್ಯಾಯಾಲಯ / ಶಿಲ್ಪಾ ನಾಗ್ ಐ.ಎ.ಎಸ್.) ನಲ್ಲಿ ವಿಚಾರಣೆಗೆ ಬಂತು. ಮೇಲ್ಮನವಿದಾರರಾದ ಶ್ರೀರಾಮ ದಿವಾಣ ಅವರು ಎಸಿ ಕೋರ್ಟ್ ವಿಚಾರಣಾ ಪ್ರಕ್ರಿಯೆಯಲ್ಲಿ ಸಮಗ್ರ ದಾಖಲೆಗಳನ್ನು ಸಲ್ಲಿಸಿ, ಸ್ವತಹಾ ವಾದ ಮಂಡಿಸಿದರು. ಅಂತಿಮವಾಗಿ ಎ.ಸಿ. ಕೋರ್ಟ್ (ಎ.ಸಿ. ಶಿಲ್ಪಾ ನಾಗ್, ಐ.ಎ.ಎಸ್.) ಉಡುಪಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಿದ ಮ್ಯುಟೇಶನ್ ಮತ್ತು ಪಹಣಿ ಬದಲಾವಣೆ ಸಹಿತ ಇತರ ಎಲ್ಲಾ ತಪ್ಪು ಪ್ರಕ್ರಿಯೆಗಳನ್ನು ರದ್ದುಪಡಿಸಿತು. ಮಾತ್ರವಲ್ಲ, ಸಂಬಂಧಿಸಿದ ಭೂಮಿ ಸರಕಾರದ್ದು ಎಂದು 2017ರ ಡಿಸೆಂಬರ್ 28ರಂದು ಆದೇಶ ನೀಡಿದರು.
ಶಿಲ್ಪಾ ನಾಗ್, ಐ.ಎ.ಎಸ್.
ಎ.ಸಿ. ಕೋರ್ಟ್ ಆದೇಶದ ವಿರುದ್ಧ ದಿವಂಗತ ಎ. ಅಚ್ಯುತನ್ ಅವರ ಪುತ್ರ ಅರವಿಂದ್ ಅವರು ಡಿ.ಸಿ. ಕೋರ್ಟ್ ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಡಿ. ಸಿ. ಕೋರ್ಟ್ (ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಐ.ಎ.ಎಸ್.)ನಲ್ಲಿಯೂ ಸಾಮಾಜಿಕ ಕಾರ್ಯಕರ್ತರೂ, ಮಾನವಹಕ್ಕು ಹೋರಾಟಗಾರರೂ ಆದ ಶ್ರೀರಾಮ ದಿವಾಣ ಅವರು ಸಮಗ್ರ ಕಡತಗಳೊಂದಿಗೆ ಸ್ವತಹಾ ವಾದಿಸಿದರು ಮತ್ತು ಪ್ರಕರಣ ಗೆದ್ದು, ಕಾಡಬೆಟ್ಟುವಿನ 2.29 ಎಕರೆ ಭೂಮಿ ಸರಕಾರಕ್ಕೆ ಸೇರಿದ್ದು ಎಂಬ ಆದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಹೈಕೋರ್ಟ್ ನಲ್ಲಿ ಮೊದಲು ತಡೆಯಾಜ್ಞೆ, ವಿಚಾರಣೆ ನಂತರ ರಿಟ್ ಪಿಟೀಷನ್ ವಜಾ
ಎ.ಸಿ. ಕೋರ್ಟ್ ಆದೇಶದ ವಿರುದ್ಧ ಅರವಿಂದ್ ಅವರು ಹೈ ಕೋರ್ಟ್ ಮೆಟ್ಟಿಲು ಹತ್ತಿದರು. ರಿಟ್ ಪಿಟಿಷನ್ ಸಲ್ಲಿಸಿ ಡಿ. ಸಿ. ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಪಡೆದುಕೊಂಡರು. ಕೆಲ ವರ್ಷ ಕಾಲ ಪ್ರಕರಣ ಪೆಂಡಿಂಗ್ ನಲ್ಲಿತ್ತಾದರೂ, 2026ರ ಜುಲೈ ಮತ್ತು ಆಗಸ್ಟ್ ನಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಆಗಸ್ಟ್ 31ರಂದು ಹೈ ಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರೇಶ್ ಅವರ ಬೆಂಚ್ ಅರವಿಂದ್ ಅವರ ರಿಟ್ ಪಿಟೀಷನ್ ನ್ನು ವಜಾಗೊಳಿಸಿ ತೀರ್ಪು ನೀಡಿತು.

